ಕಡುಬೇಸಗೆಯಲ್ಲಿ ವಾಹನದ ನಿರ್ವಹಣೆಯಲ್ಲಿ ಎಚ್ಚರವಿರಲಿ

Update: 2018-04-13 04:22 GMT

ಹೈದರಾಬಾದ್, ಎ.13: ವಾಹನದ ಹೆಡ್‌ಲ್ಯಾಂಪ್ ಬದಲಾವಣೆ, ಆಡಿಯೊ ಸಿಸ್ಟಂ ಅಳವಡಿಸಲು ವಿದ್ಯುತ್ ತಂತಿ ತಿರುಚುವುದು ಅಥವಾ ಇತರ ನಕಲಿ ಬಿಡಿಭಾಗಗಳನ್ನು ವಾಹನಕ್ಕೆ ಅಳವಡಿಸುವುದರಿಂದ ಮಾರಣಾಂತಿಕ ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ. ಕೆಲವೊಮ್ಮೆ ಇಡೀ ನಿಮ್ಮ ವಾಹನವನ್ನು ಇದು ಭಸ್ಮ ಮಾಡಬಲ್ಲದು. ಈ ಹಿನ್ನೆಲೆಯಲ್ಲಿ ವಾಹನದ ಅಧಿಕೃತ ಬಿಡಿಭಾಗಗಳನ್ನೇ ಬಳಸುವುದು ಅಗತ್ಯ. ಜತೆಗೆ ಕಡುಬೇಸಿಗೆಯಲ್ಲಿ ವಾಹನವನ್ನು ಸೂಕ್ತವಾಗಿ ನಿರ್ವಹಿಸದಿದ್ದರೆ ಅದು ಕೂಡಾ ಬೆಂಕಿ ಅನಾಹುತಕ್ಕೆ ಕಾರಣವಾಗಬಹುದು.

ಇತ್ತೀಚೆಗೆ ಹೈದರಾಬಾದ್‌ನಲ್ಲಿ ದ್ವಿಚಕ್ರ ವಾಹನವೊಂದಕ್ಕೆ ನಿಗೂಢವಾಗಿ ಬೆಂಕಿ ಹತ್ತಿಕೊಂಡು 19 ವರ್ಷದ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದ. ಕಡುಬೇಸಿಗೆಯಲ್ಲಿ ವಾಹನಗಳಿಗೆ ಬೆಂಕಿ ಹತ್ತಿಕೊಳ್ಳುವ ಘಟನೆಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ.

ಈ ಬಗ್ಗೆ ತಾಂತ್ರಿಕ ತಜ್ಞರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿದಾಗ ಕುತೂಹಲಕರ ವಿಚಾರ ಬೆಳಕಿಗೆ ಬಂದಿದೆ. "ಕಾರಿನ ಒಳಗೆ ಇಡುವ ಪಾರದರ್ಶಕ ಬಾಟಲಿ ನಿಮ್ನ ಮಸೂರವಾಗಿ ಸೂರ್ಯ ಕಿರಣಗಳನ್ನು ಒಂದೇ ಬಿಂದುವಿನ ಪ್ರಬಲ ಕಿರಣವಾಗಿ ಮಾರ್ಪಡಿಸಬಲ್ಲದು. ಇದರಿಂದ ಸೀಟ್ ಕವರ್ ಬಿಸಿಯಾಗುತ್ತದೆ. ಯಾವುದೇ ದಹಿಸುವ ವಸ್ತುವಿನ ಸಂಪರ್ಕವಾದಾಗ ತಕ್ಷಣ ಬೆಂಕಿ ಹತ್ತಿಕೊಳ್ಳುತ್ತದೆ" ಎಂದು ಸೊಸೈಟಿ ಆಫ್ ಇಂಡಿಯನ್ ಆಟೊಮೊಬೈಲ್ ಮ್ಯಾನ್ಯುಫ್ಯಾಕ್ಚರರ್ಸ್‌ (ಎಸ್‌ಐಎಎಂ) ತಜ್ಞರೊಬ್ಬರು ವಿವರಿಸಿದ್ದಾರೆ.

ಎಲೆಕ್ಟ್ರಿಕಲ್ ಮೆಕ್ಯಾನಿಕ್ ಮುಹಮ್ಮದ್ ಜಾವೇದ್ ಹೇಳುವಂತೆ, ಕಾರುಗಳ ಎಲೆಕ್ಟ್ರಿಕಲ್ ಸಂಪರ್ಕ ಸಮರ್ಪಕಾಗಿ ಕಾರ್ಯನಿರ್ವಹಿಸದಿರುವುದು ಕೂಡಾ ಬೆಂಕಿ ಹತ್ತಿಕೊಳ್ಳಲು ಕಾರಣವಾಗುತ್ತದೆ. "ಕೆಲ ಮೆಕ್ಯಾನಿಕ್‌ಗಳು ಅನುಕೂಲಕ್ಕಾಗಿ ಕಪ್ಲರ್ ಹಾಗೂ ಫ್ಯೂಸ್‌ಗಳನ್ನು ಬಳಸದೇ ಎಲೆಕ್ಟ್ರಿಕಲ್ ಸಂಪರ್ಕ ಮಾರ್ಪಡಿಸುತ್ತಾರೆ. ಇದು ಎಲೆಕ್ಟ್ರಿಕ್ ಶಾರ್ಟ್ ಸರ್ಕ್ಯೂಟ್‌ಗೆ ಕಾರಣವಾಗಿ ಬೆಂಕಿ ಅನಾಹುತ ಸಂಭವಿಸಬಹುದು".

ಕೆಲವೊಮ್ಮೆ ಟ್ಯಾಂಕ್‌ನಿಂದ ಪೆಟ್ರೋಲ್ ಸೋರಿಕೆ ಕೂಡಾ ಬೆಂಕಿ ಅನಾಹುತಕ್ಕೆ ಕಾರಣವಾಗಬಹುದು ಎಂದು ಎಚ್ಚರಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News