65ನೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಶ್ರೀದೇವಿಗೆ ಅತ್ಯುತ್ತಮ ನಟಿ ಪ್ರಶಸ್ತಿ

Update: 2018-04-13 13:49 GMT

ಹೊಸದಿಲ್ಲಿ, ಎ. 13: ಪ್ರತಿಷ್ಠಿತ 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಶುಕ್ರವಾರ ಘೋಷಣೆಯಾಗಿದ್ದು, ಚಲನಚಿತ್ರರಂಗದ ಅತ್ಯುನ್ನತ ಪುರಸ್ಕಾರ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ (ಮರಣೋತ್ತರ)ಗೆ ಬಾಲಿವುಡ್‌ನ ಮೇರು ನಟ, ನಿರ್ಮಾಪಕ ವಿನೋದ್ ಖನ್ನಾ ಆಯ್ಕೆಯಾಗಿದ್ದಾರೆ. ‘ಮೋಮ್’ ಚಿತ್ರದ ನಟನೆಗಾಗಿ ದಿವಂಗತ ಶ್ರೀದೇವಿ ಅತ್ಯುತ್ತಮ ನಟಿ ಪ್ರಶಸ್ತಿ (ಮರಣೋತ್ತರ)ಗೆ ಪಾತ್ರರಾಗಿದ್ದಾರೆ.

ಹೊಸದಿಲ್ಲಿಯ ಶಾಸ್ತ್ರಿ ಭವನದಲ್ಲಿ ಪತ್ರಿಕಾ ಮಾಹಿತಿ ಬ್ಯೂರೊದ (ಪಿಐಬಿ) ಕಾನ್ಫರೆನ್ಸ್ ಕೊಠಡಿಯಲ್ಲಿ ರಾಷ್ಟ್ರಪ್ರಶಸ್ತಿ ಸಮಿತಿ ಮುಖ್ಯಸ್ಥ ಹಾಗೂ ಖ್ಯಾತ ನಿರ್ದೇಶಕ ಶೇಖರ್ ಕಪೂರ್ ಈ ಪ್ರಶಸ್ತಿ ಪ್ರಕಟಿಸಿದರು.

ರಿಮಾ ದಾಸ್ ಅವರ ಅಸ್ಸಾಮಿ ಚಲನಚಿತ್ರ ‘ವಿಲೇಜ್ ರಾಕ್‌ಸ್ಟಾರ್ಸ್‌’ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದೆ. ‘ನ್ಯೂಟನ್’ ಹಿಂದಿಯ ಅತ್ಯುತ್ತಮ ಚಲಚನಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದೆ. ‘ನಾಗರ್‌ಕೀರ್ತನ್’ ಚಲನಚಿತ್ರದ ನಟನೆಗಾಗಿ ರಿದ್ಧಿ ಸೇನ್ ಅತ್ಯುತ್ತಮ ನಟ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ‘ಕಾಟ್ರು ವೆಲಿಯಿದೈ ಚಲನಚಿತ್ರದ ಸಂಗೀತ ನಿರ್ದೇಶನ ಹಾಗೂ ‘ಮೋಮ್’ ಚಲನಚಿತ್ರದ ಹಿನ್ನೆಲೆ ಸಂಗೀತಕ್ಕೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹ್ಮಾನ್ ರಾಷ್ಟ್ರಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಅವರು ಸಂಗೀತ ನಿರ್ದೇಶನಕ್ಕೆ 6 ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡ ಏಕೈಕ ಸಂಗೀತ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ.

ಕನ್ನಡದ ಅತ್ಯುತ್ತಮ ಚಲನಚಿತ್ರವಾಗಿ ‘ಹೆಬ್ಬೆಟ್ ರಾಮಕ್ಕ’ ಹಾಗೂ ತುಳುವಿನ ಅತ್ಯುತ್ತಮ ಚಲನಚಿತ್ರವಾಗಿ ‘ಪಡ್ಡಾಯಿ’ ಆಯ್ಕೆಯಾಗಿದೆ. 10 ಸದಸ್ಯರ ಆಯ್ಕೆ ಸಮಿತಿಯಲ್ಲಿ ಕನ್ನಡ ಚಲನಚಿತ್ರ ನಿರ್ದೇಶಕ ಪಿ. ಶೇಷಾದ್ರಿ, ಚಿತ್ರಕತೆ ರಚನೆಕಾರ ಇಮ್ತಿಯಾಝ್ ಹುಸೈನ್, ನಟಿ ಗೌತಮಿ ತಡಿಮಲ್ಲ, ಗೀತರಚನೆಕಾರ ಮೆಹಬೂಬ್, ಅನಿರುದ್ಧ ರಾಯ್ ಚೌಧರಿ, ರಂಜಿತ್ ದಾಸ್, ರಾಜೇಶ್ ಮಪುಸ್ಕರ್, ತ್ರಿಪುರಾರಿ ಶರ್ಮಾ ಮತ್ತು ರೂಮಿ ಜಾಫ್ರಿ ಇದ್ದರು. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಮೇ 3ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪುರಸ್ಕೃತರಿಗೆ ಪ್ರದಾನ ಮಾಡಲಿದ್ದಾರೆ.

ಹೆಬ್ಬೆಟ್ ರಾಮಕ್ಕ

 ಎನ್.ಆರ್ ನಂಜುಂಡೆ ಗೌಡ ನಿರ್ದೇಶನದ ‘ಹೆಬ್ಬೆಟ್ ರಾಮಕ್ಕ’ ಚಲನಚಿತ್ರ ಅನಕ್ಷರಸ್ಥ ಮಹಿಳೆ ರಾಜಕೀಯ ರಂಗಕ್ಕೆ ಬಂದಾಗ ಯಾವ ರೀತಿಯ ಸಮಸ್ಯೆ ಎದುರಿಸಬೇಕಾಗುತ್ತದೆ ಎಂಬುದನ್ನು ಹೇಳುತ್ತದೆ. ನಟಿ ತಾರಾ ಹೆಬ್ಬೆಟ್ ರಾಮಕ್ಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇತರ ತಾರಾಗಣದಲ್ಲಿ ದೇವರಾಜ್, ಹನುಮಂತ ಗೌಡ್ರು, ನಾಗರಾಜ್ ಮೊದಲಾದವರು ಇದ್ದಾರೆ.

ಪಡ್ಡಾಯಿ

ಈ ಚಲನಚಿತ್ರಕ್ಕೆ ಶೇಕ್ಸ್‌ಪಿಯರ್‌ನ ‘ಮ್ಯಾಕ್‌ಬೆತ್’ ನಾಟಕ ಸ್ಪೂರ್ತಿ. ‘ಮ್ಯಾಕ್‌ಬೆತ್’ ನಾಟಕದ ಕತೆಯನ್ನು ಇಲ್ಲಿನ ಕರಾವಳಿಯ ಮೀನುಗಾರರ ಬದುಕಿನಲ್ಲಿ ಉಂಟಾಗುತ್ತಿರುವ ತಲ್ಲಣಗಳನ್ನು ಹೇಳಲು ನಿರ್ದೇಶಕ ಅಭಯ ಸಿಂಹ ಬಳಸಿಕೊಂಡಿದ್ದಾರೆ. ಸಾಂಪ್ರದಾಯಿಕ ಮೀನುಗಾರಿಕೆ ತೊರೆದು ಆಧುನಿಕ ಯಂತ್ರಾಧರಿತ ಮೀನುಗಾರಿಕೆಗೆ ಆತುಕೊಂಡಾಗ ಕಡಲ ಜೀವಜಗತ್ತು ಹಾಗೂ ಮೊಗವೀರರ ಬದುಕಿನಲ್ಲಾಗುತ್ತಿರುವ ಪರಿವರ್ತನೆಯನ್ನು ಪಡ್ಡಾಯಿ ಹೇಳುತ್ತದೆ. ಗೋಪಿನಾಥ್ ಭಟ್, ಚಂದ್ರಹಾಸ ಉಳ್ಳಾಲ್, ಮೋಹನ್ ಶೇಣಿ, ವಾಣಿ ಪೆರಿಯೋಡಿ, ಶ್ರೀನಿಧಿ ಆಚಾರ್ ಮೊದಲಾದವರು ತಾರಾಗಣದಲ್ಲಿದ್ದಾರೆ.

ವಿನೋದ್ ಖನ್ನಾ

ವಿನೋದ್ ಖನ್ನಾ ‘ದಿ ಬರ್ನಿಂಗ್ ಟ್ರೈನ್’ ‘ಅಮರ್-ಅಕ್ಬರ್-ಆಂಥೋನಿ’ ಮೊದಲಾದ ಪ್ರಸಿದ್ಧ ಬಾಲಿವುಡ್ ಚಿತ್ರಗಳಲ್ಲಿ ಅಭಿನಯಿಸಿದ್ದರು. 1946 ಅಕ್ಟೋಬರ್ 6ರಂದು ಜನಿಸಿದ್ದ ಅವರು 1968ರಲ್ಲಿ ಚಿತ್ರರಂಗ ಪ್ರವೇಶಿಸಿದ್ದರು. ಅವರು ಮೇರೆ ಆಪ್ನೆ, ಮೇರಾ ಗಾಂವ್ ಮೇರಾ ದೇಶ್, ಗದ್ದಾರ್, ಜೈಲ್ ಯಾತ್ರಾ, ಇಮ್ತಿಹಾನ್, ಮುಕದ್ದರ್ ಕಾ ಸಿಕಂದರ್ ಮೊದಲಾದ 140ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು.

#ವಿನೋದ್ ಖನ್ನಾರಿಗೆ ದಾದಾಸಾಹೇಬ್ ಫಾಲ್ಕೆ ಗೌರವ

ಹೊಸದಿಲ್ಲಿ, ಎ.13: 65ನೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟಗೊಂಡಿದ್ದು, ‘ಮಾಮ್’ ಚಿತ್ರದ ನಟನೆಗಾಗಿ ನಟಿ ಶ್ರೀದೇವಿಯವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಂದಿದೆ. ಇದೇ ಸಂದರ್ಭ ನಟ ವಿನೋದ್ ಖನ್ನಾರಿಗೆ ಮರಣೋತ್ತರ ದಾದಾಸಾಹೇಬ್ ಫಾಲ್ಕೆ ಗೌರವ ಪ್ರದಾನಿಸಲಾಯಿತು.

ಪ್ರಶಸ್ತಿ ವಿಜೇತರ ಪಟ್ಟಿ ಹೀಗಿದೆ:

ಅತ್ಯುತ್ತಮ ನಟಿ: ಶ್ರೀದೇವಿ (ಮಾಮ್)

ಅತ್ಯುತ್ತಮ ನಟ: ರಿದ್ಧಿ ಸೇನ್ (ನಗರ್ ಕೀರ್ತನ್)

ಅತ್ಯುತ್ತಮ ನಿರ್ದೇಶಕ: ಜಯರಾಜ್ (ಭಯಾನಕಂ)

ಅತ್ಯುತ್ತಮ ಸಾಹಸ ನಿರ್ದೇಶನ: ಬಾಹುಬಲಿ 2

ಅತ್ಯುತ್ತಮ ನೃತ್ಯ ಸಂಯೋಜನೆ: ಗಣೇಶ್ ಆಚಾರ್ಯ (ಗೋರಿ ತು ಲತ್ತ್ ಮಾರ್-ಟಾಯ್ಲೆಟ್ ಏಕ್ ಪ್ರೇಮ್ ಕಥಾ)

ಸ್ಪೆಷಲ್ ಜ್ಯೂರಿ ಅವಾರ್ಡ್: ನಗರ್ ಕೀರ್ತನ್ (ಬೆಂಗಾಲಿ)

ಉತ್ತಮ ಸಂಗೀತ ನಿರ್ದೇಶನ: ಎ.ಆರ್. ರಹ್ಮಾನ್ (ಕಾಟ್ರು ವೆಳಿಯಿಡೈ)

ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್: ಸಂತೋಷ್ ರಾಜನ್ (ಟೇಕ್ ಆಫ್)

ಅತ್ಯುತ್ತಮ ಸಂಕಲನ: ರೀಮಾ ದಾಸ್ (ವಿಲೇಜ್ ರಾಕ್ ಸ್ಟಾರ್)

ಅತ್ಯುತ್ತಮ ಚಿತ್ರಕಥೆ: ತೊಂಡಿಮುದಲುಂ ದ್ರಿಕ್ಸಾಕ್ಷಿಯುಂ

ಅತ್ಯುತ್ತಮ ಛಾಯಾಗ್ರಹಣ: ಭಯಾನಕಂ

ಅತ್ಯುತ್ತಮ ಹಿನ್ನೆಲೆ ಗಾಯಕಿ: ಸಾಶಾ ತ್ರಿಪಾಠಿ (ಕಾಟ್ರು ವೆಳಿಯಿಡೈ)

ಅತ್ಯುತ್ತಮ ಹಿನ್ನೆಲೆ ಗಾಯಕ: ಯೇಸುದಾಸ್ (ಪೋಯ್ ಮರಞ್ಞ ಕಾಲಂ)

ಅತ್ಯುತ್ತಮ ಬಾಲನಟಿ: ಅನಿತಾ ದಾಸ್ (ವಿಲೇಜ್ ರಾಕ್ ಸ್ಟಾರ್)

ಅತ್ಯುತ್ತಮ ಮಕ್ಕಳ ಚಿತ್ರ: ಮೋರ್ಕ್ಯಾ

ಅತ್ಯುತ್ತಮ ನಿರ್ದೇಶನ: ಜಯರಾಜ್ (ಭಯಾನಕಂ)

ಅತ್ಯುತ್ತಮ ಪ್ರಾದೇಶಿಕ ಚಿತ್ರಗಳು (ವಿಶೇಷ)

ಮರಾಠಿ-ಮೋರ್ಕ್ಯಾ

ಮಲಯಾಳಂ: ಟೇಕ್ ಆಫ್

ಅತ್ಯುತ್ತಮ ಪ್ರಾದೇಶಿಕ ಚಿತ್ರಗಳು

ಲಡಾಖ್-ವಾಕಿಂಗ್ ವಿತ್ ದ ವೈಂಡ್

ಲಕ್ಷದ್ವೀಪ್-ಸಿಂಜಾರ್

ತುಳು-ಪಡ್ಡಾಯಿ

ಮರಾಠಿ-ಕಚ್ಚಾ ಲಿಂಬೂ

ಮಲಯಾಳಂ- ತೊಂಡಿಮುದಲುಂ ದ್ರಿಕ್ಸಾಕ್ಷಿಯುಂ

ಕನ್ನಡ-ಹೆಬ್ಬೆಟ್ಟು ರಾಮಕ್ಕ

ಬೆಂಗಾಲಿ-ಮಯೂರಾಕ್ಷಿ

ಅಸ್ಸಾಮೀ-ಇಶು

ತೆಲುಗು-ಗಾಝಿ

ಒಡಿಯಾ-ಹೆಲೋ ಅರ್ಸಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News