ಮಾಲಿವುಡ್‌ಗೆ ಅನುಷ್ಕಾ ಶೆಟ್ಟಿ

Update: 2018-04-13 17:48 GMT

ಬಾಹುಬಲಿ ಮೂಲಕ ಭಾರತದಾದ್ಯಂತ ಜನಪ್ರಿಯತೆ ಪಡೆದಿರುವ ಅನುಷ್ಕಾ ಶೆಟ್ಟಿ, ಇದೀಗ ಮಾಲಿವುಡ್‌ಗೂ ಕಾಲಿಡುತ್ತಿದ್ದಾರೆ. ಹೌದು. ಸದ್ಯದಲ್ಲೇ ಮಲಯಾಳಂ ಚಿತ್ರವೊಂದರಲ್ಲಿ ನಟಿಸಲು ಅವರು ಕಾಲ್‌ಶೀಟ್ ನೀಡಿದ್ದಾರೆ. ಸೂಪರ್‌ಸ್ಟಾರ್ ಮುಮ್ಮುಟ್ಟಿ ಈ ಚಿತ್ರದ ನಾಯಕ. ಬಾಕ್ಸ್ ಆಫೀಸ್‌ನಲ್ಲಿ ಪರವಾ ಇಲ್ಲ ಎನಿಸಿದ್ದ ‘ಪರೋಲ್’ನ ನಿರ್ದೇಶಕ ಶರತ್ ನಂದಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಮಮ್ಮುಟ್ಟಿ ಹಾಗೂ ಅನುಷ್ಕಾ ಅಭಿನಯದ ಇನ್ನೂ ಹೆಸರಿಡದ ಈ ಚಿತ್ರದ ಬಗ್ಗೆ ನಿರ್ದೇಶಕ ಶರತ್ ನಂದಿ ವೆಬ್‌ಸೈಟೊಂದರಲ್ಲಿ ವಿವರಗಳನ್ನು ನೀಡಿದ್ದಾರೆ.

ನಾಯಕ ಪ್ರಧಾನ ಚಿತ್ರವಾದರೂ, ನಾಯಕಿ ಪಾತ್ರಕ್ಕೂ ಪ್ರಾಧಾನ್ಯತೆಯಿದೆಯೆಂದು ನಿರ್ದೇಶಕರು ತಿಳಿಸಿದ್ದಾರೆ. ಇಷ್ಟಕ್ಕೂ ನಿರ್ದೇಶಕ ಶರತ್ ನಂದಿಯವರಿಗೆ, ಪರೋಲ್‌ಗೆ ಮೊದಲೇ ಈ ಬಿಗ್‌ಪ್ರಾಜೆಕ್ಟ್‌ನ್ನು ಕೈಗೆತ್ತಿಕೊಳ್ಳುವ ಯೋಚನೆಯಿತ್ತಂತೆ. ಆದರೆ ಮಮ್ಮುಟ್ಟಿ ಹಾಗೂ ಅನುಷ್ಕಾರ ಡೇಟ್ಸ್ ಲಭ್ಯವಾಗದ ಕಾರಣ, ಅದನ್ನು ಮುಂದೂಡಿದ್ದರಂತೆ. ಈಗ ಕಾಲಕೂಡಿಬಂದಿದೆ. ಇನ್ನೇನು ಮೇ ತಿಂಗಳೊಳಗೆ ಚಿತ್ರ ಸೆಟ್ಟೇರುವುದು ಖಚಿತವಾಗಿದೆ.

ಪ್ರಮುಖ ನಾಯಕ ನಟರಿಲ್ಲದೆ ಅನುಷ್ಕಾ ಮುಖ್ಯಪಾತ್ರದಲ್ಲಿ ನಟಿಸಿರುವ ಅರುಂಧತಿ, ರುದ್ರಮ್ಮಾದೇವಿ ಹಾಗೂ ಭಾಗ್‌ಮತಿ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗೆಲುವು ಕಂಡಿದ್ದವು. ಇದೀಗ ಮಮ್ಮುಟ್ಟಿ ಜೊತೆ ಅನುಷ್ಕಾ ನಟಿಸುತ್ತಿರುವ ಈ ಚಿತ್ರದ ಬಗ್ಗೆ ಈಗಾಗಲೇ ಮಲಯಾಳಂ ಚಿತ್ರರಂಗದಲ್ಲಿ ಭಾರೀ ಕೂತೂಹಲ ಉಂಟಾಗಿದೆ.ಬಾಕ್ಸ್‌ಆಫೀಸ್‌ನಲ್ಲಿ ಗೆಲ್ಲುವ ತಾರೆಯಾದ ಅನುಷ್ಕಾ, ಮಲಯಾಳಂನಲ್ಲೂ ತನ್ನ ಗೆಲುವಿನ ದಾಖಲೆಯನ್ನು ಪುನರಾವರ್ತಿಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News