ಕಾಮಿಡಿ ಚಿತ್ರ ನಿರ್ಮಿಸಲಿರುವ ಅನುಷ್ಕಾ ಶರ್ಮಾ

Update: 2018-04-13 18:47 GMT

ವಿವಾಹದ ಬಳಿಕವೂ ಅನುಷ್ಕಾ ಶರ್ಮಾ ಬಿಡುವಿಲ್ಲದ ತಾರೆಯಾಗಿ ಮುಂದುವರಿದಿದ್ದಾರೆ. ತನ್ನ ಅಭಿನಯದ ಝೀರೋ, ಸುಯಿ ಧಗಾ: ಮೇಡ್ ಇನ್ ಇಂಡಿಯಾ ಹಾಗೂ ಸಂಜಯ್‌ದತ್ತ್ ಬಯೋಪಿಕ್ ಚಿತ್ರಗಳ ಶೂಟಿಂಗ್ ಭರದಿಂದ ಸಾಗುತ್ತಿರುವಂತೆಯೇ ಅನುಷ್ಕಾ ಶರ್ಮಾ ಪ್ರೇಕ್ಷಕರಿಗೊಂದು ಅಚ್ಚರಿಯ ಸುದ್ದಿ ನೀಡಿದ್ದಾರೆ. ಆಕೆ ಸದ್ಯದಲ್ಲೇ ಪಕ್ಕಾ ಕಾಮಿಡಿ ಚಿತ್ರವೊಂದಕ್ಕೆ ಬಣ್ಣ ಹಚ್ಚಲಿದ್ದಾರೆ. ಹಿಂದೆಂದೂ ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಂಡಿರದ ಅನುಷ್ಕಾ ಈ ಚಿತ್ರದಲ್ಲಿ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಲಿದ್ದಾರೆ. ಅನುಷ್ಕಾಗೆ ಬಹಳ ಸಮಯದಿಂದಲೇ ಕಾಮಿಡಿ ಚಿತ್ರವೊಂದರಲ್ಲಿ ನಟಿಸುವ ಆಸೆಯಿತ್ತಂತೆ. ಆದರೆ ಸೂಕ್ತವಾದ ಕಥೆಗಾಗಿ ಅವರು ಕಾಯುತ್ತಿದ್ದರು. ಇದೀಗ ಅವರ ಹಂಬಲ ಈಡೇರಿದೆ. ತನ್ನ ಸ್ವಂತ ಬ್ಯಾನರ್‌ನಲ್ಲೇ ಈ ಚಿತ್ರವನ್ನು ಆಕೆ ತನ್ನ ಸಹೋದರ ಕರ್ಣೇಶ್ ಜೊತೆಗೂಡಿ ನಿರ್ಮಿಸಲಿದ್ದಾರೆ. ಇದಲ್ಲದೆ ಇನ್ನೂ ಎರಡು ಚಿತ್ರಗಳ ನಿರ್ಮಾಣವನ್ನು ಕೂಡಾ ಆಕೆ ಶೀಘ್ರದಲ್ಲೇ ಘೋಷಿಸಲಿದ್ದಾರೆ.

ಅನುಷ್ಕಾ ತನ್ನ ಹೋಮ್‌ಬ್ಯಾನರ್‌ನಲ್ಲಿ ನಿರ್ಮಿಸಿದ ಚೊಚ್ಚಲ ಚಿತ್ರ ಎನ್‌ಎಚ್ 17 ಭರ್ಜರಿ ಯಶಸ್ಸು ಕಂಡಿದ್ದಲ್ಲದೆ, ವಿಮರ್ಶಕರ ಮೆಚ್ಚುಗೆಗೂ ಪಾತ್ರವಾಗಿತ್ತು. ಆಕೆ ನಿರ್ಮಿಸಿದ ಹಾರರ್ ಚಿತ್ರ ‘ಪರಿ’ ಕೂಡಾ ಬಾಕ್ಸ್‌ಆಫೀಸ್‌ನಲ್ಲಿ ಪರವಾ ಇಲ್ಲ ಎನಿಸಿಕೊಂಡಿದೆ. ಒಟ್ಟಿನಲ್ಲಿ ಈ ವರ್ಷ ವಲ್ಲದೆ 2019ರಲ್ಲೂ ಬಾಲಿವುಡ್‌ನಲ್ಲಿ ಅನುಷ್ಕಾ ಶರ್ಮಾ ಹವಾ ಮುಂದುವರಿಯುವುದು ಖಚಿತವಾದಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News