ನೀವು ಪ್ರವಾಸ ಪ್ರಿಯರೇ? ಹಾಗಿದ್ದರೆ ಒಂದು ಬಾರಿಯಾದರೂ ಈ 'ಟಾಯ್ ಟ್ರೇನ್' ಗಳಲ್ಲಿ ಸಂಚರಿಸಿ...

Update: 2018-04-14 14:39 GMT

ಬೇಸಿಗೆಯ ಧಗೆ ಅಸಹನೀಯವಾಗಿದೆಯೇ? ಯಾವುದಾದರೂ ಗಿರಿಧಾಮಕ್ಕೆ ತೆರಳಿ ಹಾಯಾಗಿ ಉಳಿಯುವ ವಿಚಾರವಿದೆಯೇ? ಹಾಗಿದ್ದರೆ ಶಿಮ್ಲಾ, ದಾರ್ಜಿಲಿಂಗ್ ಮತ್ತಿತರ ಗಿರಿಧಾಮಗಳಿಗಾಗಿ ಈ ರೈಲುಗಳನ್ನು ಹತ್ತಿ. ಅವು ನಿಧಾನವಾಗಿ ಚಲಿಸುತ್ತವೆ,ನಿಜ. ಆದರ ಅದು ಅದ್ಭುತ ಪ್ರಯಾಣವಾಗಿದ್ದು, ನೀವು ಹಿಂದೆಂದೂ ಕಂಡಿರದ ಭಾರತವನ್ನು ದರ್ಶನ ಮಾಡಿಸುತ್ತದೆ.

►ನೀಲಗಿರಿ ವೌಂಟೇನ್ ರೈಲು, ತಮಿಳುನಾಡು

ಉದಕಮಂಡಲಂ ಅಥವಾ ಊಟಿ ಗಿರಿಧಾಮಗಳ ರಾಣಿ ಎಂದೇ ಪ್ರಸಿದ್ಧವಾಗಿದೆ. ನೀಲಗಿರಿ ವೌಂಟೇನ್ ರೈಲಿನಲ್ಲಿ ಅಲ್ಲಿಗೆ ಪ್ರಯಾಣಿಸುವುದು ನಿಮಗೆ ನೀವೇ ರಾಜಾತಿಥ್ಯ ಕೊಟ್ಟುಕೊಂಡಂತೆ. ಸ್ಟೀಮ್ ಇಂಜಿನ್‌ನೊಡನೆ ನ್ಯಾರೋಗೇಜ್‌ನಲ್ಲಿ ಚಲಿಸುವ ಈ ರೈಲು ತನ್ನ ಹಾದಿಯುದ್ದಕ್ಕೂ ಬಯಲು ಪ್ರದೇಶಗಳು, ಚಹಾ ತೋಟಗಳು ಮತ್ತು ಅರಣ್ಯದಿಂದ ಕೂಡಿದ ಗುಡ್ಡಗಳ ನಡುವೆ ಬಳುಕುತ್ತ ಬಾಗುತ್ತ ನಿಮ್ಮನ್ನು ಊಟಿಗೆ ತಲುಪಿಸುತ್ತದೆ.

 2005ರಲ್ಲಿ ಯನೆಸ್ಕೋದಿಂದ ವಿಶ್ವ ಪರಂಪರೆ ತಾಣವೆಂದು ಘೋಷಿಸಲ್ಪಟ್ಟಿರುವ ಈ ರೈಲು 16 ಸುರಂಗಗಳು ಮತ್ತು ಎತ್ತರದ ಸೇತುವೆಗಳ ಮೂಲಕ ಸಾಗುತ್ತದೆ. ರೈಲಿನ ಗರಿಷ್ಠ ವೇಗ ಪ್ರತಿ ಗಂಟೆಗೆ 33 ಕಿ.ಮೀ.ಗಳು. ಹೀಗಾಗಿ ಅದ್ಭುತ ನಿಸರ್ಗ ಸೌಂದರ್ಯವನ್ನು ಆಸ್ವಾದಿಸಲು ಬೇಕಾದಷ್ಟು ಸಮಯ ನಿಮಗೆ ದೊರೆಯುತ್ತದೆ. ಮಾರ್ಗದುದ್ದಕ್ಕೂ ಮರಗಳಿಂದ ಮರಗಳಿಗೆ ಜಿಗಿಯುವ ನೀಲಗಿರಿ ಲಂಗೂರ್ ಮತ್ತು ಮಕಾಕೀ ಮಂಗಗಳು ನಿಮಗೆ ಖಂಡಿತ ಮುದ ನೀಡುತ್ತವೆ. ಮೆಟ್ಟುಪಾಳ್ಯಂ-ಊಟಿ ನಡುವೆ ಸಂಚರಿಸುವ ಈ ರೈಲು 46 ಕಿ.ಮೀ.ಗಳನ್ನು ಕ್ರಮಿಸಲು ಐದು ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

►ಕಾಲ್ಕಾ-ಶಿಮ್ಲಾ ರೈಲು, ಹಿಮಾಚಲ ಪ್ರದೇಶ

  ಕಾಲ್ಕಾ-ಶಿಮ್ಲಾ ನಡುವಿನ 96 ಕಿ.ಮೀ.ಉದ್ದದ ತನ್ನ ಮಾರ್ಗದಲ್ಲಿ ಈ ರೈಲು 107 ಸುರಂಗಗಳು ಮತ್ತು ಕಮಾನುಗಳ ಸೇತುವೆಗಳನ್ನು ಹಾದು ಹೋಗುತ್ತದೆ. ದಾರಿಯಲ್ಲಿ ಅಸಂಖ್ಯಾತ ‘ಎಸ್’ಆಕಾರದ ತಿರುವುಗಳೂ ಇದ್ದು, ಇವುಗಳಿಗೆ ಕೊನೆಯೇ ಇಲ್ಲವೇ ಎಂದು ಅನ್ನಿಸುತ್ತದೆ. ಈ ರೈಲು ತನ್ನ ಗಮ್ಯವನ್ನು ತಲುಪಲು ಆರು ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

►ಮಾಥೆರಾನ್ ಹಿಲ್ ರೈಲು, ಮಹಾರಾಷ್ಟ್ರ

ನೇರಲ್‌ನಿಂದ ಮಾಥೆರಾನ್‌ವರೆಗಿನ ನ್ಯಾರೋಗೇಜ್ ಮಾರ್ಗದಲ್ಲಿಯ ಪಯಣ ನಿಜಕ್ಕೂ ಅದ್ಭುತ ಅನುಭವವನ್ನು ನೀಡುತ್ತದೆ. 77 ವರ್ಷಗಳಷ್ಟು ಹಳೆಯದಾದ ಈ ರೈಲುಮಾರ್ಗವು ಪಶ್ಚಿಮ ಘಟ್ಟಗಳಲ್ಲಿರುವ ಮಾಥೆರಾನ್‌ಗೆ ಪ್ರಮುಖ ಪ್ರವೇಶ ಮಾರ್ಗವಾಗಿದೆ. 23 ಕಿ.ಮೀ.ಗಳ ಈ ಪ್ರಯಾಣಕ್ಕೆ ತಗಲುವ ಅವಧಿ ಒಂದೂವರೆ ಗಂಟೆಗಳು

►ದಾರ್ಜಿಲಿಂಗ್ ಹಿಮಾಲಯನ್ ರೈಲು, ಪಶ್ಚಿಮ ಬಂಗಾಳ

ಭಾರತದ ಟಾಯ್‌ಟ್ರೇನ್ ಮಾರ್ಗಗಳಲ್ಲಿ ಅತ್ಯಂತ ಪ್ರಸಿದ್ಧವಾಗಿರುವ ದಾರ್ಜಿಲಿಂಗ್ ಹಿಲ್ ರೈಲುಮಾರ್ಗವು ನ್ಯಾರೋದಲ್ಲಿಯೇ ನ್ಯಾರೋಗೇಜ್ ಎಂಬ ಹೆಗ್ಗಳಿಕೆಯನ್ನೂ ಹೊಂದಿದೆ. ಎರಡೂ ಹಳಿಗಳ ನಡುವಿನ ಅಂತರ ಎರಡು ಅಡಿಗಳಷ್ಟೂ ಇಲ್ಲದ ಈ ಮಾರ್ಗದಲ್ಲಿ ರೈಲು ಪರ್ವತಗಳ ಮೂಲಕ ಅಂಕುಡೊಂಕಾಗಿ ಸಾಗುತ್ತಿರುವಾಗ ದೊರೆಯುವ ಮಜಾನೇ ಬೇರೆ. ಅಂದ ಹಾಗೆ ರೈಲನ್ನು ಎಳೆಯುವ ಪುಟಾಣಿ ಸ್ಟೀಮ್ ಇಂಜಿನ್‌ಗೂ ಈ ಮಾರ್ಗದಷ್ಟೇ ವಯಸ್ಸಾಗಿದೆ.

  2,258 ಅಡಿ ಎತ್ತರದ ಘೂಮ್‌ನಲ್ಲಿರುವ ತಿರುವು ಜೀವಮಾನದಲ್ಲಿಯೇ ಮರೆಯಲಾಗದ ದೃಶ್ಯವನ್ನು ಒದಗಿಸುತ್ತದೆ. ಮೋಡಗಳಿಲ್ಲದ ಶುಭ್ರ ವಾತಾವರಣದ ದಿನಗಳಲ್ಲಿ ಹಿಮಾಲಯವೂ ನಿಮ್ಮಂದಿಗೆ ಸಾಗುತ್ತಿರುತ್ತದೆ ಮತ್ತು ವಿಶ್ವದ ಮೂರನೇ ಅತಿ ಎತ್ತರದ ಶಿಖರವಾಗಿರುವ ಕಾಂಚನಗಂಗಾವನ್ನು ನೋಡಿ ಧನ್ಯರಾಗಬಹುದು. ನ್ಯೂ ಜಲಪೈಗುರಿಯಿಂದ ಆರಂಭಗೊಂಡು ದಾರ್ಜಿಲಿಂಗ್‌ನಲ್ಲಿ ಅಂತ್ಯಗೊಳ್ಳುವ ಈ ಪಯಣ 7.5 ಗಂಟೆಗಳಲ್ಲಿ 86 ಕಿ.ಮೀ.ಗಳನ್ನು ಕ್ರಮಿಸುತ್ತದೆ.

►ಕಾಂಗ್ರಾ ವ್ಯಾಲಿ ರೈಲ್ವೆ, ಹಿಮಾಚಲ ಪ್ರದೇಶ

 ಪಠಾಣ್‌ಕೋಟ್‌ನಿಂದ ಜೋಗಿಂದರ್ ನಗರದವರೆಗೆ ಹಿಮಾಲಯದ ತಪ್ಪಲಲ್ಲಿ 950 ಸೇತುವೆಗಳನ್ನು ದಾಟುತ್ತ ಸಾಗುವ ಈ ರೈಲು ದಾರಿಯುದ್ದಕ್ಕೂ ಅಬಾಧಿತವಾಗಿ ಪರ್ವತಗಳ ದೃಶ್ಯಗಳನ್ನು ಉಣಬಡಿಸುತ್ತದೆ. ಭಾರತದ ಇತರ ಟಾಯ್ ಟ್ರೇನ್‌ಗಳು ಪ್ರವಾಸಿಗಳಲ್ಲಿ ಜನಪ್ರಿಯವಾಗಿದ್ದರೆ ಕಾಂಗ್ರಾ ವ್ಯಾಲಿ ರೈಲು ಮುಖ್ಯವಾಗಿ ಸ್ಥಳೀಯ ಜನರ ಅನುಕೂಲಕ್ಕಾಗಿ ಸಂಚರಿಸುತ್ತದೆ.

 10 ಗಂಟೆಗಳ, 163 ಕಿ.ಮೀ.ಉದ್ದದ ಈ ಪಯಣ ನಿಧಾನವಾಗಿದ್ದರೂ ಭಾರತೀಯ ಜೀವನದ ನಿಜವಾದ ಒಳನೋಟವನ್ನು ಒದಗಿಸುತ್ತದೆ. ಪ್ರಕೃತಿ ದೃಶ್ಯವಂತೂ ಅದ್ಭುತ, ಅದರ ಜೊತೆಗೆ ನೀವು ಪ್ರಾಚೀನ ಕೋಟೆಗಳು ಮತ್ತು ದೇವಸ್ಥಾನಗಳನ್ನೂ ಕಾಣಬಹುದು. ಪೈನ್‌ಮರಗಳ ಅರಣ್ಯ ಮತ್ತು ಚಹಾತೋಟಗಳ ಮೂಲಕವೂ ಈ ರೈಲು ಹಾದುಹೋಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News