ಕ್ಯೂರಿಯಾಸಿಟಿಯ ಅಂಚಿಗೆ ತರುವ 'ಮರ್ಕ್ಯುರಿ'

Update: 2018-04-15 07:33 GMT
Editor : ಶಶಿಕರ

'ಮರ್ಕ್ಯುರಿ' ಎಂದೊಡನೆ ನೆನಪಾಗುವುದು ಪಾದರಸ ಎನ್ನುವ ಕನ್ನಡದ ಅರ್ಥ. ಪಾದರಸ ಎನ್ನುವುದನ್ನು ಚುರುಕು ಎಂಬುವುದಕ್ಕೆ ಪರ್ಯಾಯವಾಗಿ ಬಳಸುತ್ತಾರೆ. ಚಿತ್ರದಲ್ಲಿ ಎರಡು ಅರ್ಥವನ್ನು ಕೂಡ ನೀಡುವ ಪ್ರಯತ್ನ ನಡೆದಿದೆ. ಐದು ಮಂದಿ ಯುವ ಸ್ನೇಹಿತರು ಒಂದು ರಾತ್ರಿ ಪಾರ್ಟಿ ನಡೆಸುತ್ತಾರೆ. ಅವರಲ್ಲಿ ಒಬ್ಬಳು ಹುಡುಗಿ. ಉಳಿದ ನಾಲ್ವರಲ್ಲಿ ಒಬ್ಬಾತ ಆಕೆಯ ಪ್ರಿಯಕರ. ವಿಪರ್ಯಾಸ ಎಂದರೆ ಅಷ್ಟು ಮಂದಿಯೂ ಕಿವಿ ಕೇಳದ, ಮಾತು ಬಾರದ ವ್ಯಕ್ತಿಗಳು. ಇವರೆಲ್ಲ ಆ ರಾತ್ರಿ ಒಂದು ಔಟಿಂಗ್ ಹೋಗುತ್ತಾರೆ. ಆ ಪ್ರಯಾಣ ಒಂದು ಅಪಘಾತಕ್ಕೆ ಕಾರಣವಾಗುತ್ತದೆ. ಅಪಘಾತ ಅಪರಿಚಿತನ ಸಾವಿನೊಂದಿಗೆ ಅವಸಾನವಾಗುತ್ತದೆ. ಆದರೆ ನಿಜಕ್ಕೂ ಆತ ಸಾಯುತ್ತಾನೋ? ಸತ್ತಿಲ್ಲವಾದರೆ ಆತನ ಹೆಣ ಎಲ್ಲಿ ಹೋಗುತ್ತದೆ? ಈ ಐದು ಜನರೊಂದಿಗೆ ಪ್ರತೀಕಾರ ತೀರಿಸಿಕೊಳ್ಳುವ ವ್ಯಕ್ತಿ ಯಾರು ಎನ್ನುವುದನ್ನು ತಿಳಿಯಬೇಕಾದರೆ ನೀವು ಚಿತ್ರ ನೋಡಬೇಕು.

ಮೂಕಚಿತ್ರ ಎಂಬ ಹೆಸರಿನಿಂದ ತೆರೆಕಂಡಿರುವ ಮರ್ಕ್ಯುರಿ ನಿಜದಲ್ಲಿ ನೋಡಿದರೆ ಮೂಕರ ಚಿತ್ರ. ಅದು ವಿಭಿನ್ನತೆ ಹೌದಾದರೂ ಪುಷ್ಪಕ ವಿಮಾನದಂಥ ವಿಶಾಲಾರ್ಥದ ಮೂಕ ಚಿತ್ರದ ನಿರೀಕ್ಷೆ ಇದ್ದವರಿಗೆ ಸೀಮಿತವಾದ ಘಟನೆ ಹೇಳುತ್ತದೆ ಚಿತ್ರ. ನಿರ್ದೇಶಕ ಕಾರ್ತಿಕ್ ಸುಬ್ಬರಾಜು ಈಗಾಗಲೇ ಭರವಸೆಯ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಕಾರಣ, ಇದು ಮರ್ಕ್ಯುರಿ ಎಫೆಕ್ಟ್ ಮೇಲಿನ ಕತೆ ಎಂದು ಹೇಳಿದಾಗ ಸಹಜವಾಗಿ ದೊಡ್ಡ ಮಟ್ಟದ ನಿರೀಕ್ಷೆಯನ್ನೇ ಇರಿಸಲಾಗಿತ್ತು. ಆದರೆ ಚಿತ್ರದಲ್ಲಿ ವೈಕಲ್ಯತೆಗೆ ಪಾದರಸ ಕಾರಣ ಎಂಬ ಅಂಶವನ್ನು ಬಲವಂತವಾಗಿ ತುರುಕಿದಂತೆ ಅನಿಸುತ್ತದೆ. ನಿರೀಕ್ಷೆಯಂತೆ ಚಿತ್ರದಲ್ಲಿ ಪ್ರಭುದೇವ್ ಪ್ರಮುಖ ಪಾತ್ರಧಾರಿ. ತೀರ ಸರಳವಾಗಿ ಆರಂಭವಾಗುವ ಕತೆ, ಪ್ರಭುದೇವ್ ಎಂಟ್ರಿಯೊಂದಿಗೆ ಪ್ರೇಕ್ಷಕರು ಮೈಮರೆತು ಚಿತ್ರ ನೋಡುವಂತೆ ಮಾಡುತ್ತದೆ.

ಬಹುಶಃ ಮೂಕ ಸಿನೆಮಾವೊಂದನ್ನು ವೀಕ್ಷಕರೆಲ್ಲರೂ ಮೂಕಪ್ರೇಕ್ಷಕರಂತೆ ಆಸಕ್ತಿಯಿಂದ ನೋಡುವುದು ಇದೇ ಪ್ರಥಮ ಬಾರಿ ಇರಬಹುದು. ಚಿತ್ರದಲ್ಲಿನ ಪಾತ್ರಗಳು ಮಾತನಾಡುವುದಿಲ್ಲ ಎಂಬ ಕಾರಣಕ್ಕಾಗಿ ಮಾತ್ರ ಇದು ಕನ್ನಡದ ಚಿತ್ರವಾಗಿಲ್ಲ. ಪ್ರಭುದೇವ್ ಮೂಲತಃ ಕನ್ನಡಿಗ ಎನ್ನುವ ಅಂಶದ ಜೊತೆಗೆ ಕನ್ನಡದ ಯುವ ನಟ ಶಶಾಂಕ್ ಅವರ ಸಾನಿಧ್ಯವೂ ಚಿತ್ರದಲ್ಲಿದೆ. ಮಾತ್ರವಲ್ಲ, ಚಿತ್ರವನ್ನು ಕನ್ನಡದಲ್ಲೇ ಸೆನ್ಸಾರ್ ಮಾಡಿರುವುದರಿಂದ ಶಾಸನ ವಿಧಿಸಿದ ಎಚ್ಚರಿಕೆಗಳು ಕೂಡ ಕನ್ನಡದಲ್ಲೇ ಇವೆ. ಪ್ರಭುದೇವ್ ನಟನೆ, ಹಿನ್ನೆಲೆ ಸಂಗೀತ, ಛಾಯಾಗ್ರಹಣ ಮತ್ತು ಗ್ರಾಫಿಕ್ ಕೆಲಸಗಳು ಚಿತ್ರದ ಪ್ರಮುಖ ಆಕರ್ಷಣೆ. ನವ ನಾಯಕಿ ಇಂದುಜಾ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ನೀಡಿದ ನಟನೆಯನ್ನು ಕೂಡ ಮರೆಯುವಂತಿಲ್ಲ. ಕ್ಲೈಮ್ಯಾಕ್ಸ್ ತನಕ ಆಸಕ್ತಿ ಹುಟ್ಟಿಸುತ್ತಾ ಸಾಗುವ ಚಿತ್ರದ ಅಂತಿಮ ದೃಶ್ಯಗಳು ಮಾತ್ರ ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುವಂತಿವೆ ಎನ್ನಬಹುದು. ಆದರೆ ಒಂದು ಪ್ರಯೋಗಾತ್ಮಕ ಚಿತ್ರ ಎಂಬ ನಿಟ್ಟಿನಲ್ಲಿ ನಿರ್ದೇಶಕರ ಪ್ರಯತ್ನವನ್ನು ಶ್ಲಾಘಿಸಲೇಬೇಕು.

ತಾರಾಗಣ: ಪ್ರಭುದೇವ್, ರಮ್ಯಾ ನಂಬೀಶನ್
ನಿರ್ದೇಶನ: ಕಾರ್ತಿಕ್ ಸುಬ್ಬರಾಜು
ನಿರ್ಮಾಣ: ಸ್ಟೋನ್ ಬೆಂಚ್ ಬ್ಯಾನರ್

Writer - ಶಶಿಕರ

contributor

Editor - ಶಶಿಕರ

contributor

Similar News