ಭೌತಶಾಸ್ತ್ರದಲ್ಲಿ ಶೇಕಡ 5 ಅಂಕ ಇದ್ದರೂ ವೈದ್ಯಕೀಯ ಸೀಟು !

Update: 2018-04-15 04:00 GMT

ಹೊಸದಿಲ್ಲಿ, ಎ. 15: ವೈದ್ಯಕೀಯ ಪದವಿ ಕೋರ್ಸ್ ಪ್ರವೇಶ ಪಡೆಯಲು, ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್)ಯಲ್ಲಿ ಎಷ್ಟು ಅಂಕ ಬೇಕು ಗೊತ್ತೇ ? ಭೌತಶಾಸ್ತ್ರದಲ್ಲಿ ಶೇಕಡ 5, ರಸಾಯನ ಶಾಸ್ತ್ರದಲ್ಲಿ ಶೇಕಡ 10 ಹಾಗೂ ಜೀವಶಾಸ್ತ್ರದಲ್ಲಿ ಕೇವಲ ಶೇಕಡ 20ರಷ್ಟು ಅಂಕ ಇದ್ದರೆ ಸಾಕು. ಇದು ಯಾವ ಹೊಸ ಹಗರಣ ಎಂದು ಬೆಚ್ಚಿ ಬೀಳಬೇಡಿ. ಕಳೆದ ಎರಡು ವರ್ಷಗಳಲ್ಲಿ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ ಅಂಕಗಳನ್ನು ವಿಶ್ಲೇಷಿಸಿದಾಗ ಈ ಕುತೂಹಲಕರ ಅಂಶ ಬೆಳಕಿಗೆ ಬಂದಿದೆ.

ಪ್ರತಿಭಾವಂತರಲ್ಲದ ವಿದ್ಯಾರ್ಥಿಗಳನ್ನು ವೈದ್ಯಕೀಯ ಶಿಕ್ಷಣದಿಂದ ಹೊರಗಿಡುವ ಸಲುವಾಗಿ ರೂಪಿಸಿರುವ "ಪರ್ಸೆಂಟೈಲ್ ವ್ಯವಸ್ಥೆ"ಯಡಿ ಮೇಲೆ ಉಲ್ಲೇಖಿಸಿದಷ್ಟು ಅಂಕ ಪಡೆದ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

2016ಕ್ಕೂ ಮುನ್ನ ನೀಟ್, ಸಾಮಾನ್ಯ ವರ್ಗಕ್ಕೆ ಶೇಕಡ 50 ಮತ್ತು ಮೀಸಲು ವರ್ಗಕ್ಕೆ ಶೇಕಡ 40 ಅಂಕಗಳ ಮಾನದಂಡ ನಿಗದಿಪಡಿಸಿತ್ತು. ಆದರೆ 2016ರಿಂದೀಚೆಗೆ ಇದನ್ನು ಕ್ರಮವಾಗಿ 50ನೇ ಹಾಗೂ 40ನೇ ಪರ್ಸೆಟೈಂಲ್ ಎಂದು ನಿಗದಿಪಡಿಸಲಾಯಿತು. ಇದರಿಂದಾಗಿ ನೀಟ್ ಪರೀಕ್ಷೆಯಲ್ಲಿ ಸರಾಸರಿ ಶೇಕಡ 18-20 ಅಂಕ ಪಡೆದ ವಿದ್ಯಾರ್ಥಿಗಳಿಗೂ ವೈದ್ಯಕೀಯ ಶಿಕ್ಷಣದ ದ್ವಾರ ತೆರೆದಂತಾಗಿದೆ.

ಇದು ಹೇಗೆ ಎಂಬುದನ್ನು ನೋಡೋಣ

2015ರಲ್ಲಿ 720 ಅಂಕಗಳ ಪೈಕಿ 360 ಅಂಕ ಪಡೆದವರು ಮಾತ್ರ ಅರ್ಹತೆ ಪಡೆದಿದ್ದರು. ಆದರೆ 2016ರಲ್ಲಿ 50ನೇ ಪಸೆಂಟೈಲ್ ಅಂಕ ಪಡೆಯಬೇಕಿತ್ತು. ಅಂದರೆ 720ರಲ್ಲಿ 145 ಅಂಕ ಅಂದರೆ ಶೇಕಡ 20 ಅಂಕ ಪಡೆದವರೂ ಅರ್ಹತೆ ಪಡೆದಿದ್ದಾರೆ. ಸಾಮಾನ್ಯ ವರ್ಗದಲ್ಲಿ ಶೇಕಡ 18.2, ಪರಿಶಿಷ್ಟರಲ್ಲಿ ಶೇಕಡ 14.9, ಅಂಗವಿಕಲರಲ್ಲಿ ಶೇಕಡ 16.4 ಅಂಕ ಪಡೆದವರು ವೈದ್ಯಕೀಯ ಪ್ರವೇಶ ಪಡೆದಿದ್ದಾರೆ.

ಮುಂದಿನ ತಿಂಗಳು ನಡೆಯುವ ಈ ವರ್ಷದ ನೀಟ್ ಪರೀಕ್ಷೆಗೂ ಇದೇ ಮಾನದಂಡ ಅನ್ವಯವಾಗುತ್ತದೆ. ಅಂದರೆ ಶೇಕಡ 20ರಷ್ಟು ಅಂಕ ಪಡೆಯುವ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶಾವಕಾಶ ಪಡೆಯುವ ಸಾಧ್ಯತೆ ಇದೆ.

ಪರ್ಸೆಂಟೈಲ್ ಎನ್ನುವುದು ಅಭ್ಯರ್ಥಿಗಳ ಅಂಕದ ಬದಲಾಗಿ ಪ್ರಮಾಣವನ್ನು ಆಧರಿಸಿರುತ್ತದೆ. 50 ಪರ್ಸೆಂಟೈಲ್ ಎಂದರೆ, ಅಧಿಕ ಅಂಕ ಪಡೆದ ಅರ್ಧದಷ್ಟು ಅಭ್ಯರ್ಥಿಗಳು. 90 ಪರ್ಸೆಂಟೈಲ್ ಎಂದರೆ, ಒಟ್ಟು ಅಭ್ಯರ್ಥಿಗಳ ಪೈಕಿ ಅಧಿಕ ಅಂಕ ಪಡೆದ ಶೇಕಡ 90ರಷ್ಟು ಅಭ್ಯರ್ಥಿಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News