ಮತ ಹಾಕುವ ಮುನ್ನ ಒಂದಿಷ್ಟು ಯೋಚಿಸಿ

Update: 2018-04-16 18:40 GMT

ಮಾನ್ಯರೇ,

ಉತ್ತರ ಕರ್ನಾಟಕ ರೈತರ ಬಹುದಿನಗಳ ಬೇಡಿಕೆಯಾಗಿರುವ ಮಹಾದಾಯಿ ಮತ್ತು ಕಳಸಾ ಬಂಡೂರಿ ನಾಲಾ ನದಿ ಜೋಡಣೆ ಯೋಜನೆ ಜಾರಿಗೊಳಿಸುವಂತೆ 2015ರಲ್ಲಿ ನರಗುಂದ ಪಟ್ಟಣದಲ್ಲಿ ರೈತರು ಹೋರಾಟಕ್ಕಿಳಿದು ಇಂದಿಗೆ ಸಾವಿರ ದಿನಗಳು ಪೂರೈಸಿವೆ. ಆದರೆ ಈ ಯೋಜನೆ ಜಾರಿಗೆ ತರುವ ಕುರಿತು ಸರಕಾರಗಳು ರೈತರಿಗೆ ಯಾವುದೇ ಸ್ಪಷ್ಟತೆ ನೀಡುತ್ತಿಲ್ಲ. ಇನ್ನು ರಾಜಕೀಯ ಪಕ್ಷಗಳು ರೈತರಿಗೆ ಬೆಂಬಲ ಸೂಚಿಸುವ ರೀತಿಯಲ್ಲಿ ಬಂದು ಭಾಗವಹಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಂಡವೇ ವಿನಃ ರೈತರ ಬಹುದಿನಗಳ ಈ ಸಮಸ್ಯೆಗೆ ಸ್ಪಂದಿಸಲಿಲ್ಲ. ನಿರಂತರವಾಗಿ ಸಾವಿರ ದಿನಗಳ ಕಾಲ ರೈತರು ತಮ್ಮ ಹೊಲ ಮನೆ ಕೆಲಸ ಕಾರ್ಯಗಳನ್ನು ಬಿಟ್ಟು ಮಳೆ, ಚಳಿ, ಬಿಸಿಲು, ಗಾಳಿ ಲೆಕ್ಕಿಸದೆ ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ಮಹಾದಾಯಿ ಹೋರಾಟದಲ್ಲಿ ಭಾಗವಹಿಸಿದರು. ಹತ್ತಕ್ಕೂ ಅಧಿಕ ರೈತರು ಹೋರಾಟದಲ್ಲಿ ಭಾಗಿಯಾಗಿ ಪ್ರಾಣ ಬಿಟ್ಟರು. ರಾಜ್ಯದ ಮೂಲೆ ಮೂಲೆಗಳಿಂದ ಜನರು, ವಿವಿಧ ಕನ್ನಡ ಪರ ಸಂಘಟನೆಗಳು, ಚಲನಚಿತ್ರ ವಾಣಿಜ್ಯ ಮಂಡಳಿ, ನಟ ನಟಿಯರು, ಹಲವು ಮಠಾಧೀಶರು ಕಳಸಾ ಬಂಡೂರಿ ಹೋರಾಟಕ್ಕೆ ಬೆಂಬಲ ಸೂಚಿಸಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ರೈತರ ಕಣ್ಣೀರಿನ ಕೂಗು ಸಂಬಂಧಿಸಿದವರಿಗೆ ಕೇಳಿಸಲಿಲ್ಲ.

ಬರುವ ಮೇ 12ರ ರಾಜ್ಯ ವಿಧಾನ ಸಭಾ ಚುನಾವಣೆ ಮುಂದಿಟ್ಟುಕೊಂಡ ರಾಜಕೀಯ ಪುಢಾರಿಗಳು ಈಗ ಮತ್ತೆ ಮಹಾದಾಯಿ ವಿಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಅಧಿಕಾರಕ್ಕೆ ಬಂದ ಕೆಲವೇ ದಿನಗಳೊಳಗೆ ಮಹಾದಾಯಿ ಸಮಸ್ಯೆ ಪರಿಹರಿಸುವುದಾಗಿ ಹೇಳಿ ರೈತರನ್ನು ಯಾಮಾರಿಸಲು ನೋಡುತ್ತಿದ್ದಾರೆ. ಆದ್ದರಿಂದ ಪ್ರಜ್ಞಾವಂತ ಮತದಾರರು ಈ ಹುಸಿ ಭರವಸೆ, ಮೋಸ ಇವುಗಳನ್ನೆಲ್ಲ ಗಮನದಲ್ಲಿಟ್ಟುಕೊಂಡು, ರೈತರ ವಿರೋಧಿ ಜನಪ್ರತಿನಿಧಿಗಳಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗಿದೆ.

Writer - -ಮೌಲಾಲಿ ಕೆ ಬೋರಗಿ, ಸಿಂದಗಿ

contributor

Editor - -ಮೌಲಾಲಿ ಕೆ ಬೋರಗಿ, ಸಿಂದಗಿ

contributor

Similar News