ಜನನಾಯಕರ ಆಯ್ಕೆಯ ಬಗ್ಗೆ ಎಚ್ಚರಿಕೆಯಿರಲಿ

Update: 2018-04-17 18:45 GMT

ಮಾನ್ಯರೇ,

ಮತದಾರರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜನನಾಯಕರ ಆಯ್ಕೆಯ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ. ಇಲ್ಲದಿದ್ದರೆ ಅಪಾತ್ರರು ಆಯ್ಕೆಯಾಗುವ ಸಾಧ್ಯತೆ ಹೆಚ್ಚು.
 ಜನನಾಯಕರು ಕೊಡುವ ಹಣ, ಹೆಂಡ, ಔತಣ, ಸೀರೆ, ಪಂಚೆ, ಕುಕ್ಕರ್, ನೋಟಬುಕ್‌ನಂತಹವುಗಳಿಗೆ ಆಸೆ ಪಟ್ಟು ನಿಮ್ಮ ಅಮೂಲ್ಯವಾದ ಮತವನ್ನು ಹಾಳುಮಾಡಿಕೊಳ್ಳಬೇಡಿ. ನಮ್ಮ ಮುಂದಿನ ಸುಂದರ ಬದುಕಿಗೆ ನೆರವಾಗುವ ಸಾರ್ವಜನಿಕ ಮೂಲ ಸೌಕರ್ಯಗಳಾದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಒಳ್ಳೆಯ ರಸ್ತೆ ನಿರ್ಮಾಣ, ಚರಂಡಿ ವ್ಯವಸ್ಥೆ, ಬೀದಿ ದೀಪಗಳ ಅಳವಡಿಕೆ, ಬಯಲು ಮುಕ್ತ ಶೌಚಾಲಯಗಳ ನಿರ್ಮಾಣ, ಸುವ್ಯವಸ್ಥಿತ ಸರಕಾರಿ ಆಸ್ಪತ್ರೆ ನಿರ್ಮಾಣ, ಪಶುಗಳ ಪಾಲನೆ ಪೋಷಣೆಗೆ ಗೋ ಶಾಲೆಗಳ ನಿರ್ಮಾಣ, ರೈತ ಬೆಳೆದ ಬೆಳೆಗೆ ಬೆಂಬಲ ಬೆಲೆ, ಪಶು ಚಿಕಿತ್ಸಾಲಯ, ಹೀಗೆ ಹತ್ತು ಹಲವಾರು ಸಾರ್ವಜನಿಕ ಮೂಲಸೌಲಭ್ಯಗಳ ಜೊತೆಗೆ ಮುಖ್ಯವಾಗಿ ಬಡವರ ಕಷ್ಟಗಳಿಗೆ ಸ್ಪಂದಿಸುವ ಜನನಾಯಕರನ್ನು ಆರಿಸಿ ತರಬೇಕಾಗಿದೆ.

ಹಣ, ಹೆಂಡ ಕೇವಲ ಕ್ಷಣಿಕ,..ಯಾವುದೇ ಜಾತಿ, ಧರ್ಮಗಳಿಗೆ ಕಟ್ಟುಬೀಳದೆ ಉತ್ತಮ ಜನನಾಯಕನನ್ನು ಆರಿಸಿ ತಂದರೆ ಹಳ್ಳಿಗಳ ಅಭಿವೃದ್ಧಿಯಲ್ಲಿ ಗಾಂಧೀಜಿಯವರು ಕಂಡ ಕನಸು ನನಸಾಗುವಂತಾಗುತ್ತದೆ. ಜನನಾಯಕರ ಆಯ್ಕೆಯಲ್ಲಿ ಯುವಜನಾಂಗ ಮತ್ತು ವಿದ್ಯಾವಂತರ ಪಾತ್ರ ಬಹಳ ಮುಖ್ಯವಾದ್ದು. ರೈತ ದೇಶದ ಬೆನ್ನೆಲುಬು ಎನ್ನುತ್ತಾರೆ. ಆದರೆ ರೈತನ ಬೆನ್ನಿಗೆ ಚೂರಿ ಇರಿಯುವ ನಾಯಕ ನಮಗೆ ಬೇಡ. ನಮ್ಮ-ನಮ್ಮ ಕ್ಷೇತ್ರಗಳ ಅಭಿವೃದ್ಧಿ ನಮ್ಮದೇ ಕೈಯಲ್ಲಿದೆ. ಆದ್ದರಿಂದ ಸಮರ್ಥರನ್ನು ಆರಿಸಿ ಕಳುಹಿಸೋಣ.

Writer - ಎಂ ಸಿ. ಧರಿ mcdhari88@gmail.com

contributor

Editor - ಎಂ ಸಿ. ಧರಿ mcdhari88@gmail.com

contributor

Similar News