ಮಕ್ಕಾ ಮಸೀದಿಯಲ್ಲಿ ಸ್ಫೋಟಗೊಂಡ ಬಾಂಬ್ ಆಕಾಶದಿಂದ ಬಿದ್ದದ್ದೇ?

Update: 2018-04-18 16:49 GMT

#ಅಸೀಮಾನಂದ ಸೇರಿ ಎಲ್ಲರ ಖುಲಾಸೆಗೊಳಿಸಿದ ನ್ಯಾಯಾಲಯ

ಹೈದರಾಬಾದ್‍ನಲ್ಲಿ 2007ರಲ್ಲಿ ಮಕ್ಕಾ ಮಸೀದಿ ಸ್ಫೋಟದ ವೇಳೆ ಗಾಯಗೊಂಡಾಗ ಅಬ್ದುಲ್ ವಸಾಯ್‍ಗೆ 18 ವರ್ಷ. ಸ್ಫೋಟದಲ್ಲಿ ಒಂಬತ್ತು ಮಂದಿ ಮೃತಪಟ್ಟು, 60 ಮಂದಿ ಗಾಯಗೊಂಡರು. 2013ರಲ್ಲಿ ದಿಲ್‍ಸುಖ್‍ನಗರ ಸ್ಫೋಟ ಘಟನೆ ಬಗ್ಗೆ ವರದಿ ಮಾಡುವ ವೇಳೆ ನಾನು ಆತನನ್ನು ಹಾಗೂ ಆತನ ತಂದೆಯನ್ನು ಭೇಟಿ ಮಾಡಿದ್ದೆ. ಈ ಸ್ಫೋಟದಲ್ಲಿ ವಸಾಯ್ ಮತ್ತೆ ಗಾಯಗೊಂಡಿದ್ದರು.

ಎರಡನೇ ಬಾರಿಗೆ ಸ್ಫೋಟ ಘಟನೆಯಲ್ಲಿ ಮಗ ಗಾಯಗೊಂಡ ವಿಷಯ ತಿಳಿದಾಗ ವಸಾಯ್ ತಂದೆ ಭೀತಿಗೊಂಡಿದ್ದರು. ಎರಡು ಬಾರಿ ತಪ್ಪು ಸ್ಥಳದಲ್ಲಿ ಪುತ್ರ ಸಿಕ್ಕಿಹಾಕಿಕೊಂಡದ್ದು ಒಂದೆಡೆಯಾದರೆ, ಆತನಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಈ ಕಥೆಯನ್ನು ಮಾಧ್ಯಮಕ್ಕೆ ತಿಳಿಸಿದರು. ತೀವ್ರ ಭದ್ರತೆ ಹಾಗೂ ಸಂಶಯಗಳಿಗೆ ಇದು ಕಾರಣವಾಯಿತು. ಇದು ಪೊಲೀಸರ ದೃಷ್ಟಿ ವಸಾಯ್ ಮೇಲೆ ಬೀಳುವಂತೆ ಮಾಡಿತು.

ಮಗನನ್ನು ಭಿನ್ನ ದೃಷ್ಟಿಯಿಂದ ನೋಡಿದ್ದು, ಪ್ರಶ್ನಿಸಿದ್ದು ತಂದೆಯ ಕೋಪಕ್ಕೆ ಕಾರಣವಾಗಿತ್ತು ಎನ್ನುವುದು ನನಗಿನ್ನೂ ನೆನಪಿದೆ. ಮಗ ಎದುರಿಸುತ್ತಿರುವ ಮಾನಸಿಕ ಆಘಾತವನ್ನು ಯಾರೂ ಅರ್ಥ ಮಾಡಿಕೊಳ್ಳದೇ, 'ಶಂಕಿತ ಉಗ್ರ' ಎಂಬ ಹಣೆಪಟ್ಟಿ ಕಟ್ಟಿದರು. "ಯಾವುದಾದರೂ ಉಗ್ರ ಸಂಘಟನೆ ಜತೆಗೆ ಸಂಪರ್ಕವಿದೆಯೇ ಎಂದು ಪೊಲೀಸರು ಪ್ರಶ್ನಿಸಿದರು; ಆತ ದಿಲ್‍ಸುಖ್‍ನಗರದಲ್ಲಿ ಏಕೆ ಇರಬಾರದು ಎನ್ನುವುದು ನನಗೆ ಅರ್ಥವಾಗಲಿಲ್ಲ" ಎಂದು ತಂದೆ ಹೇಳಿದ್ದನ್ನು ನಾನು ಸ್ಮರಿಸಿಕೊಳ್ಳುತ್ತೇನೆ.

ಆದಾಗ್ಯೂ, ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಕಾರಣಕ್ಕೆ 'ಶಂಕಿತ ಉಗ್ರ' ಎಂಬ ಹಣೆಪಟ್ಟಿ ಕಟ್ಟಿದ ವಸಾಯ್ ಕಥೆ ನಗರಕ್ಕೆ ಹೊಸದೇನೂ ಆಗಿರಲಿಲ್ಲ. 2007ರಲ್ಲಿ, ಮಕ್ಕಾ ಮಸೀದಿ ಸ್ಫೋಟದ ಬಳಿಕ ಕೆಲ ತಿಂಗಳ ಕಾಲ, ಗೋಕುಲ್ ಛಾಟ್ ಬಳಿಯ ಲುಂಬಿನಿ ಪಾರ್ಕ್‍ನಲ್ಲಿ ಅವಳಿ ಸ್ಫೋಟ ಸಂಭವಿಸಿದ ಬಳಿಕ, ಸುಮಾರು 60 ಮಂದಿ ಮುಸ್ಲಿಮರನ್ನು ಹೈದರಾಬಾದ್ ಪೊಲೀಸರು ಸುತ್ತುವರಿದಿದ್ದರು. ಅವರನ್ನು ಅಕ್ರಮವಾಗಿ ಕೂಡಿಹಾಕಿ ಚಿತ್ರಹಿಂಸೆ ನೀಡಿದ್ದರು.
ಅವಿಭಜಿತ ಆಂಧ್ರಪ್ರದೇಶದ ರಾಜ್ಯ ಅಲ್ಪಸಂಖ್ಯಾತರ ಆಯೋಗ, ಈ ಆರೋಪಗಳ ಬಗ್ಗೆ ತನಿಖೆ ನಡೆಸಲು ಎಲ್.ರವಿಚಂದ್ರ ಎಂಬ ವಕೀಲರನ್ನು ನೇಮಕ ಮಾಡಿತು. ಹಲವರಿಗೆ ಚಿತ್ರಹಿಂಸೆ ನೀಡಿದ್ದಕ್ಕೆ ತನಿಖಾ ವಕೀಲರಿಗೆ ಸಾಕಷ್ಟು ಪುರಾವೆಗಳು ಸಿಕ್ಕಿದ್ದವು. ಹಲವು ಮಂದಿ ಸುಮಾರು ಆರು ತಿಂಗಳು ಜೈಲುವಾಸ ಅನುಭವಿಸಿದ್ದರು. ನಂತರ ಆರೋಪಮುಕ್ತರಾಗುವ ಮುನ್ನ ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ ನ್ಯಾಯಾಲಯಕ್ಕೆ ಅಲೆದಿದ್ದರು. ಬಳಿಕ ರಾಜ್ಯ ಸರ್ಕಾರ ಅವರಲ್ಲಿ ಕ್ಷಮೆ ಯಾಚಿಸಿದ ಪತ್ರವನ್ನು ಮತ್ತು ಉತ್ತಮ ನಡತೆಯ ಪತ್ರವನ್ನು ಅವರಿಗೆ ನೀಡಲಾಯಿತು. ತಲಾ 3 ಲಕ್ಷ ರೂಪಾಯಿ ಪರಿಹಾರವನ್ನೂ ನೀಡಲಾಯಿತು.  ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ನ್ಯಾಯಾಲಯ ನಿನ್ನೆ ಪ್ರಕರಣದ ಬಗ್ಗೆ ತೀರ್ಪು ನೀಡಿದ ಬಳಿಕ ನಾನು ಮೂರು ಮಂದಿಯ ಜತೆ ಮಾತನಾಡಿದೆ. ಎಲ್ಲರಿಗೂ ಈ ತೀರ್ಪು ಆಘಾತಕ್ಕೆ ಕಾರಣವಾಗಿತ್ತು. ಎಲ್ಲರೂ ಕೇಳಿದ ಪ್ರಶ್ನೆ ಒಂದೇ: "ಬಾಂಬ್ ಎಲ್ಲಿಂದ ಬಂತು? ಈ ಸ್ಫೋಟದ ಹಿಂದೆ ಯಾರಿದ್ದಾರೆ?".

ಇಬ್ರಾಹಿಂ ಜುನೈದ್ ಈ 60 ಮಂದಿಯ ಪೈಕಿ ಒಬ್ಬರು. ಸ್ಫೋಟದ ಬಳಿಕ ಗಾಯಾಳುಗಳನ್ನು ಆಸ್ಪತ್ರೆಗೆ ಒಯ್ಯಲು ಸಹಕರಿಸಿದ ಹಲವು ಮಂದಿಯ ಪೈಕಿ ಇವರೂ ಸೇರಿದ್ದರು. ಯುನಾನಿ ವೈದ್ಯ ಪದವಿ ಶಿಕ್ಷಣದ ಮೂರನೇ ವರ್ಷದ ವಿದ್ಯಾರ್ಥಿಯಾಗಿದ್ದಾಗ, ಮಕ್ಕಾ ಮಸೀದಿ ಸ್ಫೋಟದ ಯೋಜನೆ ರೂಪಿಸಿ, ಬಾಂಬ್ ಇಟ್ಟ ಆರೋಪದಲ್ಲಿ ಹೈದರಾಬಾದ್ ಪೊಲೀಸರು ಅವರನ್ನು ಬಂಧಿಸಿ, ಅಕ್ರಮವಾಗಿ ಜೈಲಿನಲ್ಲಿಟ್ಟಿದ್ದರು.

"ನನ್ನನ್ನು ಬೇಕಾಬಿಟ್ಟಿ ಥಳಿಸಲಾಯಿತು. ನನ್ನ ಗಡ್ಡ ಎಳೆದರು. ಉಗ್ರಗಾಮಿ, ದೇಶದ್ರೋಹಿ ಎಂದು ಜರೆದರು" ಎಂದು ಜುನೈದ್ ನೆನಪಿಸಿಕೊಳ್ಳುತ್ತಾರೆ. ತಪ್ಪೊಪ್ಪಿಕೊಳ್ಳುವ ರೀತಿಯಲ್ಲಿ ಪೊಲೀಸರು ವಿಚಾರಣೆ ವೇಳೆ ಎಲ್ಲ ತಂತ್ರಗಳನ್ನೂ ರೂಪಿಸಿದರು. "ನನ್ನನ್ನು ಏಕೆ ಬಂಧಿಸಲಾಗಿದೆ, ಹೊಡೆದು ಚಿತ್ರಹಿಂಸೆ ನೀಡಲಾಗುತ್ತಿದೆ ಎಂದು ನಾನು ಪೊಲೀಸರನ್ನು ಕೇಳಿದೆ. ಆರು ತಿಂಗಳ ಬಳಿಕ ಜೈಲಿನಿಂದ ಅಂತಿಮವಾಗಿ ಹೊರಬಂದಾಗ, ನನ್ನ ಮನಸ್ಸು ಛಿದ್ರವಾಗಿತ್ತು" ಎಂದು ಜುನೈದ್ ವಿವರಿಸುತ್ತಾರೆ.

ಈಗ ಜುನೈದ್, ಹೈದರಾಬಾದ್‍ನಲ್ಲಿ ಯುನಾನಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಾ ಮಸೀದಿ ಸ್ಫೋಟ ಪ್ರಕರಣದ ಐವರು ಆರೋಪಿಗಳನ್ನು ದೋಷಮುಕ್ತಗೊಳಿಸಿ ಎನ್‍ಐಎ ನ್ಯಾಯಾಲಯ ನೀಡಿದ ತೀರ್ಪು ಅವರಲ್ಲಿ ಗೊಂದಲ ಮೂಡಿಸಿದೆ. "ಅಂತಿಮವಾಗಿ ಸಂತ್ರಸ್ತರು ಹಾಗೂ ಅವರ ಕುಟುಂಬಗಳಿಗೆ ನ್ಯಾಯದಾನವಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದೆ. ಆದರೆ ದೋಷಮುಕ್ತಗೊಳಿಸಿರುವುದು ನಿಜಕ್ಕೂ ಆಘಾತ ತಂದಿದೆ" ಎಂದು ಜುನೈದ್ ಹೇಳುತ್ತಾರೆ. ಇದುವರೆಗಿನ ಜುನೈದ್ ಪಯಣ ಸುದೀರ್ಘ ಹಾಗೂ ಪ್ರಯಾಸಕರವಾಗಿತ್ತು. "ಸುಳ್ಳು ಆರೋಪದಿಂದ ನಾನು ಇಡೀ ಶೈಕ್ಷಣಿಕ ವರ್ಷ ಕಳೆದುಕೊಂಡೆ. ಇಷ್ಟು ಮಾತ್ರವಲ್ಲದೇ, ಕಾಲೇಜಿನಲ್ಲಿ ಅವಕಾಶ ಕಳೆದುಕೊಂಡೆ. ಮರುಪ್ರವೇಶಕ್ಕೆ ನ್ಯಾಯಾಲಯದ ಆದೇಶ ತರಬೇಕಾಯಿತು" ಎಂದವರು ಹೇಳುತ್ತಾರೆ.

ಆದಾಗ್ಯೂ, ಪೊಲೀಸರ ಕಿರುಕುಳ ಅಲ್ಲಿಗೆ ನಿಲ್ಲಲಿಲ್ಲ. ಜುನೈದ್‍ನನ್ನು ಪೊಲೀಸರು ಹಿಂಬಾಲಿಸುತ್ತಿದ್ದಾರೆ. ಈ ಕಾರಣದಿಂದ ಖಾಸಗಿ ಆಸ್ಪತ್ರೆಯಲ್ಲಿ ಉದ್ಯೋಗಕ್ಕೂ ಸಂಚಕಾರ ಬಂತು. "ನಾನು ಪ್ರಾಕ್ಟೀಸ್ ಮಾಡುವಲ್ಲಿಗೂ ಅವರು ಬರುತ್ತಾರೆ ಹಾಗೂ ಎಷ್ಟು ಸಮಯದಿಂದ ಕೆಲಸ ಮಾಡುತ್ತಿದ್ದೀರಿ, ನಿಮ್ಮ ಪಾತ್ರವೇನು ಎಂದು ಪ್ರಶ್ನಿಸಿದ್ದರು. ಸುಳ್ಳು ಆರೋಪಗಳ ಬಗ್ಗೆ ನಾನು ವಿವರಿಸಿದ್ದೆ. ಯಾವುದೇ ಸಮಯದಲ್ಲಿ ಎಲ್ಲೇ ದಾಳಿ ನಡೆದರೂ, ಮತ್ತೆ ನಮ್ಮಲ್ಲಿ ಕೆಲವರನ್ನು ಕರೆದೊಯ್ಯುತ್ತಾರೆ". 2016ರಲ್ಲಿ ಕೊನೆಯ ಬಾರಿ ಪೊಲೀಸರು ಇವರ ಬಳಿ ಬಂದಿದ್ದರು. "11 ವರ್ಷಗಳು ಕಳೆದವು; ನ್ಯಾಯಾಲಯ ಅಮಾಯಕ ಎಂದು ತೀರ್ಪು ನೀಡಿದ್ದರೂ ಜನ ಇಂದಿಗೂ ನನ್ನನ್ನು ಆರೋಪಿಯಾಗಿ ನೋಡುತ್ತಾರೆ. ಇಂದಿನ ಭಾರತದಲ್ಲಿ ದಲಿತರು ಮತ್ತು ಮುಸ್ಲಿಮರ ಮೇಲೆ ದಾಳಿಗಳು ನಡೆಯುತ್ತಲೇ ಇರುತ್ತವೆ. ಇದೀಗ ನ್ಯಾಯಾಲಯ ಕೂಡಾ ನಮ್ಮನ್ನು ಸೋಲಿಸಿದೆ" ಎಂದೆನ್ನುತ್ತಾರೆ ಅವರು.

ಅಬ್ದುಲ್ ವಜೀದ್ ತಡ್ಬನ್ (34) ಕೂಡಾ ಮಕ್ಕಾ ಸ್ಫೋಟ ಸಂದರ್ಭದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದವರಲ್ಲಿ ಒಬ್ಬರು. ಮಸೀದಿಯ ಎಲ್ಲೆಡೆ ರಕ್ತ ಹರಿದದ್ದು, ದೇಹದ ಅಂಗಾಂಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದನ್ನು ಅವರು ಸ್ಮರಿಸಿಕೊಳ್ಳುತ್ತಾರೆ.

"ಆ ದಿನ ನಾನು ನೋಡಿದ್ದನ್ನು ವರ್ಣಿಸಲು ಅಸಾಧ್ಯ. ಅದು ನನ್ನ ನೆನಪಿನಲ್ಲಿ ಅಚ್ಚಳಿಯದೇ ಉಳಿದಿದೆ" ಎಂದು ಉದ್ಗರಿಸುತ್ತಾರೆ. ತನ್ನ ಮಾನವೀಯ ಕಾರ್ಯ, ಪೊಲೀಸರ ದೃಷ್ಟಿಗೆ ಬೀಳಲು ಕಾರಣವಾಗುತ್ತದೆ ಎನ್ನುವುದು ಅವರಿಗೆ ತಿಳಿದಿರಲಿಲ್ಲ. ಮೂರು ತಿಂಗಳ ಬಳಿಕ, ಕೆಲಸ ಮುಗಿಸಿ ಮನೆಗೆ ಬರುತ್ತಿದ್ದಾಗ, ಮಫ್ತಿಯಲ್ಲಿದ್ದ 25 ಪೊಲೀಸರು ಅವರನ್ನು ಸುತ್ತುವರಿದರು. ಕಣ್ಣಿಗೆ ಬಟ್ಟೆಕಟ್ಟಿ ಅಜ್ಞಾತಸ್ಥಳಕ್ಕೆ ಕರೆದೊಯ್ದರು. "ಎಲ್ಲಿ ನನ್ನನ್ನು ಇರಿಸಲಾಗಿತ್ತು ಎನ್ನುವುದು ನನಗೆ ತಿಳಿಯದು. ಅದು ಒಂದು ತೋಟದ ಮನೆ ಎಂಬ ಶಂಕೆ ನನ್ನದು. ಅಲ್ಲಿ 12 ದಿನ ನನ್ನನ್ನು ಇಡಲಾಗಿತ್ತು"
ನಡುಗುವ ಧ್ವನಿಯಲ್ಲಿ, "ನನ್ನನ್ನು ಅಮಾನುಷವಾಗಿ ಥಳಿಸಲಾಯಿತು. ಗುಪ್ತಾಂಗ ಸೇರಿದಂತೆ ದೇಹದ ಭಾಗಗಳಿಗೆ ಎಲೆಕ್ಟ್ರಿಕ್ ಶಾಕ್ ನೀಡಲಾಯಿತು. ನಿದ್ರೆ ಮಾಡಲು ಅವಕಾಶ ನೀಡಲಿಲ್ಲ. ಒಂದೇ ಬಾರಿ 20-30 ಲೀಟರ್ ನೀರು ಕುಡಿಯುವಂತೆ ಬಲಾತ್ಕಾರ ಮಾಡಲಾಯಿತು. ಪ್ರತಿ ಬಾರಿ ಚಿತ್ರಹಿಂಸೆ ನೀಡುವ ನಡುವೆ 10-15 ನಿಮಿಷ ಕಾಲಾವಕಾಶ ಕೊಟ್ಟು, ನಾನು ಮಾಡದ ತಪ್ಪೊಪ್ಪಿಕೊಳ್ಳುವಂತೆ ಕೇಳುತ್ತಿದ್ದರು ಅಥವಾ ಸ್ಥಳೀಯರ ಹೆಸರು ನೀಡುವಂತೆ ಒತ್ತಾಯಿಸುತ್ತಿದ್ದರು." ಎಂದವರು ಹೇಳುತ್ತಾರೆ.

ಜುನೈದ್‍ನಂತೆ ತಡ್ಬನ್ ಕೂಡಾ ಆರು ತಿಂಗಳಿಗೂ ಹೆಚ್ಚು ಕಾಲವನ್ನು ಜೈಲಲ್ಲಿ ಕಳೆದರು. "ನಾನು ಪ್ರತಿದಿನ ಅಳುತ್ತಿದ್ದೆ ಹಾಗೂ ಈ ನರಕದಿಂದ ಪಾರುಮಾಡುವಂತೆ ಅಲ್ಲಾಹನಲ್ಲಿ ಪ್ರಾರ್ಥಿಸುತ್ತಿದ್ದೆ. ಪೊಲೀಸರು ನನ್ನನ್ನು ಐಎಸ್‍ಐ ಏಜೆಂಟ್ ಮತ್ತು ಲಷ್ಕರ್ ಇ ತೋಯ್ಬಾ ಜತೆ ಕೆಲಸ ಮಾಡುತ್ತಿದ್ದೆ ಎಂದು ಆಪಾದಿಸಿದ ಹಿನ್ನೆಲೆಯಲ್ಲಿ ಹಲವು ಬಾರಿ ನನ್ನ ಜಾಮೀನು ಅರ್ಜಿ ತಿರಸ್ಕರಿಸಲಾಗಿತ್ತು" ಎನ್ನುತ್ತಾರೆ ತಡ್ಬನ್.

ಇವರ ಜೀವನ ಸರಿಪಡಿಸಲಾಗದಷ್ಟು ಬದಲಾಯಿತು. ಸಂಬಂಧಿಕರು ಮತ್ತು ಸ್ನೇಹಿತರ ಪಾಲಿಗೆ ಕೀಳುವ್ಯಕ್ತಿಯಾದರು. "ನನ್ನ ಜತೆ ಸೇರಿದರೆ ತಮಗೂ ಕೆಟ್ಟದಾಗಬಹುದು ಎಂದೇ ಪ್ರತಿಯೊಬ್ಬರೂ ಯೋಚಿಸುತ್ತಿದ್ದರು. ಇಂದಿಗೂ ನನಗೆ ನೆಮ್ಮದಿಯಿಂದ ನಿದ್ದೆ ಮಾಡಲಾಗುತ್ತಿಲ್ಲ. ಗುಳಿಗೆ ಸಹಾಯದಿಂದ ನಾನು ನಿದ್ರಿಸುತ್ತೇನೆ. ಪ್ರತಿ ಬಾರಿಯೂ ನನ್ನ ಭುಜ ನೋಡಿಕೊಳ್ಳುತ್ತೇನೆ. ಆ ಘಟನೆಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ ಹಾಗೂ ಅದನ್ನು ಎಂದಿಗೂ ಮರೆಯಲು ಸಾಧ್ಯ ಎಂದು ನನಗೆ ಅನಿಸುವುದಿಲ್ಲ" ಎಂದವರು ಹೇಳುತ್ತಾರೆ.

"ನಿನ್ನೆ ನ್ಯಾಯಾಧೀಶರು ಎಲ್ಲ ಐವರು ಆರೋಪಿಗಳನ್ನೂ ಆರೋಪಮುಕ್ತಗೊಳಿಸಿದ್ದಾರೆ. ಹಾಗಾದರೆ ಬಾಂಬ್ ಎಲ್ಲಿಂದ ಬಂತು?, ಆಕಾಶದಿಂದಲೇ?, ನೆಲದಿಂದಲೇ?, ಯಾರು ಈ ಭಯಾನಕ ಕೃತ್ಯ ಎಸಗಿದರು? ಎಂದು ವ್ಯಗ್ರರಾಗಿ ಕೇಳುತ್ತಾರೆ ತಡ್ಬನ್. "ನಾನು ಮುಸ್ಲಿಂ ಎಂಬ ಕಾರಣಕ್ಕೆ, ನನ್ನನ್ನು ಪಾಕಿಸ್ತಾನಿ, ದೇಶದ್ರೋಹಿ ಎಂದು ಕಾಣಲಾಗುತ್ತದೆ. ನಾನು ಹಿಂದೂಸ್ತಾನಿ ಮತ್ತು ಅಖ್ಲಾಕ್ ನಿಂದ ಹಿಡಿದು ಕಥುವಾ ಬಾಲಕಿವರೆಗೆ ದೇಶದ ಇಂದಿನ ಸ್ಥಿತಿ ಬಗ್ಗೆ ನನಗೆ ನಾಚಿಕೆಯಾಗುತ್ತಿದೆ. ಪ್ರಕರಣದಲ್ಲಿ ನ್ಯಾಯ ಸಿಗುತ್ತದೆ ಎಂಬ ನಂಬಿಕೆಯನ್ನು ಈಗ ಕಳೆದುಕೊಂಡಿದ್ದೇನೆ" ಎಂದು ಹತಾಶರಾಗಿ ನುಡಿಯುತ್ತಾರೆ.

ಮುಹಮ್ಮದ್ ರಯೀಸುದ್ದೀನ್ (37) ಕೂಡಾ ತನಿಖಾ ಸಂಸ್ಥೆಗೆ ಇಂಥದ್ದೇ ಪ್ರಶ್ನೆ ಮುಂದಿಡುತ್ತಾರೆ. ಇವರನ್ನೂ ಮಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿ ಸಿಲುಕಿಸಲಾಗಿತ್ತು. ತೀರ್ಪು ಬಂದ ಬಳಿಕ ಮಾತೇ ಹೊರಡದಷ್ಟು ನಿಬ್ಬೆರಗಾಗಿದ್ದೇನೆ ಎಂದು ಅವರು ಹೇಳುತ್ತಾರೆ. "ಮೊದಲು ಹೈದರಾಬಾದ್ ಪೊಲೀಸರು, ಹಲವಾರು ಮಂದಿ ಹೈದರಾಬಾದಿ ಯುವಕರನ್ನು ಸುಳ್ಳಾಗಿ ಸಿಕ್ಕಿಸಿಹಾಕಿಸುವ ಮೂಲಕ ತನಿಖೆ ವಿಳಂಬ ಮಾಡಿದರು. ನಮ್ಮ ಬದುಕು ನಾಶಗೊಳಿಸಿದರು. ಅಂತಿಮವಾಗಿ ಕೆಲ ಪ್ರಾಮಾಣಿಕ ಪೊಲೀಸರು ಮತ್ತು ತನಿಖಾಧಿಕಾರಿಗಳು ನಿಷ್ಪಕ್ಷಪಾತ ತನಿಖೆ ನಡೆಸಿ, ಐದು ಮಂದಿಯ ವಿರುದ್ಧ ಆರೋಪ ಹೊರಿಸಿದರು. ಈ ಪೈಕಿ ಒಬ್ಬ ತಪ್ಪೊಪ್ಪಿಕೊಂಡಿದ್ದ. ಆದರೆ ನ್ಯಾಯಾಲಯ, ಪುರಾವೆ ಇಲ್ಲ ಎಂಬ ಕಾರಣ ನೀಡಿ ಮತ್ತು ಸಾಕ್ಷಿಗಳು ವ್ಯತಿರಿಕ್ತ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ದೋಷಮುಕ್ತಗೊಳಿಸಿದೆ. ನಾನು ಚಿಕ್ಕವ. ನ್ಯಾಯಾಲಯ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಅರ್ಥ ಮಾಡಿಕೊಳ್ಳಲಾರೆ. ಆದರೆ ಈ ಸಂಸ್ಥೆಗಳು ನ್ಯಾಯದಾನ ಮಾಡದಿದ್ದರೆ, ನಾವು ಎಲ್ಲಿಗೆ ಹೋಗಬೇಕು?" ಎಂದವರು ಪ್ರಶ್ನಿಸುತ್ತಾರೆ.

ಸ್ಫೋಟ ಸಂಭವಿಸಿದ ವೇಳೆ ರಯೀಸುದ್ದೀನ್ ಚಿನ್ನದ ಅಂಗಡಿಯೊಂದರಲ್ಲಿ ಸೇಲ್ಸ್ ಮೆನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. "ಮಕ್ಕಾ ಮಸೀದಿಯಲ್ಲಿ ಸ್ಫೋಟದ ಸದ್ದು ಕೇಳಿದಾಗ ನಾನು ಮನೆಯಲ್ಲಿ ಊಟಕ್ಕೆ ಕುಳಿತಿದ್ದೆ. ಏನಾದರೂ ನೆರವು ನೀಡಲು ಸಾಧ್ಯವೇ ಎಂದು ನೋಡುವ ಸಲುವಾಗಿ ಅಲ್ಲಿಗೆ ಹೋದೆ. ಮೂರು ತಿಂಗಳ ಬಳಿಕ ಪೊಲೀಸರು ಕರೆದೊಯ್ದು ಒಂದು ವಾರ ಅಕ್ರಮವಾಗಿ ಕೂಡಿ ಹಾಕಿದರು. ನನಗೆ ತಿಳಿದಂತೆ ನನ್ನನ್ನು ನಾಯಿಗಳನ್ನು ಕೂಡಿಹಾಕುವ ಬೋನಿನಲ್ಲಿ ಇರಿಸಿದ್ದರು. ಪ್ರತಿ ದಿನ ನನಗೆ ಚಿತ್ರಹಿಂಸೆ ನೀಡಲಾಗುತ್ತಿತ್ತು. ನಾನು ಎಲ್ಲಿದ್ದೇನೆ ಎಂಬ ಕಲ್ಪನೆಯೂ ನನ್ನ ಸಹೋದರನಿಗೆ ಇರಲಿಲ್ಲ. ಅದು ಬಂಧನದ ಕಾಲ. ಪ್ರತಿ ಕುಟುಂಬದಲ್ಲಿ ಒಬ್ಬ ಮಗ ಅಥವಾ ಗಂಡ, ಸಹೋದರರನ್ನಾದರೂ ಪೊಲೀಸರು ಕರೆದೊಯ್ದಿದ್ದರು" ಎಂದವರು ವಿವರಿಸುತ್ತಾರೆ.

ರಯೀಸುದ್ದೀನ್ ಕೂಡಾ ಪೊಲೀಸ್ ಕ್ರೌರ್ಯಕ್ಕೆ ತುತ್ತಾಗಿದ್ದರು. ಇತರರ ಜತೆ ಮಂಪರು ಪರೀಕ್ಷೆಗೂ ಒಳಗಾಗಿದ್ದರು. "ನಮ್ಮನ್ನು ಸುಮಾರು 25 ಮಂದಿಯನ್ನು ಕುಖ್ಯಾತ ಉಗ್ರರಂತೆ ಪರಿಗಣಿಸಲಾಗಿತ್ತು. ಅತ್ಯಧಿಕ ಭದ್ರತೆಯ ಬರಾಕ್‍ಗಳಲ್ಲಿ ಕೂಡಿಹಾಕಲಾಗಿತ್ತು. ನಮಗೆ ಕುಟುಂಬದವರನ್ನು ಭೇಟಿ ಮಾಡಲು ಅಥವಾ ವಕೀಲರ ನೆರವು ಪಡೆಯಲು ಕೂಡಾ ಅವಕಾಶ ನೀಡಲಿಲ್ಲ". ಆರಂಭಿಕ ದಿನಗಳಲ್ಲಿ ತೀವ್ರತರವಾದ ಪೊಲೀಸ್ ಹಾಗೂ ಮಾಧ್ಯಮ ಪರಿಶೀಲನೆ ಕೂಡಾ ನೆರವಿಗೆ ಬರಲಿಲ್ಲ. "ತೆಲುಗು ಹಾಗೂ ಉರ್ದು ಮಾಧ್ಯಮಗಳು ಪೊಲೀಸ್ ಹೇಳಿಕೆಯನ್ನಷ್ಟೇ ವರದಿ ಮಾಡಿದವು. ನ್ಯಾಯಾಲಯದ ಮುಂದೆ ನಮ್ಮನ್ನು ಹಾಜರುಪಡಿಸುವ ಮುನ್ನವೇ ನಮ್ಮನ್ನು ಆರೋಪಿಗಳೆಂದು ಬಿಂಬಿಸಿದರು. ಮಾನವಹಕ್ಕು ಗುಂಪುಗಳ ಒತ್ತಡದ ಬಳಿಕವಷ್ಟೇ ಮಾಧ್ಯಮ ನಿಷ್ಪಕ್ಷಪಾತ ವರದಿ ಮಾಡಲು ಆರಂಭಿಸಿತು" ಎಂದು ವಿವರಿಸುತ್ತಾರೆ.

"ನನ್ನನ್ನು ಉಗ್ರಗಾಮಿ ಮತ್ತು ದೇಶದ್ರೋಹಿ ಎಂದು ಬಣ್ಣಿಸಿದ ಶೀರ್ಷಿಕೆಯನ್ನು ನಾನೆಂದೂ ಮರೆಯಲಾರೆ. ಹನ್ನೊಂದು ವರ್ಷ ಸುದೀರ್ಘ ಅವಧಿಯಾಗಿರಬಹುದು. ಆದರೆ ಸುಳ್ಳು ಆರೋಪದ ಕರಾಳ ಛಾಯೆ ಮಾತ್ರ ಇನ್ನೂ ಹೋಗಿಲ್ಲ. ನನ್ನನ್ನು ಸದಾ ಶಂಕಿತ ಉಗ್ರ ಎಂದು ನೋಡಲಾಗುತ್ತಿದೆಯೇ ವಿನಃ ಪೊಲೀಸ್ ಕ್ರೌರ್ಯದ ಸಂತ್ರಸ್ತ ಎಂದು ಪರಿಗಣಿಸುವುದಿಲ್ಲ. ನಿನ್ನೆ ಕೆಲಸದ ಮೇಲೆ ಮಕ್ಕಾ ಮಸೀದಿಗೆ ಹೋಗಲು ಬಯಸಿದ್ದೆ. ಆದರೆ ಸ್ಫೋಟದ ಬಗ್ಗೆ ಮತ್ತು ಪ್ರಕರಣದ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದ್ದರಿಂದ ನನಗೆ ಹೋಗಲು ಸಾಧ್ಯವಾಗಲಿಲ್ಲ. ಒತ್ತಾಯಪೂರ್ವಕವಾಗಿಯೇ ನನಗೆ ನೀಡಿದ ಚಿತ್ರಹಿಂಸೆಯನ್ನು ನೆನಪಿಸಿಕೊಂಡೆ. ಇದೀಗ ನನಗಿರುವುದು ಒಂದೇ ಪ್ರಶ್ನೆ: ಈ ಸ್ಫೋಟ ನಡೆಸಿದ್ದು ಯಾರು ಹಾಗೂ ಸ್ಫೋಟದಿಂದಾಗ ಒಂಬತ್ತು ಮಂದಿಯ ಸಾವಿಗೆ ಹಾಗೂ ಹಲವಾರು ಮಂದಿಯ ಗಾಯಕ್ಕೆ ಯಾರು ಹೊಣೆ?" ಎಂಬುದು ರಯೀಸುದ್ದೀನ್ ರ ಪ್ರಶ್ನೆ.

ಸಂತ್ರಸ್ತರ ಕುಟುಂಬಗಳು ಕೂಡಾ ಆಘಾತ ಹಾಗೂ ನಿರಾಸೆಗೆ ಒಳಗಾಗಿವೆ ಎಂದು ನಾಗರಿಕ ಸ್ವಾತಂತ್ರ್ಯ ನಿಗಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಲತೀಫ್ ಮುಹಮ್ಮ ದ್ ಖಾನ್ ಹೇಳುತ್ತಾರೆ. "ತೀರ್ಪಿನ ವಿರುದ್ಧ ಕುಟುಂಬಗಳು ಮೇಲ್ಮನವಿ ಸಲ್ಲಿಸುವುದಾದರೆ ನಾವು ನಮ್ಮಿಂದ ಸಾಧ್ಯವಾದ ರೀತಿಯಲ್ಲಿ ನೆರವಾಗುತ್ತೇವೆ. ತೀರ್ಪು ನೀಡಿದ ತಕ್ಷಣ ನ್ಯಾಯಾಧೀಶರು ರಾಜೀನಾಮೆ ನೀಡಿರುವುದು ಅನುಮಾನಗಳನ್ನು ಹುಟ್ಟುಹಾಕಿದೆ" ಎಂದವರು ತಿಳಿಸಿದ್ದಾರೆ.

ಸ್ಫೋಟದಲ್ಲಿ ಅಳಿಯ ಶೇಖ್ ನಯೀಮ್ (18)ನನ್ನು ಕಳೆದುಕೊಂಡ ಮುಹಮ್ಮದ್ ಸಲೀಂ, "ತೀರ್ಪಿನಿಂದ ಆಘಾತವಾಗಿದೆ ಮತ್ತು ನಿರೀಕ್ಷೆ ಹುಸಿಯಾದ ಭಾವನೆ ಬಂದಿದೆ. ಹನ್ನೊಂದು ವರ್ಷಗಳಿಂದ ನನ್ನ ಸಹೋದರಿ ತೀರ್ಪಿನ ದಿನಕ್ಕಾಗಿ ಕಾಯುತ್ತಿದ್ದಳು. ಈಗ ಆ ತೀರ್ಪು ಬಂದಿದೆ. ತನ್ನ ಮಗ ಮತ್ತೆ ಬರುವುದಿಲ್ಲ ಎನ್ನುವುದು ಆಕೆಗೆ ಗೊತ್ತು. ಆದರೆ ಆತನ ಸಾವಿಗೆ ನ್ಯಾಯ ಸಿಗುತ್ತದೆ ಎಂಬ ನಿರೀಕ್ಷೆ ನಮ್ಮಲ್ಲಿತ್ತು. ಆದರೆ ಆ ನಿರೀಕ್ಷೆಯನ್ನು ನಮ್ಮಿಂದ ಕಸಿದುಕೊಳ್ಳಲಾಗಿದೆ" ಎಂದು ಹೇಳುತ್ತಾರೆ. ಕಳೆದ ಒಂದು ದಶಕದಲ್ಲಿ ತನಿಖೆ ನಡೆಸಿದ ವಿಧಾನವನ್ನು ಪ್ರಶ್ನಿಸುವ ಅವರು, "ಇದೀಗ ಸಾರ್ವಜನಿಕರು ತಪ್ಪಿತಸ್ಥರನ್ನು ಹಿಡಿಯಬೇಕಾದರೆ, ಪೊಲೀಸರಿಂದ ಹಿಡಿದು ಸಿಬಿಐ, ಎನ್‍ಐಎ ಅಧಿಕಾರಿಗಳು ಇದರಲ್ಲಿ ವಿಫಲರಾಗಿದ್ದಾರೆ" ಎಂದು ಮಾರ್ಮಿಕವಾಗಿ ನುಡಿಯುತ್ತಾರೆ.

Writer - ಡಿ.ವಿ.ಎಲ್. ಪದ್ಮಪ್ರಿಯ, thewire.in

contributor

Editor - ಡಿ.ವಿ.ಎಲ್. ಪದ್ಮಪ್ರಿಯ, thewire.in

contributor

Similar News