ರಾಜ್‌ನಾಥ್ ಸಿಂಗ್‌ಗೆ 2.50 ರೂ. ವೇತನ ಮರಳಿಸಿದ ಮಾಜಿ ಆಪ್ ಸಲಹೆಗಾರ

Update: 2018-04-19 18:19 GMT
ರಾಘವ್ ಚಡ್ಡಾ

ಹೊಸದಿಲ್ಲಿ, ಎ.19: ದಿಲ್ಲಿ ಸರಕಾರಕ್ಕೆ ಸಲಹೆಗಾರರಾಗಿ ನೇಮಕಗೊಂಡಿದ್ದ ಒಂಬತ್ತು ಅಧಿಕಾರಿಗಳ ನೇಮಕಾತಿಯನ್ನು ರದ್ದು ಮಾಡಿದ ಕೇಂದ್ರ ಸರಕಾರದ ವರ್ತನೆಯಿಂದ ಅಸಮಾಧಾನಗೊಂಡ ಆಮ್ ಆದ್ಮಿ ಪಕ್ಷದ ಸದಸ್ಯ ಮತ್ತು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಮಾಜಿ ಸಲಹೆಗಾರ ರಾಘವ್ ಚಡ್ಡಾ ಕೇಂದ್ರ ಗೃಹಸಚಿವ ರಾಜ್‌ನಾಥ್ ಸಿಂಗ್‌ಗೆ 2.50 ರೂ.ನ ಡಿಡಿ ಕಳುಹಿಸಿದ್ದಾರೆ. ಈ ಡಿಡಿಯೊಂದಿಗೆ ಪತ್ರವೊಂದನ್ನು ಲಗತ್ತಿಸಿರುವ ಚಡ್ಡಾ, ನನಗೆ ಮಾಸಿಕ ಒಂದು ರೂ. ಗೌರವಧನವನ್ನು ನೀಡಲಾಗಿತ್ತು.

ನಾನು ಒಟ್ಟಾರೆ 75 ದಿನಗಳ ಕಾಲ ಸಲಹೆಗಾರನಾಗಿ ಕಾರ್ಯನಿರ್ವಹಿಸಿದ್ದು ಈ ಸಮಯದಲ್ಲಿ 2.50 ರೂ. ವೇತನ ಪಡೆದುಕೊಂಡಿದ್ದೇನೆ. ಈಗ ಗೃಹ ಸಚಿವಾಲಯವು ನಮ್ಮ ನೇಮಕಾತಿಯನ್ನು ರದ್ದುಗೊಳಿಸಿರುವುದನ್ನು ನಾನು ಸ್ವೀಕರಿಸಿದ್ದೇನೆ. ಹಾಗಾಗಿ ವೇತನವನ್ನು ನಿಮಗೆ ಮರಳಿಸುತ್ತಿದ್ದೇನೆ. ಇತರ ಎಲ್ಲ ಸಲಹೆಗಾರರಂತೆ ನನ್ನ ಯೋಚನೆ ಕೂಡಾ ವೈಯಕ್ತಿಯ ಮಟ್ಟದಿಂದ ಮೇಲೆದ್ದು ಕೆಲಸ ಮಾಡುವುದಾಗಿತ್ತು. ದಿಲ್ಲಿಯ ಜನರಿಗಾಗಿ ಕೆಲಸ ಮಾಡಬೇಕೆಂದು ನಾನಂದುಕೊಂಡಿದ್ದೆ ಎಂದು ಬರೆದಿದ್ದಾರೆ. ಗೃಹ ಸಚಿವಾಲಯ ದಯಮಾಡಿ 2.50 ರೂ. ನನ್ನ ಡಿಡಿಯನ್ನು ಸ್ವೀಕರಿಸಿ. ಈ ಮೊತ್ತವನ್ನು ನಾನು ನನ್ನ ಸಾಮರ್ಥ್ಯಕ್ಕನುಗುಣವಾಗಿ ಗಳಿಸಿದ್ದೇನೆ ಎಂದು ಚಡ್ಡಾ ತಿಳಿಸಿದ್ದಾರೆ. ಜೊತೆಗೆ ತಾವು ಪ್ರತಿನಿಧಿಸುತ್ತಿರುವ ಕ್ಷೇತ್ರದಲ್ಲಿ ಕೌಶಲ್ಯವಿಲ್ಲದಿದ್ದರೂ ಬಿಜೆಪಿ ನಾಯಕ ಸಂಬೀತ್ ಪಾತ್ರ, ಶಾಝಿಯಾ ಇಲ್ಮಿ ಮತ್ತು ಮಧ್ಯಪ್ರದೇಶದ ದೇವಮಾನವರೊಬ್ಬರನ್ನು ಒನ್‌ಜಿಸಿ, ಇಂಜಿನಿಯರ್ಸ್ ಇಂಡಿಯ ಲಿಮಿಟೆಡ್ ಮತ್ತು ಮಧ್ಯಪ್ರದೇಶ ಸರಕಾರದ ಸಂಪುಟಕ್ಕೆ ಆಯ್ಕೆ ಮಾಡಿರುವುದನ್ನೂ ಚಡ್ಡಾ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News