ನನ್ನ ಮುಂದಿನ ಗುರಿ ಏಷ್ಯಾಗೇಮ್ಸ್

Update: 2018-04-19 18:59 GMT

ಹೊಸದಿಲ್ಲಿ, ಎ.19: ಇತ್ತೀಚೆಗೆ ಆಸ್ಟ್ರೇಲಿಯದಲ್ಲಿ ಕೊನೆಗೊಂಡ 21ನೇ ಆವೃತ್ತಿಯ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿರುವುದಕ್ಕೆ ತೃಪ್ತಿಗೊಳ್ಳದ ಭಾರತದ ಯುವ ಬಾಕ್ಸರ್ ಅಮಿತ್ ಪಾಂಘಾಲ್ ಏಷ್ಯನ್ ಗೇಮ್ಸ್‌ನಲ್ಲಿ ತನ್ನ ಪ್ರದರ್ಶನ ಸುಧಾರಿಸಿಕೊಳ್ಳಲು ನಿರ್ಧರಿಸಿದ್ದಾರೆ.

22ರ ಹರೆಯದ ರೋಹ್ಟಕ್ ಬಾಕ್ಸರ್ ಅಮಿತ್ ಗೋಲ್ಡ್ ಕೋಸ್ಟ್ ಗೇಮ್ಸ್‌ನಲ್ಲಿ 49 ಕೆಜಿ ಪುರುಷರ ಲೈಟ್ ಫ್ಲೈವೇಟ್ ವಿಭಾಗದಲ್ಲಿ ಇಂಗ್ಲೆಂಡ್‌ನ ಗಲಾಲ್ ಯಫೈ ವಿರುದ್ಧ ಸೋಲನುಭವಿಸಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು.

‘‘ನಾನು ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಕಠಿಣ ಶ್ರಮಪಟ್ಟಿದ್ದೆ. ಪದಕವೂ ಗೆದ್ದುಕೊಂಡಿರುವೆ. ನಾನು ಚಿನ್ನದ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದೆ. ಆದರೆ, ನನಗೆ ಬೆಳ್ಳಿ ಲಭಿಸಿತ್ತು. ಇದರಿಂದ ನನಗೆ ತೃಪ್ತಿಯಾಗಿಲ್ಲ. ನನ್ನ ವೇಗದತ್ತ ಹೆಚ್ಚು ಗಮನ ನೀಡುವೆ. ನನ್ನ ಮುಂದಿನ ಗುರಿ ಏಷ್ಯನ್ ಗೇಮ್ಸ್’’ ಎಂದು ಅಮಿತ್ ಹೇಳಿದ್ದಾರೆ. ‘‘ಏಷ್ಯನ್ ಗೇಮ್ಸ್ ಕೂಡ ತುಂಬಾ ಕಠಿಣವಾಗಿದೆ. ಅದು ನನಗೆ ದೊಡ್ಡ ಪರೀಕ್ಷೆಯಾಗಿದೆ. ನಾನು ಕ್ರಮಬದ್ದವಾಗಿ ತಯಾರಿ ನಡೆಸುವೆ. ನಾವು ನಮ್ಮ ಎದುರಾಳಿಯ ವೀಡಿಯೊವನ್ನು ವೀಕ್ಷಿಸಿ ಕೋಚ್ ಮಾರ್ಗದರ್ಶನದಲ್ಲಿ ಕಾರ್ಯತಂತ್ರ ರೂಪಿಸುತ್ತೇನೆ’’ಎಂದರು.

ಅಮಿತ್ 2017ರಲ್ಲಿ ತನ್ನ ಮೊದಲ ನ್ಯಾಶನಲ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News