ಭಾರತ್ ನಲ್ಲಿ ಸಲ್ಮಾನ್ ಗೆ ಪ್ರಿಯಾಂಕಾ ನಾಯಕಿ

Update: 2018-04-20 12:24 GMT

‘ಬ್ಯಾಕ್ ಟು ಬ್ಯಾಕ್’ ಅಂತರ್‌ರಾಷ್ಟ್ರೀಯ ಪ್ರಾಜೆಕ್ಟ್‌ಗಳಲ್ಲಿ ನಟಿಸಿರುವ ಪ್ರಿಯಾಂಕಾ ಚೋಪ್ರಾ, ‘ಭಾರತ್’ ಚಿತ್ರದೊಂದಿಗೆ ಮತ್ತೆ ಬಾಲಿವುಡ್‌ಗೆ ಪುನರಾಗಮಿಸಿದ್ದಾರೆ. ಸುಮಾರು 10 ವರ್ಷಗಳ ಸುದೀರ್ಘ ಅಂತರದ ಬಳಿಕ ಅವರು ‘ಬಾಕ್ಸ್ ಆಫೀಸ್ ಸುಲ್ಮಾನ್’ ಸಲ್ಮಾನ್ ಖಾನ್ ಜೊತೆಗೆ ನಟಿಸುತ್ತಿದ್ದಾರೆ. ನಿರ್ದೇಶಕ ಅಲಿ ಅಬ್ಬಾಸ್ ಜಾಫರ್ ಆ್ಯಕ್ಷನ್,ಕಟ್ ಹೇಳುತ್ತಿದ್ದಾರೆ.

ಅಂದಹಾಗೆ ಪ್ರಿಯಾಂಕಾ ಈ ಹಿಂದೆ ಅಲಿ ಜಾಫರ್ ನಿರ್ದೇಶನದ ‘ಗೂಂಡೆ’ನಲ್ಲೂ ನಡೆಸಿದ್ದರು. ಸಲ್ಮಾನ್ ಜೊತೆ ಆಕೆ, ‘ಮುಜ್‌ಸೆ ಶಾದಿ ಕರೋಗೆ ಹಾಗೂ ಸಲಾಮೆ ಇಶ್ಕ್ ಚಿತ್ರಗಳಲ್ಲಿ ನಟಿಸಿದ್ದರು.

ಬಾಲಿವುಡ್‌ನಲ್ಲಿ ತನ್ನ ಅನುಪಸ್ಥಿತಿಯ ಹೊರತಾ ಗಿಯೂ, ನಿರಂತರವಾಗಿ ತನಗೆ ಪ್ರೋತ್ಸಾಹ ನೀಡು ತ್ತಲೇ ಇದ್ದ ಹಿತೈಷಿಗಳಿಗೆ ತಾನು ಕೃತಜ್ಞಳಾಗಿದ್ದೇನೆ ಎಂದು ಪ್ರಿಯಾಂಕಾ ಭಾರತ್ ಚಿತ್ರದಲ್ಲಿ ನಟಿಸುವ ವಿಷಯವನ್ನು ಅಧಿಕೃತವಾಗಿ ಘೋಷಿಸಿದ ಸಂದರ್ಭದಲ್ಲಿ ಟ್ವೀಟ್ ಮಾಡಿದ್ದಾರೆ.

ಪ್ರಸ್ತುತ ಅಲಿ ಜಾಫರ್ ಅವರು ಚಿತ್ರದ ಶೂಟಿಂಗ್‌ನ ಪೂರ್ವ ಸಿದ್ಧತೆಯಲ್ಲಿ ನಿರತರಾಗಿದ್ದಾರೆ. ಹಾಲಿವುಡ್ ಹಾಗೂ ಅಮೆರಿಕನ್ ಟಿವಿ ಧಾರಾವಾಹಿಯಲ್ಲಿ ತನ್ನ ಅಭಿನಯ ಸಾಮರ್ಥ್ಯವನ್ನು ಸಾಬೀತುಪಡಿಸಿದ ಪಿಯಾಂಕಾ ಚೋಪ್ರಾಗೆ ಭಾರತ್ ನಲ್ಲಿ ಅತ್ಯಂತ ವಿಶಿಷ್ಟವಾದ ಪಾತ್ರವಿದೆಯೆಂದು ಚಿತ್ರತಂಡ ಹೇಳಿಕೊಂಡಿದೆ.

 ‘‘ಅಂತರ್‌ರಾಷ್ಟೀಯ ಮಟ್ಟದ ನಟಿಯಾಗಿರುವ ಪ್ರಿಯಾಂಕಾ ಈ ಚಿತ್ರಕ್ಕೆ ಅತ್ಯಂತ ಸೂಕ್ತ ಆಯ್ಕೆಯಾಗಿದ್ದಾರೆ. ಅಂತರ್‌ರಾಷ್ಟ್ರೀಯವಾಗಿಯೂ ಪ್ರಸ್ತುತತೆಯುಳ್ಳ ಕಥೆಯನ್ನು ಹೊಂದಿರುವ ಈ ಚಿತ್ರದ ಮೂಲಕ ಪ್ರಿಯಾಂಕಾರ ಇಮೇಜ್ ಜಾಗತಿಕ ಮಟ್ಟದಲ್ಲಿ ಇಮ್ಮಡಿಗೊಳ್ಳಲಿದೆ. ಚಿತ್ರದ ಕಥಾ ನಾಯಕ ಸಲ್ಮಾನ್ ಆಗಿದ್ದರೂ, ಪ್ರಿಯಾಂಕಾ ಅವರ ಪಾತ್ರ ಇಡೀ ಚಿತ್ರದ ಅಂತರಾತ್ಮವಾಗಿದೆ’’ ಎಂದು ಜಾಫರ್ ಬಣ್ಣಿಸಿದ್ದಾರೆ.

ಭಾರತ್ ಒಂದು ಅತ್ಯಂತ ಪ್ರಬುದ್ಧತೆಯಿರುವ ನವಿರಾದ ಒಂದು ಪ್ರೇಮಕಥಾನಕವಾಗಿದೆ. ಈ ಚಿತ್ರದಲ್ಲಿ ಸಲ್ಮಾನ್ ಯುವಕ, ಮಧ್ಯವಯಸ್ಕ ಹಾಗೂ 70 ಹರೆಯದ ವೃದ್ಧ ಹೀಗೆ ಮೂರು ವಿಭಿನ್ನ ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭಾರತ್ ಚಿತ್ರದ ಕಥೆ ಸುಮಾರು 70 ವರ್ಷಗಳ ಅವಧಿಯಲ್ಲಿ ನಡೆಯುವ ಕಥಾವಸ್ತುವನ್ನು ಹೊಂದಿದೆ. ಕೊರಿಯನ್ ಚಿತ್ರ ‘ಓಡೆ ಟು ಮೈ ಫಾದರ್’ ಚಿತ್ರದ ರಿಮೇಕ್ ಆಗಿದ್ದರೂ, ಭಾರತ್‌ನ ಕಥೆ ಭಾರತೀಯರಿಗೆ ಇಷ್ಟವಾಗುವುದರಲ್ಲಿ ಸಂದೇಹವಿಲ್ಲವೆಂದು ಚಿತ್ರತಂಡ ಆತ್ಮವಿಶ್ವಾಸ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News