ಭಾರತೀಯ ಸಿನೆಮಾಗಳಲ್ಲಿ ವಾಸ್ತವ ಜೀವನ ನಾಪತ್ತೆಯಾಗಿದೆ

Update: 2018-04-20 13:02 GMT

ಇರಾನ್ ಮೂಲದ ಚಿತ್ರ ನಿರ್ದೇಶಕ ಮಜೀದ್ ಮಜಿದಿ ಭಾರತೀಯ ಚಿತ್ರ ನಿರ್ದೇಶಕ ಸತ್ಯಜೀತ್ ರೇಯವರಿಂದ ಬಹುವಾಗಿ ಪ್ರಭಾವಿತ ರಾಗಿರುವವರು. ಸದ್ಯ ಮುಂಬೈ ನಗರಿಯ ಸಾಮಾನ್ಯ ಜನರ ಜೀವನದ ಕುರಿತಾಗಿರುವ ಬಾಲಿವುಡ್ ಸಿನೆಮಾ ಬಿಯಾಂಡ್ ದ ಕ್ಲೌಡ್ಸ್ ಅನ್ನು ನಿರ್ದೇಶಿಸಿ ಬಿಡುಗಡೆಗಾಗಿ ಕಾಯುತ್ತಿರುವ ಮಜಿದಿ ಭಾರತದಲ್ಲಿ ತಮ್ಮ ಚಿತ್ರ ಜೀವನ ಮತ್ತು ಇಲ್ಲಿನ ಸಿನೆಮಾಗಳ ಬಗ್ಗೆ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ವಿವರವಾಗಿ ಮಾತನಾಡಿದ್ದಾರೆ. ನಿರ್ದೇಶಕ ಸತ್ಯಜೀತ್ ರೇಯವರ ಸಿನೆಮಾ ಶೈಲಿಯಿಂದ ಪ್ರಭಾವಿತರಾಗಿರುವ ಮಜಿದಿ, ರೇಯವರು ದೈನಂದಿನ ಜೀವನದಲ್ಲಿನ ನಾಯಕರ ಬಗ್ಗೆ ಚಿತ್ರ ನಿರ್ಮಿಸುತ್ತಿದ್ದರು. ಆದರೆ ಇಂದಿನ ಭಾರತೀಯ ಸಿನೆಮಾಗಳಲ್ಲಿ ಅದು ಕಾಣುತ್ತಿಲ್ಲ ಎಂದು ತಿಳಿಸುತ್ತಾರೆ. ಇತ್ತೀಚಿನ ಭಾರತೀಯ ಸಿನೆಮಾಗಳಲ್ಲಿ ವಾಸ್ತವ ಜೀವನ ನಾಪತ್ತೆಯಾಗಿದೆ ಎಂದು ಅಭಿಪ್ರಾಯಪಡುತ್ತಾರೆ.

ಸತ್ಯಜೀತ್ ರೇ ಸಿನೆಮಾಗಳು ನನ್ನ ಮೇಲೆ ಪ್ರಭಾವ ಬೀರಿವೆ. ಜೀವನದ ಹಲವು ಮಜಲುಗಳನ್ನು ತಿಳಿಯಲು ಅದು ನನಗೆ ಸ್ಫೂರ್ತಿ ನೀಡಿವೆ. ಪಾಥೇರ್ ಪಾಂಚಾಲಿಯಲ್ಲಿ ನಾಯಕ ಬಡವನಾಗಿದ್ದರೂ ಆ ಪಾತ್ರಕ್ಕೆ ಒಂದು ಗೌರವವಿತ್ತು. ರೇ ಸಿನೆಮಾಗಳ ನಾಯಕರ ಪಾತ್ರಗಳು ಅವರ ಸಮಾಜದ ವರ್ಗದಿಂದಲೇ ಬರುತ್ತವೆ ಮತ್ತು ಬದುಕಲು ಹೋರಾಟ ಮಾಡುತ್ತವೆ ಎಂದು ಮಜಿದಿ ಹೇಳುತ್ತಾರೆ.

ಹೋರಾಟದ ಜೀವನ ನಡೆ ಸುವವರು ನನ್ನ ನಾಯಕರು. ನಾನು ಬಡತನವನ್ನು ವೈಭವೀಕ ರಿಸುತ್ತಿಲ್ಲ. ಅದು ಕೆಟ್ಟದ್ದು. ಆದರೆ ಒಬ್ಬ ಮನುಷ್ಯನಿಗೆ ಸಾಕಷ್ಟು ಆಂತರಿಕ ವೌಲ್ಯಗಳಿರುತ್ತವೆ, ನಾವದನ್ನು ಗಮನಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಮಜಿದಿ ಅಭಿಪ್ರಾಯಿಸುತ್ತಾರೆ.

ಸಾಂಸ್ಕೃತಿಕವಾಗಿ ಇರಾನ್ ಜೊತೆ ಸಾಮಿಪ್ಯ ಹೊಂದಿರುವ ಭಾರತದಲ್ಲಿ ಸಿನೆಮಾವೊಂದನ್ನು ನಿರ್ದೇಶಿಸಿರುವುದು ಕನಸು ನಿಜವಾದಂತಾಗಿದೆ. ಮುಂಬೈಯ ಪ್ರತಿ ರಸ್ತೆಗಳು, ಪ್ರತಿ ಗಲ್ಲಿಗಳು ಕತೆಗಳಿಂದ ತುಂಬಿ ಹೋಗಿವೆ. ಇದನ್ನು ನೀವು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಇಲ್ಲಿರುವ ಕತೆಗಳನ್ನು ನಾವು ಭಾರತೀಯ ಸಿನೆಮಾಗಳಲ್ಲಿ ಯಾಕೆ ಕಾಣುವುದಿಲ್ಲ ಎಂದು ನನಗೆ ಕೆಲವೊಮ್ಮೆ ಅನಿಸುತ್ತದೆ. ಸತ್ಯಜೀತ್ ರೇ, ಶ್ಯಾಮ್ ಬೆನಗಲ್ ಮತ್ತು ಮೀರಾ ನಾಯರ್ ಅವರ ಸಿನೆಮಾಗಳ ಹೊರತಾಗಿ ಇತರ ಯಾವುದೇ ಸಿನೆಮಾಗಳಲ್ಲು ಈ ಕತೆಗಳನ್ನು ಕಾಣಲು ಸಾಧ್ಯವಿಲ್ಲ ಎಂದು ಮಜಿದಿ ಅಭಿಪ್ರಾಯಿಸುತ್ತಾರೆ. ಇತರ ಸಂಸ್ಕೃತಿ ಮತ್ತು ಜನರ ಬಗ್ಗೆ ಅನ್ವೇಷಿಸಲು ನನಗೆ ಬಹಳ ಆಸಕ್ತಿ. ಹೀಗೆ ಅನ್ವೇಷಣೆ ಮಾಡು ವುದರಿಂದ ಕೆಲವು ವಿಶಿಷ್ಟ ಸಂಗತಿಗಳನ್ನು ಕಲಿಯಬ ಹುದಾಗಿದೆ ಎನ್ನುತ್ತಾರೆ ಇರಾನ್‌ನ ಪ್ರಶಸ್ತಿ ವಿಜೇತ ನಿರ್ದೇಶಕ. ಬಾಲಕನಾಗಿರುವಾಗ ಗೋಡೆಯ ಇನ್ನೊಂದು ಬದಿಯಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿಯುವುದರಲ್ಲಿ ನನಗೆ ಬಹಳ ಆಸಕ್ತಿ. ಭಾರತದಲ್ಲಿ ಗೋಡೆಗಳು ಒಡೆದಿವೆ, ಹಾಗಾಗಿ ಅನೇಕ ವಸ್ತುಗಳನ್ನು ನೋಡಬಹುದಾಗಿದೆ. ಇತ್ತೀಚೆಗೆ ನಾನು ರಸ್ತೆಯಲ್ಲಿ ಓರ್ವ ವೃದ್ಧ ಬಹಳ ಕಡಿಮೆ ನೀರಿನಲ್ಲಿ ಸ್ನಾನ ಮಾಡುತ್ತಿರುವುದನ್ನು ಕಂಡೆ. ಆದರೆ ನಾನು ಹೊಟೇಲ್‌ನಲ್ಲಿ ಸ್ನಾನ ಮಾಡಲು ಸಾಕಷ್ಟು ನೀರನ್ನು ಬಳಸಿದ್ದೆ. ಹಾಗೆ ಮಾಡಿದ್ದಕ್ಕಾಗಿ ನನಗೆ ನಾನೇ ನಾಚಿಕೆ ಪಟ್ಟುಕೊಂಡೆ ಮತ್ತು ಮರುದಿನ ಅತಿಕಡಿಮೆ ನೀರು ಬಳಸಿ ಸ್ನಾನ ಮಾಡಲು ಮುಂದಾದೆ ಎನ್ನುತ್ತಾರೆ ಮಜಿದಿ. ಸಿನೆಮಾ ನಿರ್ದೇ ಶಿಸುವಾಗ ನಾನು ಬದುಕಿರುವಂತೆ ಭಾಸವಾಗುತ್ತದೆ. ಯಾವಾಗ ಸಿನೆಮಾ ಮಾಡುತ್ತಿಲ್ಲವೋ ಆ ಸಮಯದಲ್ಲಿ ನಾನು ಬದುಕಿಯೇ ಇಲ್ಲ ಎಂಬ ಭಾವನೆ ಮೂಡುತ್ತದೆ. ನನ್ನ ಪಾಲಿಗೆ ಸಿನೆಮಾ ಮಾಡುವುದು ಎಂದರೆ ಉಸಿರಾಡುವುದು. ಹಾಗಾಗಿ ನನ್ನಿಂದ ಎಲ್ಲಿಯವರೆಗೆ ಸಾಧ್ಯವೋ ಅಲ್ಲಿಯವರೆಗೆ ಚಿತ್ರ ನಿರ್ದೇಶನ ಮಾಡುತ್ತಲೇ ಇರುತ್ತೇನೆ. ಹಾಗಂದ ಮಾತ್ರಕ್ಕೆ ನಾನು ನನ್ನ ಜೀವನದ ಇನ್ನೊಂದು ಆಯಾಮವನ್ನು ಇಷ್ಟಪಡುವುದಿಲ್ಲ ಎಂದಲ್ಲ. ಆದರೆ ಅದು ಬಹಳ ಖಾಸಗಿ ಮತ್ತು ರಹಸ್ಯವಾಗಿರುವಂಥದ್ದು. ಜಗತ್ತಿನಲ್ಲಿ ನನ್ನ ನಂತರ ಉಳಿಯುವುದು ನಾನು ಮಾಡಿರುವ ಕೆಲಸ ಮಾತ್ರ ಹಾಗಾಗಿ ನನಗೆ ಸಿನೆಮಾ ಮಾಡುವ ನನ್ನ ಜೀವನದ ಭಾಗವೇ ಬಹಳ ಇಷ್ಟ ಎನ್ನುತ್ತಾರೆ ಮಜಿದಿ.

ದೈನಂದಿನ ಜೀವನದ ಆಗುಹೋಗುಗಳನ್ನು ಬೆಳ್ಳಿ ಪರದೆಯ ಮೇಲೆ ಅತ್ಯಂತ ಸೂಕ್ಷ್ಮವಾಗಿ ತೋರಿಸುವಲ್ಲಿ ಮಜಿದಿ ನೈಪುಣ್ಯತೆ ಪಡೆದಿದ್ದಾರೆ. ಅವರು ನಿರ್ದೇಶಿಸಿದ ಚಿಲ್ಡ್ರನ್ ಆಫ್ ಹೆವೆನ್ ಅತ್ಯುತ್ತಮ ವಿದೇಶಿ ಸಿನೆಮಾ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಗೆ ನಾಮಾಂಕಿತಗೊಂಡಿತ್ತು. ಈ ಸಿನೆಮಾವನ್ನು ಹಿಂದಿಯಲ್ಲೂ ಮರುನಿರ್ಮಾಣ ಮಾಡಲಾಗಿದೆ. ಮಜಿದಿ ನಿರ್ದೇಶನದ ಬಿಯಾಂಡ್ ದ ಕ್ಲೌಡ್ಸ್ ಸಿನೆಮಾ, ಆಮಿರ್ (ಇಶಾನ್ ಕಟ್ಟರ್) ಎಂಬ ಯುವಕ ಮತ್ತು ಆತನ ಸಹೋದರಿ ತಾರಾ (ಮಾಳವಿಕಾ ಮೋಹನನ್) ಸುತ್ತ ಸುತ್ತುತ್ತದೆ. ಆಮಿರ್ ತನ್ನ ಕಳೆದುಹೋದ ಸಹೋದರಿಯ ಪತ್ತೆಗಾಗಿ ಅಲೆದಾಡುತ್ತಾನೆ ಜೊತೆಗೆ ಪೊಲೀಸರಿಂದಲೂ ಆತ ತಪ್ಪಿಸಿಕೊಳ್ಳುತ್ತಿದ್ದಾನೆ. ಇದೇ ವೇಳೆ ಆತನ ಸಹೋದರಿ ತಾರಾ ತನ್ನ ಸಹೋದರನನ್ನು ರಕ್ಷಿಸುವ ಪ್ರಯತ್ನದಲ್ಲಿ ತಾನೇ ಜೈಲುಪಾಲಾಗುತ್ತಾಳೆ. ಅವರ ಇಡೀ ಜೀವನ ಹತಾಶೆಯಲ್ಲೇ ಕಳೆಯುತ್ತಿರುವಾಗ ಭರವಸೆಯೊಂದು ಅವರ ಬಾಳಲ್ಲಿ ಅನಿರೀಕ್ಷಿತವಾಗಿ ಕಾಣಿಸಿಕೊಳ್ಳುತ್ತದೆ. ಈ ಸಿನೆಮಾಕ್ಕೆ ಭಾರತೀಯ ಯುವತಿಯನ್ನೇ ಮುಖ್ಯ ಪಾತ್ರದಲ್ಲಿ ಹಾಕಲು ಬಯಸಿದ್ದ ಮಜಿದಿ ಆ ಪಾತ್ರಕ್ಕೆ ಮಾಳವಿಕಾನೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದರು. ಈ ಬಗ್ಗೆ ಮಾತನಾಡುವ ಮಜಿದಿ, ಮಾಳವಿಕಾಳ ಮುಖ ನನಗೆ ಬಹಳ ಮುಖ್ಯವಾಗಿತ್ತು. ಯಾಕೆಂದರೆ ನನಗೆ ಭಾರತೀಯ ಮುಖವೇ ಬೇಕಿತ್ತು. ಮುಖ್ಯವಾಗಿ ಅಂತರ್‌ರಾಷ್ಟ್ರೀಯ ಪ್ರೇಕ್ಷಕರು ಸಿನೆಮಾ ನೋಡಿದ ಕೂಡಲೇ ಅದು ಭಾರತೀಯ ಹುಡುಗಿ ಎಂಬ ಭಾವನೆ ಅವರಲ್ಲಿ ಮೂಡಬೇಕು ಎಂಬುದು ನನ್ನ ಇರಾದೆಯಾಗಿತ್ತು ಎನ್ನುತ್ತಾರೆ. ಮೊದಲಿಗೆ ನಾವು ಜೈಲಿನ ಹೊರಗಿನ ಭಾಗವನ್ನು ಚಿತ್ರೀಕರಿಸಿದೆವು. ನಂತರ ನಾನು ಆಕೆಯಲ್ಲಿ ಸ್ವಲ್ಪ ದೇಹ ಕರಗಿಸುವಂತೆ ತಿಳಿಸಿದೆ. ಜೈಲಿನ ಒಳಗಿರುವ ಭಾಗದಲ್ಲಿ ಆಕೆ ಸ್ವಲ್ಪ ಸಪೂರ ಕಾಣಬೇಕಿತ್ತು. ಅದಕ್ಕಾಗಿ ಆಕೆ ಬಹಳ ಶ್ರಮಪಟ್ಟಿದ್ದಾಳೆ ಎನ್ನುತ್ತಾರೆ ಮಜಿದಿ. ನಾಯಕನ ಪಾತ್ರಕ್ಕಾಗಿ ನಡೆಸಿದ ಆಡಿಶನ್‌ನಲ್ಲಿ ಮಜಿದಿಗೆ ಇಶಾನ್ ಕಟ್ಟರ್ ಇಷ್ಟವಾಗಿದ್ದರು. ಹಾಗಾಗಿ ಅವರನ್ನು ಮುಖತಃ ಭೇಟಿಯಾಗಲು ನಿರ್ಧರಿಸಿದರು. ಮೊದಲ ಭೇಟಿಯಲ್ಲೇ ಇಶಾನ್, ಮಜಿದಿಯ ಮನಗೆದ್ದರು.

ನಾನು ಇಶಾನ್‌ನನ್ನು ಮೊದಲ ಬಾರಿ ಭೇಟಿ ಯಾದಾಗ ಆತ ಟೀ-ಶರ್ಟ್ ಧರಿಸಿದ್ದು ದಷ್ಟಪುಷ್ಟ ದೇಹ ಹೊಂದಿದ್ದ. ನನ್ನ ಮುಂದೆ ಆತ ತನ್ನ ದೇಹವನ್ನು ಉಬ್ಬಿಸಿ ಕುಳಿತಿದ್ದ. ಆತನತ್ತ ನೋಡಿದ ನಾನು, ನಿನ್ನ ಮುಖದ ಬಗ್ಗೆ ಸಮಸ್ಯೆಯಿಲ್ಲ. ಆದರೆ ನಿನ್ನ ದೇಹದಲ್ಲಿ ನನಗೆ ದೊಡ್ಡ ಸಮಸ್ಯೆಯಿದೆ. ನೀನು ದೇಹತೂಕವನ್ನು ಇಳಿಸಬೇಕು ಎಂದೆ. ಮುಂದಿನ ಬಾರಿ ನನ್ನನ್ನು ಭೇಟಿಯಾದಾಗಲೂ ಇಶಾನ್ ಟಿ-ಶರ್ಟ್ ಧರಿಸಿದ್ದ. ಆದರೆ ಇ ಬಾರಿ ದೇಹವನ್ನು ಬಾಗಿಸಿ ಕುಳಿತಿದ್ದ ಎಂದು ಹೇಳುತ್ತಾರೆ ಮಜಿದಿ. ‘ಬಿಯಾಂಡ್ ದ ಕ್ಲೌಡ್ಸ್’ ಎಪ್ರಿಲ್ 20ರಂದು ತೆರೆಕಾಣಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News