ಐದು ವರ್ಷಗಳಲ್ಲೇ ಗರಿಷ್ಟ ಮಟ್ಟ ತಲುಪಿದ ಪೆಟ್ರೋಲ್ ಬೆಲೆ
ಹೊಸದಿಲ್ಲಿ, ಎ.20: ಶುಕ್ರವಾರ ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ 74.08 ರೂ. ತಲುಪುವ ಮೂಲಕ ಐದು ವರ್ಷಗಳಲ್ಲೇ ಗರಿಷ್ಟ ಮಟ್ಟದ ಏರಿಕೆಯನ್ನು ಕಂಡಿದೆ. 2013ರ ಸೆಪ್ಟೆಂಬರ್‌ನಲ್ಲಿ ದಿಲ್ಲಿಯಲ್ಲಿ ಪೆಟ್ರೋಲ್ ದರವು 74.10 ರೂ. ತಲುಪಿತ್ತು. ಕೊಲ್ಕತ್ತಾ , ಮುಂಬೈ ಮತ್ತು ಚೆನ್ನೈಯಲ್ಲೂ ಪೆಟ್ರೋಲ್ ಬೆಲೆ ಕ್ರಮವಾಗಿ 76.78 ರೂ., 81.93 ರೂ., ಹಾಗೂ 76.85 ರೂ. ತಲುಪುವ ಮೂಲಕ ಹೊಸ ದಾಖಲೆ ಬರೆದಿದೆ. ಈ ನಗರಗಳಲ್ಲಿ ಈ ಹಿಂದಿನ ದಾಖಲೆ ಬೆಲೆ ಕ್ರಮವಾಗಿ 78.03 ರೂ., 82.07 ರೂ. ಹಾಗೂ 76.93 ರೂ. ಆಗಿತ್ತು. ಡೀಸೆಲ್ ದರದಲ್ಲೂ ಶುಕ್ರವಾರ ದಾಖಲೆಯ ಏರಿಕೆಯಾಗಿದ್ದು ದಿಲ್ಲಿ, ಕೊಲ್ಕತ್ತಾ, ಮುಂಬೈ ಮತ್ತು ಚೆನ್ನೈಯಲ್ಲಿ ಕ್ರಮವಾಗಿ 65.31 ರೂ., 68.01 ರೂ., 69.54 ರೂ. ಹಾಗೂ 68.90 ರೂ. ತಲುಪಿದೆ. ಕಚ್ಚಾತೈಲಕ್ಕೆ ಹೆಚ್ಚಿರುವ ಬೇಡಿಕೆ ಮತ್ತು ಪೆಟ್ರೋಲಿಯಂ ರಫ್ತುದಾರ ದೇಶಗಳ ಸಂಘಟನೆ ಪೂರೈಕೆಯನ್ನು ಕಡಿತಗೊಳಿಸಿರುವುದರಿಂದ ಕಚ್ಚಾತೈಲ ಬೆಲೆಯಲ್ಲಿ ಉಂಟಾಗಿರುವ ಏರಿಕೆಯಿಂದ ಶುಕ್ರವಾರ ಪೆಟ್ರೋಲ್ ಬೆಲೆ ಗಗನಕ್ಕೇರಿದೆ ಎಂದು ಇಂಡಿಯನ್ ಆಯಿಲ್ ಜಾಲತಾಣದಲ್ಲಿ ತಿಳಿಸಲಾಗಿದೆ.