ಮಕ್ಕಳ ಅತ್ಯಾಚಾರಿಗಳಿಗೆ ಮರಣ ದಂಡನೆಗೆ ಕೇಂದ್ರ ಚಿಂತನೆ

Update: 2018-04-20 13:53 GMT

ಹೊಸದಿಲ್ಲಿ, ಎ.20: 12 ವರ್ಷ ಪ್ರಾಯದ ವರೆಗಿನ ಮಕ್ಕಳ ಅತ್ಯಾಚಾರಿಗಳಿಗೆ ಮರಣ ದಂಡನೆ ವಿಧಿಸುವ ಸಲುವಾಗಿ ಲೈಂಗಿಕ ಶೋಷಣೆಯಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ)ಗೆ ತಿದ್ದುಪಡಿ ಮಾಡುವ ಪ್ರಕ್ರಿಯೆಯನ್ನು ಆರಂಭಿಸಿರುವುದಾಗಿ ಕೇಂದ್ರ ಸರಕಾರ ಶುಕ್ರವಾರದಂದು ಸರ್ವೋಚ್ಚ ನ್ಯಾಯಾಲಯಕ್ಕೆ ಪತ್ರ ಮುಖೇನ ತಿಳಿಸಿದೆ. ಮಕ್ಕಳ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಕೋರಿ ಹಾಕಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪ್ರತಿಕ್ರಿಯೆಯಾಗಿ ನೀಡಿದ ವರದಿಯಲ್ಲಿ ಕೇಂದ್ರವು ಈ ವಿಷಯವನ್ನು ತಿಳಿಸಿದೆ.

ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ಎಂಟರ ಹರೆಯದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡೀ ದೇಶವನ್ನು ತಲ್ಲಣಗೊಳಿಸಿರುವ ಹಿನ್ನೆಲೆಯಲ್ಲಿ ಕೇಂದ್ರದ ಈ ನಿರ್ಧಾರ ಮಹತ್ವವನ್ನು ಪಡೆದುಕೊಂಡಿದೆ. ಇದೇ ವೇಳೆ ಗುರುವಾರದಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಕೇಂದ್ರ ಮಕ್ಕಳ ಮತ್ತು ಮಹಿಳಾಭಿವೃದ್ಧಿ ಸಚಿವೆ ಮೇನಕಾ ಗಾಂಧಿ, ಲೈಂಗಿಕ ಅಪರಾಧಗಳನ್ನು ತಡೆಯಲು ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳು ಹಾಗೂ ಲೈಂಗಿಕ ಅಪರಾಧಗಳ ವಿವಿಧ ಆಯಾಮಗಳ ಜೊತೆ ಹೋರಾಡಲು ಪೊಲೀಸರಿಗೆ ಮರುತರಬೇತಿ ನೀಡುವ ಅಗತ್ಯದ ಬಗ್ಗೆ ವಿವರಿಸಿದ್ದಾರೆ. ಲೈಂಗಿಕ ಅಪರಾಧ ಪ್ರಕರಣಗಳ ತನಿಖೆ ನಡೆಸಲು ಪೊಲೀಸರಿಗೆ ಕಾನೂನಿನ ನಿಗದಿತ ಅವಧಿಯಲ್ಲಿ ತನಿಖೆಯನ್ನು ಸಂಪೂರ್ಣಗೊಳಿಸಲು ಅತ್ಯಂತ ಹೆಚ್ಚಿನ ಪ್ರಾಮುಖ್ಯತೆ ನೀಡುವಂತೆ ಸೂಚಿಸಬೇಕು. ತನಿಖೆಗೆ ಅಡ್ಡಿಪಡಿಸುವ ಅಥವಾ ಆರೋಪಿಗಳ ಜೊತೆ ಕೈಜೋಡಿಸುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಸಚಿವೆ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಕಳೆದ ಒಂದು ವಾರದಲ್ಲಿ ಉತ್ತರ ಪ್ರದೇಶ ಮತ್ತು ಚತ್ತೀಸ್‌ಗಡದಲ್ಲಿ ಮೂರು ಮಕ್ಕಳ ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News