ನಾವು ಬಡಪಾಯಿಗಳು ಏನು ಮಾಡಲು ಸಾಧ್ಯ : ನ್ಯಾ. ಲೋಯಾ ಸೋದರನ ಅಳಲು
ಹೊಸದಿಲ್ಲಿ, ಎ.20: ನ್ಯಾ. ಲೋಯಾ ನಿಗೂಢ ಸಾವಿನ ಪ್ರಕರಣದ ಬಗ್ಗೆ ಸ್ವತಂತ್ರ ತನಿಖೆಗೆ ಆಗ್ರಹಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ವಜಾಗೊಳಿಸಿರುವ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಅಸಮಾಧಾನ ಸೂಚಿಸಿರುವ ಲೋಯಾ ಸೋದರ ಶ್ರೀನಿವಾಸ ಲೋಯ, ಈ ಕುರಿತು ಹೇಳಬೇಕಾದ್ದು ಏನೂ ಇಲ್ಲ. ಏನಾಗಿದೆಯೋ ಅದು ಆಗಿ ಹೋಗಿದೆ. ಈಗ ಏನು ಮಾಡಲು ಸಾಧ್ಯ ಎಂದು ಪ್ರತಿಕ್ರಿಯಿಸಿದ್ದಾರೆ.
ಪ್ರಶಾಂತ್ ಭೂಷಣ್‌ರಂತಹ ವಕೀಲರು ಈ ವಿಷಯದಲ್ಲಿ ನೀಡಿರುವ ಹೇಳಿಕೆಯನ್ನು ಸುಪ್ರೀಂಕೋರ್ಟ್ ಆಲಿಸಿದೆ. ಬಳಿಕ ತನ್ನ ತೀರ್ಪು ನೀಡಿದೆ. ಹಾಗಿರುವಾಗ ನಮ್ಮ ಸ್ಥಾನಮಾನ ಯಾವ ಲೆಕ್ಕ . ನಾವು ಬಹಳ ಸಣ್ಣ ಜನರು ಎಂದು ಶ್ರೀನಿವಾಸ್ ಲೋಯಾ ಹೇಳಿದ್ದಾರೆ. ಈಗ ಈ ವಿಷಯದಲ್ಲಿ ಏನನ್ನೂ ಹೇಳದಿರುವುದೇ ಒಳ್ಳೆಯದು. ಈಗ ಆಡುವ ಮಾತಿನಿಂದ ಏನೂ ಪ್ರಯೋಜನವಾಗದು. ಈ ವಿಷಯದಲ್ಲಿ ನಮಗೆ ಇನ್ನೇನೂ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಈ ಹಿಂದೆ ‘ದಿ ಕ್ಯಾರವಾನ್’ ಮ್ಯಾಗಝಿನ್‌ಗೆ ಸಂದರ್ಶನ ನೀಡಿದ್ದ ನ್ಯಾ. ಲೋಯಾರ ಸಹೋದರಿ ಅನುರಾಧಾ ಬಿಯಾನಿ ತನ್ನ ಸಹೋದರನ ಸಾವಿನ ಸಂದರ್ಭದ ಕುರಿತು ಪ್ರಶ್ನಿಸಿದ್ದರು. ನ್ಯಾಯಮೂರ್ತಿ ಲೋಯಾಗೆ ಭಾರೀ ಮೊತ್ತದ ಲಂಚದ ಆಮಿಷ ಒಡ್ಡಲಾಗಿತ್ತು ಹಾಗೂ ಅವರ ಮೇಲೆ ಮಾನಸಿಕ ಒತ್ತಡ ಹೇರಲಾಗಿತ್ತು ಎಂದು ಇನ್ನೋರ್ವ ಸಂಬಂಧಿ ಆರೋಪಿಸಿದ್ದರು. ಆದರೆ ಈ ಎಲ್ಲಾ ಹೇಳಿಕೆಗಳನ್ನು ಮಹಾರಾಷ್ಟ್ರ ಪೊಲೀಸರು ತಳ್ಳಿಹಾಕಿದ್ದರು.
ಈ ಮಧ್ಯೆ, ಕಳೆದ ಜನವರಿಯಲ್ಲಿ ಹೇಳಿಕೆ ನೀಡಿದ್ದ ಲೋಯಾರವರ ಪುತ್ರ ಅನುಜ್ ಲೋಯಾ, ತನ್ನ ತಂದೆಯ ಸಾವಿನ ಕಾರಣದ ಬಗ್ಗೆ ಕುಟುಂಬಕ್ಕೆ ಯಾವುದೇ ಸಂಶಯವಿಲ್ಲ. ಈ ಹಿಂದೆ ಭಾವನಾತ್ಮಕ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಕೆಲವು ಹೇಳಿಕೆ ನೀಡಿದ್ದಾರೆ. ಆದರೆ ಈಗ ಎಲ್ಲವೂ ಸ್ಪಷ್ಟವಾಗಿದೆ ಎಂದಿದ್ದರು.