ಮುಖ್ಯ ನ್ಯಾಯಾಧೀಶರ ಪದಚ್ಯುತಿ ನಿರ್ಣಯ ದುರದೃಷ್ಟಕರ: ಸುಪ್ರೀಂ ಕೋರ್ಟ್

Update: 2018-04-20 13:57 GMT

ಹೊಸದಿಲ್ಲಿ, ಎ.20: ದೇಶದ ಮುಖ್ಯ ನ್ಯಾಯಾಧೀಶರ ಪದಚ್ಯುತಿ ನಿರ್ಣಯಕ್ಕೆ ಸಂಬಂಧಿಸಿ ಸಾರ್ವಜನಿಕವಾಗಿ ನಡೆಯುತ್ತಿರುವ ಚರ್ಚೆ ಮತ್ತು ಘಟನಾವಳಿಗಳು ದುರದೃಷ್ಟಕರ ಮತ್ತು ತೀವ್ರ ಖೇದವನ್ನುಂಟು ಮಾಡಿದೆ ಎಂದು ಸರ್ವೋಚ್ಚ ನ್ಯಾಯಾಲಯ ಶುಕ್ರವಾರ ತಿಳಿಸಿದೆ. ಸಿಜೆಐಯ ಪದಚ್ಯುತಿ ಕುರಿತು ಹಲವು ಸಮಯದಿಂದ ನಡೆಯುತ್ತಿರುವ ಚರ್ಚೆಯಿಂದ ದುಃಖವಾಗಿದೆ ಎಂದು ನ್ಯಾಯಾಧೀಶ ಎ.ಕೆ ಸಿಕ್ರಿ ಮತ್ತು ಅಶೋಕ್ ಭೂಷಣ್ ಅವರನ್ನೊಳಗೊಂಡ ಪೀಠವು ತಿಳಿಸಿದೆ.

ಈ ವಿಷಯದಲ್ಲಿ ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್ ಅವರ ಸಹಾಯವನ್ನು ಕೋರಿದ ಪೀಠವು, ಸದ್ಯ ನಡೆಯುತ್ತಿರುವ ಬೆಳವಣಿಗೆಗಳಿಂದ ಬಹಳ ದುಃಖವಾಗಿದೆ. ಇದು ನಿಜವಾಗಿಯೂ ದುರದೃಷ್ಟಕರ ಎಂದು ತಿಳಿಸಿದೆ. ಸರಕಾರೇತರ ಸಂಸ್ಥೆ ಹಾಕಿರುವ ಸಾರ್ವಜನಿಕ ಹಿತಾಸಕ್ತಿ ದಾವೆಯಲ್ಲಿ, ಮುಖ್ಯ ನ್ಯಾಯಾಧೀಶರ ಪದಚ್ಯುತಿ ಕುರಿತು ಸಂಸದರು ಮತ್ತು ಮಾಧ್ಯಮಗಳು ಬಹಿರಂಗವಾಗಿ ಚರ್ಚಿಸುವುದರ ಮೇಲೆ ನಿರ್ಬಂಧ ಹೇರಬೇಕು ಎಂದು ನ್ಯಾಯಾಲಯದಲ್ಲಿ ಮನವಿ ಮಾಡಿದೆ. ವಿಧಿ 121ರ ಅಡಿಯಲ್ಲಿ, ನ್ಯಾಯಾಧೀಶರ ನಡವಳಿಕೆ ಬಗ್ಗೆ ಒಂದು ಹಂತದವರೆಗೆ ಸಂಸದರು ಕೂಡಾ ಚರ್ಚೆ ನಡೆಸುವುದನ್ನು ನಿರ್ಬಂಧಿಸಲಾಗಿದೆ. ಹಾಗಾಗಿ ಸಂಸದರು ತಮಗೆ ಬೇಕೆಂದಾಗ ಎಲ್ಲಿ ಬೇಕೆಂದರಲ್ಲಿ ಈ ವಿಷಯ ಕುರಿತು ಮಾತನಾಡುವ ಹಾಗಿಲ್ಲ. ಇದು ನ್ಯಾಯಾಂಗದ ಸ್ವಾತಂತ್ರದ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಸ್ಥೆಯ ಪರ ವಕೀಲೆ ಮೀನಾಕ್ಷಿ ಅರೋರಾ ತಿಳಿಸಿದ್ದಾರೆ. ಮುಖ್ಯ ನ್ಯಾಯಾಧೀಶರ ಪದಚ್ಯುತಿ ಕುರಿತು ಹಲವು ದಿನಗಳಿಂದ ಚರ್ಚೆ ನಡೆಯುತ್ತಲೇ ಇದೆ.

ಈ ಚರ್ಚೆಯ ನೇತೃತ್ವ ವಹಿಸಿರುವ ಕಾಂಗ್ರೆಸ್ ಪದಚ್ಯುತಿಯ ಪರ ಸಹಿ ಅಭಿಯಾನವನ್ನೂ ನಡೆಸುತ್ತಿದೆ. ಇದಕ್ಕೆ ಕಾಂಗ್ರೆಸ್ ಸೇರಿದಂತೆ ಇತರ ರಾಜಕೀಯ ಪಕ್ಷದ ಹಲವು ಸಂಸದರು ಸಹಿ ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News