ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಶೂಟಿಂಗ್‌ಕೈಬಿಟ್ಟಿದ್ದು ಭಾರತಕ್ಕೆ ದೊಡ್ಡ ಹಿನ್ನಡೆ

Update: 2018-04-20 18:30 GMT

ಹೊಸದಿಲ್ಲಿ, ಎ.20: ‘‘ಬರ್ಮಿಂಗ್‌ಹ್ಯಾಮ್‌ನಲ್ಲಿ 2022ರಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಶೂಟಿಂಗ್‌ನ್ನು ಕೈಬಿಟ್ಟಿದ್ದು ಭಾರತಕ್ಕೆ ದೊಡ್ಡ ಹಿನ್ನಡೆಯಾಗಿದೆ. ಇದರಿಂದ ಯುವ ಶೂಟರ್‌ಗಳಿಗೆ ತುಂಬಾ ನಷ್ಟವಾಗಿದೆ’’ಎಂದು ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಜಯಿಸಿದ ಭಾರತದ ಏಕೈಕ ಶೂಟರ್ ಅಭಿನವ್ ಬಿಂದ್ರಾ ಅಭಿಪ್ರಾಯಪಟ್ಟಿದ್ದಾರೆ.

‘‘ನಮ್ಮ ದೇಶಕ್ಕೆ ಹಾಗೂ ಶೂಟರ್‌ಗಳಿಗೆ ಇದರಿಂದ ತೀವ್ರ ಹಿನ್ನಡೆಯಾಗುವುದರಲ್ಲಿ ಅನುಮಾನವೇ ಇಲ್ಲ. ಉದಯೋನ್ಮುಖ ಶೂಟರ್‌ಗಳಿಗೆ ಇದರಿಂದ ತುಂಬಾ ಸಮಸ್ಯೆಯಾಗಲಿದೆ. ಶೂಟಿಂಗ್ ಒಂದು ಆಯ್ದ ಕ್ರೀಡೆಯಾಗಿದೆ. ಶೂಟಿಂಗ್ ಸ್ಪರ್ಧೆ ಆಯೋಜಿಸಲು ತಮ್ಮಲ್ಲಿ ವ್ಯವಸ್ಥೆಗಳಿಲ್ಲ ಎಂದು ಬರ್ಮಿಂಗ್‌ಹ್ಯಾಮ್ ಗೇಮ್ಸ್ ಆಯೋಜಕರು ಹೇಳುತ್ತಿದ್ದಾರೆ. ಈ ಮೊದಲು 2022ರ ಗೇಮ್ಸ್ ಆತಿಥ್ಯ ವಹಿಸಿಕೊಳ್ಳಲು ಮುಂದಾಗಿದ್ದ ದಕ್ಷಿಣ ಆಫ್ರಿಕದ ಡರ್ಬನ್‌ನಲ್ಲಿ ಶೂಟಿಂಗ್ ಸ್ಪರ್ಧೆ ಆಯೋಜಿಸುವ ವ್ಯವಸ್ಥೆಯಿತ್ತು’’ ಎಂದು ಅಂತರ್‌ರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಅಧ್ಯಕ್ಷರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಬಿಂದ್ರಾ ಹೇಳಿದ್ದಾರೆ.

2022ರ ಗೇಮ್ಸ್‌ನ್ನು ಡರ್ಬನ್ ನಗರ ಆಯೋಜಿಸಬೇಕಾಗಿತ್ತು. ಆದರೆ, ಆರ್ಥಿಕ ಸಮಸ್ಯೆಯಿಂದಾಗಿ ಡರ್ಬನ್ ಗೇಮ್ಸ್ ಆಯೋಜನೆಯಿಂದ ಹಿಂದೆೆ ಸರಿದಿದ್ದು, ಕಾಮನ್‌ವೆಲ್ತ್ ಗೇಮ್ಸ್ ಫೆಡರೇಶನ್ ಬರ್ಮಿಂಗ್‌ಹ್ಯಾಮ್‌ಗೆ ಗೇಮ್ಸ್ ಆಯೋಜಿಸಲು ಅವಕಾಶ ನೀಡಿತ್ತು.

ಶೂಟಿಂಗ್ ವ್ಯವಸ್ಥೆಯ ಸಮಸ್ಯೆಯನ್ನು ಮುಂದಿಟ್ಟುಕೊಂಡು ಬರ್ಮಿಂಗ್‌ಹ್ಯಾಮ್ ಆಯೋಜನಾ ಸಮಿತಿಯು ಶೂಟಿಂಗ್‌ನ್ನು ಹೊರಗಿಡಲು ನಿರ್ಧರಿಸಿದೆ. ಇತ್ತೀಚೆಗಷ್ಟೇ ಗೋಲ್ಡ್ ಕೋಸ್ಟ್ ನಲ್ಲಿ ಕೊನೆಗೊಂಡಿರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಶೂಟಿಂಗ್ ತಂಡ 6 ಚಿನ್ನ ಸಹಿತ ಒಟ್ಟು 16 ಪದಕಗಳನ್ನು ಜಯಿಸಿ ಉತ್ತಮ ಸಾಧನೆ ಮಾಡಿತ್ತು.

ಶೂಟಿಂಗ್ ಆಯ್ದ ಕ್ರೀಡೆಯಾಗಿದ್ದರೂ 1966ರ ಬಳಿಕ ಪ್ರತಿಯೊಂದು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಶೂಟಿಂಗ್ ಕ್ರೀಡೆ ಇತ್ತು. 1970ರ ಗೇಮ್ಸ್ ನಲ್ಲಿ ಮಾತ್ರ ಇರಲಿಲ್ಲ. ಕೆಲವೇ ದಿನಗಳ ಹಿಂದೆ ರಾಷ್ಟ್ರೀಯ ರೈಫಲ್ ಸಂಸ್ಥೆಯ ಅಧ್ಯಕ್ಷ ರಣಿಂದರ್ ಸಿಂಗ್ ಒಂದು ವೇಳೆ 2022ರ ಗೇಮ್ಸ್‌ನಲ್ಲಿ ಶೂಟಿಂಗ್ ಕ್ರೀಡೆಗೆ ಅವಕಾಶ ಸಿಗದಿದ್ದರೆ, ಭಾರತ ಗೇಮ್ಸ್‌ನ್ನು ಬಹಿಷ್ಕರಿಸಲಿದೆ ಎಂದಿದ್ದರು. ಆದರೆ, ಸಿಂಗ್ ಹೇಳಿಕೆಯನ್ನು ಐಒಎ ಅಧ್ಯಕ್ಷ ನರೇಂದ್ರ ಬಾತ್ರಾ ಖಂಡಿಸಿದ್ದರು. ಇಂತಹ ಹೇಳಿಕೆ ಅತಿರೇಕದಿಂದ ಕೂಡಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News