ರಾಜಕೀಯ ಕುಮ್ಮಕ್ಕಿನಿಂದ ನನ್ನನ್ನು ಸ್ಫೋಟ ಪ್ರಕರಣಗಳಲ್ಲಿ ಸಿಲುಕಿಸಲಾಗಿತ್ತು: ಅಸೀಮಾನಂದ

Update: 2018-04-21 15:32 GMT

ಪಂಚಕುಲಾ(ಹರ್ಯಾಣ),ಎ.21: ರಾಜಕೀಯ ಕುಮ್ಮಕ್ಕಿನಿಂದ ತನ್ನನ್ನು ಮಕ್ಕಾ ಮಸೀದಿ ಮತ್ತು ಅಜ್ಮಿರ್ ದರ್ಗಾ ಸ್ಫೋಟ ಪ್ರಕರಣಗಳಲ್ಲಿ ಸಿಲುಕಿಸಲಾಗಿತ್ತು ಎಂದು ಇತ್ತೀಚಿಗಷ್ಟೇ ಹೈದರಾಬಾದ್‌ನ ವಿಶೇಷ ಎನ್‌ಐಎ ನ್ಯಾಯಾಲಯದಿಂದ ಮಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿ ಖುಲಾಸೆಗೊಂಡಿರುವ ಸ್ವಾಮಿ ಅಸೀಮಾನಂದ ಹೇಳಿದ್ದಾರೆ. ಇಲ್ಲಿಯ ವಿಶೇಷ ಎನ್‌ಐಎ ನ್ಯಾಯಾಲಯದಲ್ಲಿ ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟ ಪ್ರಕರಣದ ವಿಚಾರಣೆಗೆ ಹಾಜರಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು,ಹೈದರಾಬಾದ್ ಮತ್ತು ಅಜ್ಮೀರ್ ಪ್ರಕರಣಗಳಲ್ಲಿ ಸತ್ಯಕ್ಕೆ ಗೆಲುವಾಗಿದೆ. ಈಗ ವಿಚಾರಣೆ ನಡೆಯುತ್ತಿರುವ ಸಂಜೋತಾ ಸ್ಫೋಟ ಪ್ರಕರಣದಲ್ಲಿಯೂ ತನಗೆ ನ್ಯಾಯಾಂಗದಲ್ಲಿ ಸಂಪೂರ್ಣ ವಿಶ್ವಾಸವಿದೆ ಎಂದರು.

ಅಜ್ಮೀರ್ ದರ್ಗಾ ಸ್ಫೋಟ ಪ್ರಕರಣದಿಂದಲೂ ಅವರು ಕಳೆದ ವರ್ಷದ ಮಾರ್ಚ್‌ನಲ್ಲಿ ಖುಲಾಸೆಗೊಂಡಿದ್ದು,ಸಂಜೋತಾ ಸ್ಫೋಟ ಅವರ ವಿರುದ್ಧ ಬಾಕಿಯಿರುವ ಏಕೈಕ ಪ್ರಕರಣವಾಗಿದೆ. ಅವರು ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಶಕ್ತಿಯನ್ನು ಹೆಚ್ಚಿಸಲು ತನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಕುರಿತು ಪಕ್ಷದ ರಾಜ್ಯ ಘಟಕದ ಹೇಳಿಕೆಯ ಕುರಿತು ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಅಸೀಮಾನಂದ ಅವರು ರಾಜಕೀಯ ಭಯೋತ್ಪಾದನೆಯ ಬಲಿಪಶುವಾಗಿದ್ದರು ಮತ್ತು ಹೈದರಾಬಾದ್ ಹಾಗೂ ಅಜ್ಮೀರ್ ಪ್ರಕರಣಗಳಲ್ಲಿಯ ತೀರ್ಪು ಸತ್ಯ ಯಾವಾಗಲೂ ಗೆಲ್ಲುತ್ತದೆ ಎನ್ನುವುದನ್ನು ಸಾಬೀತುಗೊಳಿಸಿದೆ ಎಂದು ಅವರ ವಕೀಲ ಮನಬೀರ್ ರಾಠಿ ಹೇಳಿದರು.

ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ. ಪ್ರತಿಯೊಬ್ಬ ಪ್ರಜೆಯೂ ಅದನ್ನು ಖಂಡಿಸಲೇಬೇಕು,ಆದರೆ ರಾಜಕೀಯ ಉದ್ದೇಶಗಳಿಂದಾಗಿ ಜನರನ್ನು ಸಿಲುಕಿಸುವುದು ತಪ್ಪು ಎಂದರು.

ಸಂಜೋತಾ ಸ್ಫೋಟ ಪ್ರಕರಣದಲ್ಲಿ ಈವರೆಗೆ 213 ಸಾಕ್ಷಿಗಳ ವಿಚಾರಣೆಯನ್ನು ನಡೆಸಲಾಗಿದ್ದು,ಸುಮಾರು 30 ಸಾಕ್ಷಿಗಳ ವಿಚಾರಣೆ ಬಾಕಿಯಿದೆ ಎಂದು ರಾಠಿ ತಿಳಿಸಿದರು.

ಶನಿವಾರ ನ್ಯಾಯಾಂಗ ಅಧಿಕಾರಿಗಳಾಗಿರುವ ಇಬ್ಬರು ಸಾಕ್ಷಿಗಳ ವಿಚಾರಣೆಯನ್ನು ನಡೆಸಲಾಗಿದ್ದು,ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ 4ಕ್ಕೆ ನಿಗದಿ ಗೊಳಿಸಲಾಗಿದೆ.

2007,ಫೆ.18ರಂದು ರಾತ್ರಿ ಸಂಜೋತಾ ಎಕ್ಸ್‌ಪ್ರೆಸ್ ರೈಲು ಪಾನಿಪತ್ ದಾಟುತ್ತಿದ್ದಾಗ ಸ್ಫೋಟ ಸಂಭವಿಸಿದ್ದು,42 ಪಾಕಿಸ್ತಾನಿಗಳು ಸೇರಿದಂತೆ 68 ಪ್ರಯಾಣಿಕರು ಸಾವನ್ನಪ್ಪಿದ್ದರು.

2010ರಲ್ಲಿ ಈ ಪ್ರಕರಣದ ತನಿಖೆಯನ್ನು ವಹಿಸಿಕೊಂಡಿದ್ದ ಎನ್‌ಐಎ ನಭಕುಮಾರ ಸರ್ಕಾರ್ ಅಲಿಯಾಸ್ ಸ್ವಾಮಿ ಅಸೀಮಾನಂದ,ಸುನಿಲ ಜೋಶಿ(ಈಗ ಮೃತ),ಲೋಕೇಶ ಶರ್ಮಾ,ಸಂದೀಪ ಡಾಂಗೆ ಮತ್ತು ರಾಮಚಂದ್ರ ಕಲ್ಸಂಗ್ರಾ ಅಲಿಯಾಸ್ ರಾಮಜಿ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿತ್ತು.

ತನ್ಮಧ್ಯೆ ಪ್ರಕರಣದಲ್ಲಿಯ 13 ಪಾಕಿಸ್ತಾನಿ ಸಾಕ್ಷಿಗಳಿಗೆ ನ್ಯಾಯಾಲಯವು ಹಿಂದೆ ಎರಡು ಬಾರಿ ಸಮನ್ಸ್ ಕಳುಹಿಸಿದ್ದರೂ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಆ.3ರಂದು ವಿಚಾರಣೆಗೆ ಹಾಜರಾಗುವಂತೆ ಈಗ ಮತ್ತೊಮ್ಮೆ ಅವರಿಗೆ ಸಮನ್ಸ್ ಹೊರಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News