ರೈಲ್ವೆಯ ಹಿರಿಯ ನಾಗರಿಕರ ‘ಗಿವ್ ಇಟ್ ಅಪ್’ ಯೋಜನೆ ಎಲ್ಲ ವಿನಾಯಿತಿಗಳಿಗೂ ವಿಸ್ತರಣೆ

Update: 2018-04-21 15:57 GMT

ಹೊಸದಿಲ್ಲಿ,ಎ.21 ಹಿರಿಯ ನಾಗರಿಕರು ಪ್ರಯಾಣ ಶುಲ್ಕದಲ್ಲಿ ತಮಗಿರುವ ವಿನಾಯಿತಿಯನ್ನು ತ್ಯಜಿಸುವಂತೆ ಪ್ರೇರೇಪಿಸಲು ತಾನು ಜಾರಿಗೆ ತಂದಿದ್ದ ‘ಗಿವ್ ಇಟ್ ಅಪ್’ಯೋಜನೆಯ ಯಶಸ್ಸಿನಿಂದ ಉತ್ತೇಜಿತಗೊಂಡಿರುವ ಭಾರತೀಯ ರೈಲ್ವೆಯು ಈ ಯೋಜನೆಯನ್ನು ಈಗ ಇತರ ವರ್ಗಗಳ ವಿನಾಯಿತಿದಾರರಿಗೂ ವಿಸ್ತರಿಸಲು ಸಜ್ಜಾಗಿದೆ. ವಾರ್ಷಿಕ ಪ್ರಯಾಣದರಗಳಲ್ಲಿ ತಾನು ಭರಿಸುತ್ತಿರುವ ಸುಮಾರು 33,000 ಕೋ.ರೂ.ಗಳ ಸಬ್ಸಿಡಿ ಹೊರೆಯನ್ನು ತಗ್ಗಿಸಿಕೊಳ್ಳುವುದು ಅದರ ಉದ್ದೇಶವಾಗಿದೆ.

ಹಿರಿಯ ನಾಗರಿಕರು ತಮ್ಮ ಪ್ರಯಾಣ ದರಗಳಲ್ಲಿ ಶೇ.50ರಷ್ಟು ವಿನಾಯಿತಿಯನ್ನು ತ್ಯಜಿಸಲು ಅವಕಾಶ ನೀಡುವ ಯೋಜನೆಯನ್ನು ಕಳೆದ ವರ್ಷ ಜಾರಿಗೊಳಿಸಿದ ಬಳಿಕ 19 ಲಕ್ಷಕ್ಕೂ ಅಧಿಕ ಜನರು ವಿನಾಯಿತಿಯನ್ನು ಬಿಟ್ಟುಕೊಟ್ಟಿದ್ದಾರೆ. ಇದರಿಂದಾಗಿ 2017,ಜು.22 ಮತ್ತು 2018,ಮಾ.31ರ ನಡುವೆ ರೈಲ್ವೆಗೆ 32 ಕೋ.ರೂ.ಗೂ ಅಧಿಕ ಉಳಿತಾಯವಾಗಿದೆ.

2016ರಲ್ಲಿ ಶೇ.100 ವಿನಾಯಿತಿಯನ್ನು ತ್ಯಜಿಸುವಂತೆ ನಾವು ಕೋರಿಕೊಂಡಿದ್ದು, ಹೆಚ್ಚಿನ ಜನರು ಅದಕ್ಕೆ ಕಿವಿಗೊಟ್ಟಿರಲಿಲ್ಲ.2017ರಲ್ಲಿ ಶೇ.50ರಷ್ಟು ವಿನಾಯಿತಿಯನ್ನು ತ್ಯಜಿಸುವ ಆಯ್ಕೆಯನ್ನು ಮುಂದಿಟ್ಟಾಗ ಹೆಚ್ಚಿನ ಜನರು ಸ್ಪಂದಿಸಿದ್ದಾರೆ. ಇದು ಸಂಪೂರ್ಣವಾಗಿ ಸ್ವಯಂಇಚ್ಛೆಯದಾಗಿದ್ದು, ಇಂತಹ ಇನ್ನಷ್ಟು ವಿನಾಯಿತಿದಾರರು ಈ ತ್ಯಾಗಕ್ಕೆ ಮುಂದಾಗುವಂತೆ ಉತ್ತೇಜಿಸಲು ಅಭಿಯಾನವೊಂದನ್ನು ರೂಪಿಸುತ್ತಿದ್ದೇವೆ ಎಂದು ರೈಲ್ವೆ ಸಚಿವಾಲಯದ ಅಧಿಕಾರಿಯೋರ್ವರು ತಿಳಿಸಿದರು.

  ರೈಲ್ವೆಯು ಅಂಗವಿಕಲರು,ಕ್ಯಾನ್ಸರ್,ಥಲಸೇಮಿಯಾ,ಹೃದಯ ಮತ್ತು ಮೂತ್ರಪಿಂಡ ರೋಗಿಗಳು,ಯುದ್ಧವಿಧವೆಯರು,ವಿದ್ಯಾರ್ಥಿಗಳು ಮತ್ತು ಇತರರು ಸೇರಿದಂತೆ 53 ವರ್ಗಗಳ ಪ್ರಯಾಣಿಕರಿಗೆ ಟಿಕೆಟ್ ದರಗಳಲ್ಲಿ ವಿನಾಯಿತಿಗಳನ್ನು ನೀಡುತ್ತಿದೆ. ಇದರಿಂದಾಗಿ ವಾರ್ಷಿಕ ಅದು ಸುಮಾರು 33,000 ಕೋ.ರೂ.ಗಳ ನಷ್ಟವನ್ನು ಅನುಭವಿಸುತ್ತಿದೆ.

ಜು.2017-ಮಾ.2018ರ ನಡುವೆ 10 ಲಕ್ಷಕ್ಕೂ ಅಧಿಕ ಹಿರಿಯ ನಾಗರಿಕರು ಶೇ.100ರಷ್ಟು ಮತ್ತು 9 ಲಕ್ಷಕ್ಕೂ ಅಧಿಕ ಹಿರಿಯ ನಾಗರಿಕರು ಶೇ.50ರಷ್ಟು ವಿನಾಯಿತಿಯನ್ನು ತ್ಯಜಿಸಿದ್ದಾರೆ.

ಆ.2016ರಿಂದೀಚಿಗೆ ಒಟ್ಟು 40 ಲಕ್ಷ ಹಿರಿಯ ನಾಗರಿಕರು ತಮ್ಮ ವಿನಾಯಿತಿಗಳನ್ನು ತ್ಯಜಿಸಿದ್ದು,ಇದರಿಂದ ಸುಮಾರು 77 ಕೋ.ರೂ.ಗಳನ್ನು ಉಳಿಸಲು ರೈಲ್ವೆಗೆ ಸಾಧ್ಯವಾಗಿದೆ.

ವಿನಾಯಿತಿಯನ್ನು ತ್ಯಜಿಸಿದ ಹಿರಿಯ ನಾಗರಿಕರಿಗೆ ಪ್ರಶಂಸಾ ಪತ್ರಗಳನ್ನು ನೀಡಲಾಗುವುದು. ಕೆಲವರನ್ನು ಸಚಿವರ ಮೂಲಕ ಸನ್ಮಾನಿಸಲೂ ಉದ್ದೇಶಿಸಲಾಗಿದೆ ಎಂದೂ ಅಧಿಕಾರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News