ಲಂಡನ್‌ನಲ್ಲಿ ಮೋದಿಯಿಂದ ದಲಿತರ ಕಡೆಗಣನೆ: ದಲಿತ ಸಂಘಟನೆಗಳ ಆರೋಪ

Update: 2018-04-21 17:11 GMT

ಲಂಡನ್,ಎ.20: ಪ್ರಧಾನಿ ನರೇಂದ್ರ ಮೋದಿ, ಗುರುವಾರ ಲಂಡನ್‌ಗೆ ಭೇಟಿ ನೀಡಿದ್ದಾಗ, ಅವರು ಅಂಬೇಡ್ಕರ್ ಹೌಸ್‌ನ ಉದ್ಯಾನವನದಲ್ಲಿ ಸ್ಥಾಪಿಸಲಾಗಿರುವ ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ ದಲಿತರನ್ನು ಅಪಮಾನಿಸಿದ್ದಾರೆಂದು ಬ್ರಿಟನ್‌ನಲ್ಲಿನ ಭಾರತೀಯ ದಲಿತ ಸಂಘಟನೆಯೊಂದು ಆಪಾದಿಸಿದೆ.

‘‘ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರಕ್ಕೇರಿದ ಬಳಿಕ ಭಾರತದಲ್ಲಿ ದಲಿತರು ಹಾಗೂ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರ ಉಲ್ಬಣಿಸಿರುವುದರ ವಿರುದ್ಧ ಅಂಬೇಡ್ಕರ್‌ವಾದಿಗಳ ಗುಂಪೊಂದು ವೌನ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದುದೇ,ಪ್ರಧಾನಿಯವರು ಅಂಬೇಡ್ಕರ್ ಹೌಸ್‌ಗೆ ತನ್ನ ಭೇಟಿಯನ್ನು ರದ್ದುಪಡಿಸಲು ಕಾರಣವಾಯಿತು’’ ಎಂದು ಕಾರ್ಯಕ್ರಮದ ಸ್ಥಳದಲ್ಲಿ ಪ್ರತ್ಯೇಕವಾಗಿ ಇನ್ನೊಂದು ಪ್ರತಿಭಟನೆ ಆಯೋಜಿಸಿದ್ದ ‘‘ ಕಾಸ್ಟ್‌ವಾಚ್‌ಯುಕೆ’’ ಸಂಸ್ಥೆಯ ಪ್ರತಿನಿಧಿಯೊಬ್ಬರು ಹೇಳಿದ್ದಾರೆ.

  ಈ ಕಾರ್ಯಕ್ರಮಕ್ಕೆ ಪ್ರಧಾನಿ ಆಗಮಿಸದಿರುವುದು ಅಂಬೇಡ್ಕರ್‌ಗೆ ಮಾಡಲಾದ ಅಪಮಾನವಾಗಿದೆ ಹಾಗೂ ದಲಿತರ ಕಡೆಗಣನೆಯಾಗಿದೆ. ಪ್ರಧಾನಿಯವರ ಅಷಾಢಭೂತಿತನವನ್ನು ಇದು ಬಯಲಿಗೆಳೆದಿದೆ ಎಂದು ಅವರು ಟೀಕಿಸಿದ್ದಾರೆ.

 ‘‘ ಬ್ರಿಟನ್‌ನಲ್ಲಿ ಜಾತಿ ತಾರತಮ್ಯವನ್ನು ಕಾನೂನುಬಾಹಿರಗೊಳಿಸಲು ಹೋರಾಡುತ್ತಿರುವ ಅಂಬೇಡ್ಕರ್‌ವಾದಿಗಳು,ರವಿದಾಸ್ಸಿಯಾ ಸೇರಿದಂತೆ ವಿವಿಧ ದಲಿತಪರ ಸಂಘಟನೆಗಳ 50 ಮಂದಿ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಹಾಗೂ ಈ ಸಂದರ್ಭದಲ್ಲಿ ಅವರು ಪ್ರಧಾನಿಗೆ ಜಂಟಿಯಾಗಿ ಮನವಿ ಪತ್ರ ಸಲ್ಲಿಸಲು ಬಯಸಿದ್ದರು. ಆದರೆ ಪ್ರಧಾನಿ ಗೈರುಹಾಜರಾದ ಕಾರಣ ಅವರ ಬದಲಿಗೆ, ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೇಂದ್ರ ಸಾಮಾಜಿಕ ನ್ಯಾಯ ಸಚಿವ ರಾಜ್‌ಕುಮಾರ್ ಅವರಿಗೆ ಮನವಿಪತ್ರವನ್ನು ಸಲ್ಲಿಸಲಾಯಿತು’’ ಎಂದು ಜಾತಿ ತಾರತಮ್ಯ ವಿರೋಧಿ ಒಕ್ಕೂಟ ಸಂಘಟನೆಯ ವಕ್ತಾರರು ತಿಳಿಸಿದ್ದಾರೆ. ಆದಾಗ್ಯೂ ಪ್ರಧಾನಿಯವರ ಲಂಡನ್ ಭೇಟಿಯ ಕಾರ್ಯಕ್ರಮ ಪಟ್ಟಿಯಲ್ಲಿ ಅಂಬೇಡ್ಕರ್ ಹೌಸ್ ಸಂದರ್ಶನವೂ ಇತ್ತು. ಆದಾಗ್ಯೂ ಪ್ರವಾಸದ ಅಂತಿಮ ಕಾರ್ಯಸೂಚಿಯಲ್ಲಿ ಅದನ್ನು ಕೈಬಿಡಲಾಗಿತ್ತು ಎಂದು ಅಧಿಕೃತ ಮೂಲಗಳು ಸ್ಪಷ್ಟಪಡಿಸಿವೆ. ಕಾಮನ್‌ವೆಲ್ತ್ ಸರಕಾರಗಳ ಮುಖ್ಯಸ್ಥರ ಸಭೆಯಿದ್ದುದರಿಂದ, ಸಮರ್ಪಕ ಕಾಲಾವಕಾಶ ಇಲ್ಲದಿದ್ದುದರಿಂದ ಮೋದಿಯವರಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಸಾಧ್ಯವಾಗಿರಲಿಲ್ಲವೆಂದು ಅವು ತಿಳಿಸಿವೆ.

 ಅಂಬೇಡ್ಕರ್ ಅವರು 1920ರ ದಶಕದಲ್ಲಿ ಲಂಡನ್‌ನಲ್ಲಿ ವಿದ್ಯಾರ್ಥಿಯಾಗಿದ್ದಾಗ, ಅವರು ವಾಸವಾಗಿದ್ದ 10 ಕಿಂಗ್ ಹೆನ್ರಿ ರಸ್ತೆಯಲ್ಲಿರುವ ಮೂರು ಅಂತಸ್ತುಗಳ ಈ ಮನೆಯನ್ನು ಭಾರತ ಸರಕಾರವು 2015ರಲ್ಲಿ ಖರೀದಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News