ಮೋಹನ್‌ಲಾಲ್: ಸ್ಟಾರ್ ಅಭಿಮಾನಿಯಾಗಿ ನಟಿಯ ಕಮಾಲ್!

Update: 2018-04-22 09:34 GMT

ಮೋಹನ್‌ಲಾಲ್ ಎನ್ನುವ ಹೆಸರು ಯಾರದೆಂದು ಕೇರಳೀಯರಿಗಷ್ಟೇ ಅಲ್ಲ; ಸಿನೆಮಾ ಪ್ರಿಯರಾದ ಭಾರತೀಯರಿಗೆಲ್ಲ ಗೊತ್ತಿರುತ್ತದೆ. ಮಲಯಾಳಂನ ಈ ಸೂಪರ್‌ಸ್ಟಾರ್ ಹೆಸರಿನಲ್ಲಿ ಚಿತ್ರವೊಂದು ತೆರೆಗೆ ಬಂದಿದೆ. ಕಳೆದ ಮೂರುವರೆ ದಶಕದಿಂದ ಮಲಯಾಳಂನಲ್ಲಿ ತಾರೆಯಾಗಿ ಮೆರೆಯುತ್ತಿರುವ ಈ ನಟನ ಅಭಿಮಾನಿಯೊಬ್ಬಳ ಬದುಕಿನ ಕತೆ ಹೇಳುವ ಈ ಚಿತ್ರಕ್ಕೆ ‘ಮೋಹನ್‌ಲಾಲ್’ ಎಂದೇ ಹೆಸರಿಟ್ಟಿರುವುದು ವಿಶೇಷ.

  ಸಾಮಾನ್ಯವಾಗಿ ಅಭಿಮಾನಿಗಳ ಕುರಿತಾದ ಚಿತ್ರಗಳು ತೆರೆಕಾಣುವುದು ಅಪರೂಪ. ಒಂದು ವೇಳೆ ತೆರೆಕಂಡರೂ ಅವುಗಳ ಪೂರ್ತಿ ತಾರೆಗಳ ಕುರಿತಾದ ಹೊಗಳುವಿಕೆಯನ್ನಷ್ಟೇ ಕಾಣುತ್ತೇವೆ. ಆದರೆ ಅಭಿಮಾನಿಯೊಬ್ಬಳ ಮರೆದಾಟದ ಜೊತೆಗೆ ಅಭಿಮಾನದಾಚೆಗಿನ ಜೀವನ ಪಾಠವನ್ನು ಹೇಳುವ ಚಿತ್ರವೇ ಮೋಹನ್‌ಲಾಲ್. ಚಿತ್ರದಲ್ಲಿ ಮೀನಾಕ್ಷಿ ಮೋಹನ್‌ಲಾಲ್‌ನ ಅಪ್ಪಟ ಅಭಿಮಾನಿ. ಆಕೆ ಜನಿಸಿದ್ದೇ ಮೋಹನ್ ಲಾಲ್ ನಟಿಸಿದ ಪ್ರಥಮ ಚಿತ್ರ ತೆರೆಗೆ ಬಂದ ದಿನ. ಆಕೆಯ ಬೆಳವಣಿಗೆಯ ಪ್ರತಿ ಹಂತದಲ್ಲಿಯೂ ಮೋಹನ್‌ಲಾಲ್‌ರ ಒಂದೊಂದೇ ಪ್ರಮುಖ ಚಿತ್ರಗಳು ತೆರೆಕಂಡಿರುತ್ತವೆ. ಎಳವೆಯಲ್ಲೇ ತಂದೆಯನ್ನು ಕಳೆದುಕೊಂಡ ಬಾಲಕಿಗೆ ಶಾಲೆಯಲ್ಲಿ ಪ್ರದರ್ಶಿಸಲ್ಪಟ್ಟ ಚಿತ್ರವೊಂದು ಮನಸ್ಸಿಗೆ ತಟ್ಟುವಂಥ ಅನುಭವ ನೀಡಿರುತ್ತದೆ. ಅದಕ್ಕೆ ಆ ಚಿತ್ರದಲ್ಲಿ ತಂದೆಯಿಲ್ಲದ ಮಗುವೊಂದಕ್ಕೆ ಫೋನಲ್ಲೇ ಮಾತನಾಡಿ ಸಮಾಧಾನಿಸುವ ಮೋಹನ್‌ಲಾಲ್‌ನ ಪಾತ್ರವನ್ನು ನೋಡಿ ಆತ್ಮೀಯವಾಗಿ ಬಿಡುತ್ತಾಳೆ. ಶಾಲಾ ದಿನಗಳಿಂದಲೇ ಮೋಹನ್‌ಲಾಲ್ ಕಡೆಗಿನ ಆಕೆಯ ಅಭಿಮಾನವನ್ನು ಕಂಡ ಆಕೆಯ ಶಾಲಾ ಸ್ನೇಹಿತ ಸೇತು, ಆಕೆಯ ಪ್ರೀತಿಗಾಗಿ ತಾನು ಕೂಡ ಮೋಹನ್‌ಲಾಲ್‌ನ ಅಭಿಮಾನಿಯಂತೆ ವರ್ತಿಸುತ್ತಾನೆ. ಪ್ರಾಪ್ತವಯಸ್ಕರಾದಾಗ ಅವರಿಬ್ಬರ ವಿವಾಹವೂ ನಡೆಯುತ್ತದೆ. ಆದರೆ ಮದುವೆಯ ಬಳಿಕ ಕೂಡ ಆಕೆ ಸಂಸಾರದೆಡೆಗಿನ ಆಸಕ್ತಿಗಿಂತ ಮೋಹನ್‌ಲಾಲ್ ಅಭಿಮಾನವೇ ದೊಡ್ಡದೆಂಬಂತೆ ವರ್ತಿಸುವುದನ್ನು ಕಂಡು ಸೇತು ಮನಸ್ಸು ಕೆಡಿಸಿಕೊಳ್ಳುತ್ತಾನೆ. ಅವರಿಬ್ಬರ ದಾಂಪತ್ಯದ ನಡುವೆ ಮೋಹನ್‌ಲಾಲ್ ವಹಿಸುವ ಪಾತ್ರವೇನು ಎನ್ನುವುದೇ ಚಿತ್ರದ ಕತೆ.

ಮೋಹನ್‌ಲಾಲ್ ಎಂಬ ಹೆಸರಿನ ಚಿತ್ರವಾಗಿರುವುದರಿಂದ ಮತ್ತು ಚಿತ್ರದಲ್ಲಿ ಮೋಹನ್‌ಲಾಲ್ ಅಭಿಮಾನಿಯಾಗಿ ನಟಿಸಿರುವುದು ಮಂಜುವಾರಿಯರ್ ಆಗಿರುವುದರಿಂದ ಖುದ್ದು ಮೋಹನ್‌ಲಾಲ್ ಕೂಡ ಚಿತ್ರದ ದೃಶ್ಯವೊಂದರಲ್ಲಿ ಕಾಣಿಸಿರಬಹುದೆಂಬ ಅಭಿಮಾನಿಗಳ ನಂಬಿಕೆ ಹುಸಿಯಾಗಿದೆ. ಯಾಕೆಂದರೆ ಮಂಜುವಾರಿಯರ್ ಸ್ವತಃ ನಟ ಮೋಹನ್‌ಲಾಲ್‌ಗೆ ನಾಯಕಿಯಾಗಿ ಗುರುತಿಸಿಕೊಂಡವರು. ಸ್ಟಾರ್‌ಒಬ್ಬನ ಅಭಿಮಾನಿಯ ಕತೆಯನ್ನು ಚಿತ್ರ ಮಾಡುವಾಗ ಅದು ಅಭಿಮಾನಿಗಳಿಗಷ್ಟೇ ಮೀಸಲಾಗುವ ಸಿನೆಮಾವಾಗಿ ಬದಲಾಗುವ ಅಪಾಯವಿದೆ. ಆದರೆ ಇವೆಲ್ಲವನ್ನೂ ದಾಟಿ ಸ್ಟಾರ್ ಅಭಿಮಾನ ತಲೆಗೆ ಹೊಕ್ಕು ಅದು ಒಂದು ಮಾನಸಿಕ ರೋಗದಂತೆ ಹೇಗೆ ಕಾಡಬಹುದೆಂಬುದನ್ನು ಚಿತ್ರ ಹೇಳಿದೆ. ಈ ಹಿಂದೆ ಮಲಯಾಳಂನಲ್ಲೇ ತೆರೆಕಂಡಿದ್ದ ‘ತಿಂಗಳ್ ಮುದಲ್ ವೆಳ್ಳಿವರೈ’ ಎಂಬ ಚಿತ್ರ ದಲ್ಲಿ ಧಾರಾವಾಹಿಯನ್ನು ಇಷ್ಟಪಡುವ ಅದರ ನಾಯಕನನ್ನು ವರಿಸುವ ಹೆಣ್ಣಿನ ಬದುಕಿನ ಕತೆ ಹೇಳುವ ಪಾತ್ರ ಇತ್ತೆನ್ನುವುದು ಈ ಚಿತ್ರ ನೋಡುವಾಗ ನೆನಪಾಗುತ್ತದೆ. ನಾಯಕಿಯಾಗಿ ಮಂಜುವಾರಿಯರ್ ಎಂದಿನಂತೆ ಲವಲವಿಕೆಯ ಅಭಿನಯ ನೀಡಿದ್ದಾರೆ. ಆಕೆಯ ಪತಿ ಸೇತುವಾಗಿ ಇಂದ್ರಜಿತ್ ಪಾತ್ರಕ್ಕೆ ತಕ್ಕಂಥ ನಟನೆ ನೀಡಿದ್ದಾರೆ. ಚಿತ್ರದ ಆರಂಭದ ನಿರೂಪಣೆಯನ್ನು ನಟ ಪೃಥ್ವಿರಾಜ್ ನಿರ್ವಹಿಸಿದ್ದಾರೆ. ಅಜುವರ್ಗೀಸ್, ಸಲೀಮ್ ಕುರ್ಮಾ, ಸೌಬಿನ್ ಮೊದಲಾದ ಕಾಮಿಡಿ ಸ್ಟಾರ್‌ಗಳು ಚಿತ್ರದಲ್ಲಿದ್ದಾರೆ. ಆದರೆ ಕತೆಗೆ ಅಗತ್ಯವಿಲ್ಲದಂಥ ದೃಶ್ಯಗಳು ಕೂಡ ತುಂಬಿಕೊಂಡು ಮೂರು ಗಂಟೆ ಕಾಲ ಕಾಡುತ್ತವೆ. ಆದರೆ ಕೊನೆಯಲ್ಲಿ ಅಭಿಮಾನಿಗಳು ಎಷ್ಟು ಮುಗ್ಧರಿರುತ್ತಾರೆ ಮತ್ತು ದಾರಿ ತಪ್ಪಿದರೆ ಎಷ್ಟು ಕೆಟ್ಟು ಹೋಗುತ್ತಾರೆ ಎನ್ನುವುದನ್ನು ಮನಮುಟ್ಟುವಂತೆ ತೋರಿಸಲಾಗಿದೆ. ಈ ಚಿತ್ರದ ಕತೆಯನ್ನು ಮೋಹನ್‌ಲಾಲ್ ಎಂದಲ್ಲ, ಯಾವುದೇ ತಾರೆಯ ಕುರಿತಾಗಿಯೂ ಮಾಡುವ ರೀತಿಯಲ್ಲಿದೆ. ಅದೇ ಕಾರಣಕ್ಕೆ ಚಿತ್ರ ಅಭಿಮಾನಿಗಳಿಗೆ ಹಬ್ಬವಾದೀತೇ ಹೊರತು, ವಿಶೇಷ ಎನ್ನುವಂಥದ್ದೇನೂ ಇಲ್ಲ.

ತಾರಾಗಣ: ಮಂಜುವಾರಿಯರ್, ಇಂದ್ರಜಿತ್

ನಿರ್ದೇಶಕ: ಸಾಜಿದ್ ಯಾಹ್ಯ

ನಿರ್ಮಾಪಕ: ಅನಿಲ್ ಕುರ್ಮಾ

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News