ಎನ್ನ ಕೈಯಲ್ಲಿ ಕೊಟ್ಟುದ ದೇವರೆಂದಿದ್ದೆ

Update: 2018-04-23 18:43 GMT

ಎನ್ನ ಕೈಯಲ್ಲಿ ಕೊಟ್ಟುದ ದೇವರೆಂದಿದ್ದೆ.
ಇದು ಮೆಲ್ಲಮೆಲ್ಲನೆ ಕಲ್ಲಾಗಿ ಬರುತಿದೆ; ಇದ ನಾನೊಲ್ಲೆ.
ಬಲ್ಲವರು ಹೇಳಿ; ಉಂಬಡೆ ಬಾಯಿಲ್ಲ, ನೋಡುವಡೆ ಕಣ್ಣಿಲ್ಲ.
ಎನ್ನ ಬಡತನಕ್ಕೆ ಬೇಡುವಡೆ ಏನೂ ಇಲ್ಲ
ಆತುರವೈರಿ ಮಾರೇಶ್ವರ

                                 -ನಗೆಯ ಮಾರಿತಂದೆ

ನಗೆಯ ಮಾರಿತಂದೆಯ ವಚನಗಳು 12ನೇ ಶತಮಾನದ ಶರಣರ ಚಳವಳಿಯಲ್ಲಿನ ಭವ್ಯತೆ ಮತ್ತು ನ್ಯೂನತೆಗಳಿಗೆ ಕನ್ನಡಿ ಹಿಡಿದಂತಿವೆ. ಯಾವುದೇ ಸಮೂಹ ಚಳವಳಿಯಲ್ಲಿ ಭವ್ಯತೆ ಮತ್ತು ಕೊರತೆಗಳು ಸಹಜವಾಗಿರುತ್ತವೆ.
ನಗೆಯ ಮಾರಿತಂದೆ ನಗಿಸುವ ಕಾಯಕದವ. ಸೂಕ್ಷ್ಮಮತಿಯ ಈ ಬಡ ಬೀದಿಕಲಾವಿದ ಭಾರೀ ಕನಸುಗಳನ್ನು ಹೊತ್ತು ಶರಣರ ಚಳವಳಿಯಲ್ಲಿ ಧುಮುಕಿದವ. ನಗಿಸುತ್ತಲೇ ನೋವಿನ ನೆಲೆಗಳನ್ನು ಗುರುತಿಸುತ್ತ ಸಾಗಿದವ. ಕನಸು ಮತ್ತು ವಾಸ್ತವಗಳ ಮಧ್ಯದ ಅಂತರದಿಂದ ನೊಂದುಕೊಂಡವ. ಕೈಗೆ ಕೊಟ್ಟ ಇಷ್ಟಲಿಂಗವನ್ನು ದೇವರೆಂದು ಪವಿತ್ರಭಾವದಿಂದಲೇ ಕಂಡು ಪೂಜಿಸಿದಾತ. ತನ್ನ ಕಷ್ಟದ ಬದುಕಿನಲ್ಲಿ ಬದಲಾವಣೆಯಾಗುವುದೆಂದು ಭಾವಿಸಿ ಮುಗ್ಧತೆಯಿಂದ ಕಾದವ. ಸುಧಾರಣೆ ಕಂಡುಬರದಿದ್ದಾಗ ಇಷ್ಟಲಿಂಗದ ಮೇಲಿನ ಆತನ ನಂಬಿಕೆ ದಿನಗಳೆದಂತೆ ಕರಗತೊಡಗುತ್ತದೆ. ಕರಸ್ಥಲದಲ್ಲಿ ಕಲ್ಲಾಗಿ ಕಾಣತೊಡಗುತ್ತದೆ. ಆಗ ‘ಇದ ನಾನೊಲ್ಲೆ’ ಎಂದು ನಗೆಯ ಮಾರಿತಂದೆ ಹೇಳುವಲ್ಲಿ ನೋವಿದೆ ಹೊರತಾಗಿ ತಿರಸ್ಕಾರವಿಲ್ಲ. ಇದಕ್ಕೆ ಬಾಯಿಲ್ಲ, ಕಣ್ಣಿಲ್ಲ. ಬಡತನ ನೀಗಿಸುವುದಕ್ಕಾಗಿ ಕೇಳಿದ್ದಕ್ಕೆ ಏನನ್ನೂ ಕೊಡುತ್ತಿಲ್ಲ ಎಂದು ಹತಾಶನಾಗುತ್ತಾನೆ. ಲಿಂಗರಹಸ್ಯವನ್ನು ಅರಿತವರು ಹೇಳಿ ಎಂದು ತೋಡಿಕೊಳ್ಳುತ್ತಾನೆ.
ನಗೆಯ ಮಾರಿತಂದೆಯ ಈ ಹತಾಶ ಭಾವಕ್ಕೆ ಇಷ್ಟಲಿಂಗವು ಬರಿ ನೆಪವಾಗಿದೆ ಎಂಬುದು ಆತನ ಇನ್ನಿತರ ವಚನಗಳಿಂದ ಕಂಡುಬರುವುದು. ವಿಟರು, ಸೂಳೆಯರು, ದಾಸಿಯರು, ಜೂಜುಕೋರರು ಮತ್ತು ಪ್ರಾಣಿಹತ್ಯೆ ಮಾಡುವ ಭಂಡರ ಜೊತೆ ಇರುತ್ತ ಲಿಂಗಾಂಗಸಾಮರಸ್ಯದ ಶರಣರ ವಚನಾನುಭಾವದ ಕುರಿತು ಮಾತನಾಡುವವರ ವಿಚಾರ ಬೇಡ ಎನ್ನುತ್ತಾನೆ. ‘ಗುಂಡ ವೇಶಿ ದಾಸಿ ಜೂಜು ಬೇಂಟೆ ಭಂಡರ ಸಂಸರ್ಗದಲ್ಲಿರುತ್ತ ಮತ್ತೆ ಲಿಂಗಾಂಗಸಂಗ ಶರಣರ ವಚನಾನುಭಾವದ ಸುದ್ದಿಯೇಕೊ’ ಎಂದು ಹೇಳುವಲ್ಲಿ ಆತನ ಮನನೊಂದುದಕ್ಕೆ ಕಾರಣ ತಿಳಿಯುತ್ತದೆ. ಸಮಾನತೆಯ ಭರವಸೆ ನೀಡುವ ತಾಡೋಲೆಯ ಕಟ್ಟುಗಳನ್ನು ಜಂಗಮ ಊರಿಂದೂರಿಗೆ ಎತ್ತಿನ ಮೇಲೆ ಹೇರಿಕೊಂಡು ಹೋಗಿ ಜನರಿಗೆ ಶರಣಸಮಾಜದ ಅರಿವು ಮೂಡಿಸುತ್ತಿದ್ದ. ಕೈಯಲ್ಲಿ ರಕ್ಷಣೆಗಾಗಿ ದೊಣ್ಣೆ ಇರುತ್ತಿತ್ತು. ಈತನ ಸ್ಥಿತಿ ಒಳ್ಳೆಯದಾಗಿತ್ತು. ಈತನ ಮಾತಿನಲ್ಲಿ ಧರ್ಮಶಾಸ್ತ್ರವಿದೆ. ಆದರೆ ಮನದಲ್ಲಿ ಕಾಮವಿಕಾರಗಳಿವೆ. ‘ಸಮತೆಯ ಸಮಾಧಾನ ಹೇಳುವ ಪುಸ್ತಕ ಎತ್ತಿನ ಮೇಲೆ, ಹೊಯಿವ ದೊಣ್ಣೆ ಕೈಯಲ್ಲಿ, ಲೇಸಾಯಿತ್ತು ಈತನಿರವು. ಮಾತಿನಲ್ಲಿ ಆಗಮ, ಮನದಲ್ಲಿ ತೂತಿನ ಕುಡುಕೆಯ ಆಶೆ.’ ಎಂದು ನಗೆಯ ಮಾರಿತಂದೆ ಈ ರೀತಿಯಲ್ಲಿ ಕಂಡ ಜಂಗಮನೊಬ್ಬನ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾನೆ. ಇದು ಸಾರ್ವತ್ರಿಕವಾದುದಲ್ಲ. ಆದರೆ ನಗೆಯ ಮಾರಿತಂದೆ ಕಂಡದ್ದನ್ನು ಕಂಡಹಾಗೇ ಹೇಳಿ ಸತ್ಯವನ್ನು ಮೆರೆದಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News