ಎಟಿಎಂನಲ್ಲಿ 'ಆರ್ ಬಿಐ' ಬದಲು 'ಸಿಬಿಐ' ನೋಟುಗಳು: ಗ್ರಾಹಕರು ಕಂಗಾಲು

Update: 2018-04-24 06:53 GMT

ಲಕ್ನೋ, ಎ.24: ಉತ್ತರ ಪ್ರದೇಶದ ಬರೇಲಿ ನಗರದ ಸುಭಾಶನಗರ ಪ್ರದೇಶದಲ್ಲಿರುವ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ಯಂತ್ರದಿಂದ ಹಣ ಪಡೆದ ಕೆಲ ಗ್ರಾಹಕರಿಗೆ ಆಘಾತ ಕಾದಿತ್ತು. ಎಟಿಎಂ ಯಂತ್ರದಿಂದ ಹೊರ ಬಂದ 500 ಮುಖಬೆಲೆಯ ನೊಟುಗಳು ನಕಲಿಯಾಗಿತ್ತಲ್ಲದೆ, 'ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ', 'ಭಾರತೀಯ ಮನೋರಂಜನ್ ಬ್ಯಾಂಕ್' ಹಾಗೂ 'ಚೂರನ್ ಲೇಬಲ್' ಎಂದು ಅವುಗಳಲ್ಲಿ ಬರೆಯಲ್ಪಟ್ಟಿತ್ತು.

ಆದರೆ ಅಚ್ಚರಿಯೇನೆಂದರೆ ಮೇಲೆ ತಿಳಿಸಿದ ಹೆಸರುಗಳನ್ನು ಹೊರತುಪಡಿಸಿದರೆ ಈ ನೋಟುಗಳು ಅಸಲಿ ನೋಟುಗಳಂತೆಯೇ ಇದ್ದವು. ಈ ಎಟಿಎಂನಿಂದ ಹಣ ಪಡೆದ ಕನಿಷ್ಠ ಮೂವರು ಗ್ರಾಹಕರಿಗೆ ಈ  ನಕಲಿ ನೋಟುಗಳು ದೊರಕಿದ್ದು, ಈ ಬಗೆಗಿನ ವೀಡಿಯೋ ವೈರಲ್ ಆಗಿದೆ. ಎಟಿಎಂ ಯಂತ್ರದೊಳಗೆ ನಕಲಿ ನೋಟುಗಳು ಹೇಗೆ ಹೊಕ್ಕವು ಎಂಬುದೇ ಈಗ ಪ್ರಶ್ನೆಯಾಗಿದೆ.

ಯಾವುದೇ ಭದ್ರತಾ ಸಿಬ್ಬಂದಿಯಿಲ್ಲದ ಈ ಎಟಿಎಂನಲ್ಲಿ ಮೊದಲ ಬಾರಿಗೆ  ಈಶ್ವರಿ ಭವನ್ ನಿವಾಸಿ, ಆರೋಗ್ಯ ಇಲಾಖೆಯ ನಿವೃತ್ತ ಉದ್ಯೋಗಿ ಅಶೋಕ್ ಕುಮಾರ್ ಪಾಠಕ್ ಎಂಬವರಿಗೆ ರವಿವಾರ ಸಂಜೆ ನಕಲಿ ನೋಟು ದೊರಕಿತ್ತು. ಅವರು 4,500 ರೂ. ನಗದನ್ನು ಎಟಿಎಂನಿಂದ ಪಡೆದಿದ್ದು ಸೂಕ್ಷ್ಮವಾಗಿ ಗಮನಿಸಿದಾಗ ಆ ನೋಟುಗಳಲ್ಲಿ ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ ಎಂದು ಬರೆಯಲಾಗಿತ್ತು.

ಅವರಿಗಿಂತ ಮೊದಲು ರಾಜೀವ್ ಕಾಲನಿಯ ಪ್ರವೀಣ್ ಉತ್ತಮ್ ಎಂಬವರಿಗೂ 500 ಮುಖಬೆಲೆಯ ಎರಡು ನಕಲಿ ನೋಟುಗಳು ದೊರಕಿದ್ದವು. ನಕಲಿ ನೋಟು ದೊರೆತ ಗ್ರಾಹಕರು ಬ್ಯಾಂಕಿಗೆ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News