1998ರ ಕೊಯಂಬತ್ತೂರು ಸ್ಫೋಟ ಪ್ರಕರಣದ ಅಪರಾಧಿಯ ಬಂಧನ

Update: 2018-04-24 14:33 GMT

ಕೊಯಂಬತ್ತೂರು, ಎ. 24: ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆಗೈಯಲು ಯೋಜಿಸಲಾಗಿದೆ ಎಂದು ಹೇಳುತ್ತಿರುವ ದೂರವಾಣಿ ಧ್ವನಿಮುದ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ 1998 ಕೊಯಂಬತ್ತೂರು ಸರಣಿ ಬಾಂಬ್ ಸ್ಫೋಟದ ಅಪರಾಧಿ ಮುಹಮ್ಮದ್‌ನನ್ನು ಕೊಯಂಬತ್ತೂರು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

1998ರ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಕಾರಾಗೃಹ ಶಿಕ್ಷೆ ಪೂರ್ಣಗೊಳಿಸಿ ಕನ್ನಿಯಮುತ್ತೂರಿನ ನಿವಾಸಿಯಾಗಿರುವ ರಫೀಕ್ ಹಾಗೂ ಸೇಲಂ ಮೂಲದ ಟ್ರಕ್ ಗುತ್ತಿಗೆಗಾರ ಪ್ರಕಾಶ್ ನಡುವಿನ ಟೆಲಿಫೋನ್ ಸಂಭಾಷಣೆಯ ದಾಖಲೆ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. 8 ನಿಮಿಷಗಳ ಅವಧಿಯ ದೂರವಾಣಿ ಸಂಭಾಷಣೆಯಲ್ಲಿ ರಫೀಕ್, ‘‘ನಾವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆಗೈಯಲು ನಿರ್ಧರಿಸಿದ್ದೇವೆ. 1998ರಲ್ಲಿ ಕೊಯಂಬತ್ತೂರಿಗೆ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಭೇಟಿ ನೀಡುವ ಸಂದರ್ಭ ನಾವು ಬಾಂಬ್ ಇರಿಸಿದ್ದೆವು’’ ಎಂದು ಹೇಳಿದ್ದಾನೆ.

ತಾನು ತಮಿಳುನಾಡಿನ ಎಲ್ಲ ಜೈಲಿನಲ್ಲಿ ಇದ್ದೆ ಎಂದು ಹೇಳಿರುವ ರಫೀಕ್, ತನ್ನ ವಿರುದ್ಧ ಗೂಂಡಾ ಕಾಯ್ದೆ, ಭಯೋತ್ಪಾದನೆ ಹಾಗೂ ವಿಧ್ವಂಸಕ ಚಟುವಟಿಕೆ (ತಡೆ) ಕಾಯ್ದೆ (ಟಾಡಾ) ಹಾಗೂ ರಾಷ್ಟ್ರೀಯ ಭದ್ರತಾ ಕಾಯ್ದೆ ದಾಖಲಿಸಲಾಗಿತ್ತು ಎಂದು ಹೇಳಿರುವುದು ಧ್ವನಿಮುದ್ರಿಕೆಯಲ್ಲಿ ದಾಖಲಾಗಿದೆ. ಸಾಮಾಜಿಕ ಜಾಲ ತಾಣದಲ್ಲಿ ಈ ಧ್ವನಿಮುದ್ರಿಕೆ ವೈರಲ್ ಆಗಿರುವುದು ಪೊಲೀಸರಿಗೆ ಶನಿವಾರ ತಿಳಿಯಿತು. ಕೂಡಲೇ ತನಿಖೆ ನಡೆಸಲು ವಿಶೇಷ ತಂಡ ರಚಿಸಲಾಯಿತು. ‘‘ತನಿಖೆ ಮುಂದುವರಿದಿದೆ’’ ಎಂದು ನಗರ ಪೊಲೀಸ್ ಆಯುಕ್ತ ಕೆ. ಪೆರಿಯಯ್ಯ ಹೇಳಿದ್ದಾರೆ. ರಫೀಕ್‌ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News