ಕಥುವಾ ಅತ್ಯಾಚಾರ, ಹತ್ಯೆ ಪ್ರಕರಣ: ಹೈಕೋರ್ಟ್ ಮೆಟ್ಟಿಲೇರಿದ ಆರೋಪಿಗಳು

Update: 2018-04-24 14:55 GMT

ಜಮ್ಮು, ಎ. 24: ಕಥುವಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಕ್ರೈಮ್ ಬ್ರಾಂಚ್ ನಡೆಸುತ್ತಿರುವ ತನಿಖೆ ರದ್ದುಗೊಳಿಸುವಂತೆ ಹಾಗೂ ಸಿಬಿಐಯಿಂದ ಹೊಸತಾಗಿ ತನಿಖೆ ನಡೆಸುವಂತೆ ಕೋರಿ ಪ್ರಕರಣದಲ್ಲಿ ಬಂಧಿತರಾಗಿರುವ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹಾಗೂ ವಿಶೇಷ ಪೊಲೀಸ್ ಅಧಿಕಾರಿ ಜಮ್ಮು ಹಾಗೂ ಕಾಶ್ಮೀರ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಸಬ್ ಇನ್ಸ್‌ಪೆಕ್ಟರ್ ಆನಂದ್ ದತ್ತಾ ಹಾಗೂ ವಿಶೇಷ ಪೊಲೀಸ್ ಅಧಿಕಾರಿ ದೀಪಕ್ ಖಜುರಿಯಾ ಪರವಾಗಿ ನ್ಯಾಯವಾದಿ ವೀನು ಗುಪ್ತಾ ಉಚ್ಚ ನ್ಯಾಯಾಲಯದಲ್ಲಿ ಸೋಮವಾರ ಅರ್ಜಿ ಸಲ್ಲಿಸಿದ್ದಾರೆ. 

ಕ್ರೈಮ್ ಬ್ರಾಂಚ್ ಸಲ್ಲಿಸಿದ ಆರೋಪ ಪಟ್ಟಿ ಅಸಂಗತತೆಯಿಂದ ಕೂಡಿದೆ ಎಂದು ವೀನು ಗುಪ್ತಾ ಹೇಳಿದ್ದಾನೆ. ಈ ಪ್ರಕರಣದ ತನಿಖೆಯನ್ನು ಮೂರು ಬಾರಿ ಸ್ಥಳೀಯ ಪೊಲೀಸರಿಂದ ಕ್ರೈಮ್ ಬ್ರಾಂಚ್‌ಗೆ ವರ್ಗಾಯಿಸಲಾಗಿತ್ತು. ಅಂತಿಮವಾಗಿ ಸಿಟ್‌ಗೆ ಹಸ್ತಾಂತರಿಸಲಾಗಿತ್ತು. ಆದುದರಿಂದ ಸಿಬಿಐ ತನಿಖೆ ನಡೆಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಕಥುವಾ ಜಿಲ್ಲೆಯಲ್ಲಿ 8 ವರ್ಷದ ಬಾಲಕಿಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪುರಾವೆಗಳನ್ನು ನಾಶ ಮಾಡಿದ ಆರೋಪದಲ್ಲಿ ಸಬ್ ಇನ್ಸ್‌ಪೆಕ್ಟರ್ ಆನಂದ್ ದತ್ತಾ ಹಾಗೂ ವಿಶೇಷ ಪೊಲೀಸ್ ಅಧಿಕಾರಿ ದೀಪಕ್ ಖಜುರಿಯಾ ಅವರನ್ನು ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News