ತನ್ನ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಅಸೀಮಾನಂದ ನನ್ನ ಹೆಸರನ್ನು ಉಲ್ಲೇಖಿಸಿದ್ದು ಹೇಗೆ?
ಹೈದರಾಬಾದ್, ಎ.25: "ನಾನು ಮತ್ತು ಅಸೀಮಾನಂದ ಚಂಚಲಗುಡ ಜೈಲಿನಲ್ಲಿ ಒಂದೇ ಸಮಯ ಇರದೇ ಇರುತ್ತಿದ್ದರೆ ತಮ್ಮ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಉಲ್ಲೇಖಿಸಿದ್ದ ನನ್ನ ಹೆಸರು ಅವರಿಗೆ ಹೇಗೆ ತಿಳಿದು ಬಂದಿತ್ತು ?, ಮಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿ ನಾನು ಶಾಮೀಲಾಗಿದ್ದೇನೆಂಬ ಶಂಕೆಯಲ್ಲಿ ನನ್ನನ್ನು ಈ ಹಿಂದೆ ಬಂಧಿಸಲಾಗಿತ್ತೆಂದು ಅವರಿಗೆ ಹೇಗೆ ತಿಳಿದು ಬಂದಿತ್ತು ?'' ಎಂದು ಶೇಖ್ ಅಬ್ದುಲ್ ಕಲೀಂ ಹೇಳಿದ್ದಾರೆ. ತಾನು ಮಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿ ಶಾಮೀಲಾಗಿದ್ದಾಗಿ ಶೇಖ್ ಮುಂದೆ ಅಸೀಮಾನಂದ ತಪ್ಪೊಪ್ಪಿಕೊಂಡಿದ್ದರೆಂದು ಹೇಳಲಾಗುತ್ತಿದೆ. ಪ್ರಕರಣದಲ್ಲಿ ಶಂಕಿತ ಆರೋಪಿಯಾಗಿ 2007ರಲ್ಲಿ ಬಂಧಿತರಾಗಿದ್ದ ಕಲೀಂ 2008ರಲ್ಲಿ ಖುಲಾಸೆಗೊಂಡಿದ್ದರು.
ಅಸೀಮಾನಂದ ಹೊಸದಿಲ್ಲಿಯಲ್ಲಿನ ಮ್ಯಾಜಿಸ್ಟ್ರೇಟ್ ಹಾಗೂ ಕಲೀಂ ಮುಂದೆ ನೀಡಿದ್ದ ತಪ್ಪೊಪ್ಪಿಗೆ ಹೇಳಿಕೆಯನ್ನು ಪ್ರಾಸಿಕ್ಯೂಶನ್ ಸಲ್ಲಿಸಿ ಆರೋಪ ಪಟ್ಟಿಯಲ್ಲಿ ಇದನ್ನೇ ಪ್ರಮುಖ ಸಾಕ್ಷ್ಯವನ್ನಾಗಿಸಿತ್ತು. ಆದರೆ ಎಪ್ರಿಲ್ 16ರಂದು ಎನ್‍ಐಎ ನ್ಯಾಯಾಲಯ ನೀಡಿದ್ದ ತೀರ್ಪಿನಲ್ಲಿ ನ್ಯಾಯಾಧೀಶ ಕೆ. ರವೀಂದರ್ ರೆಡ್ಡಿಯವರು ಅಸೀಮಾನಂದ ಸಹಿತ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದ್ದರು. ಅಸೀಮಾನಂದ ಚಂಚಲಗುಡ ಜೈಲಿನಲ್ಲಿರುವಾಗ ಕಲೀಂ ಮತ್ತು ಇನ್ನೊಬ್ಬ ಯುವಕ ಮಕ್ಬೂಲ್ ಬಿನ್ ಅಲಿ ಅಲ್ಲಿದ್ದರೆಂಬುದನ್ನು ಪ್ರಾಸಿಕ್ಯೂಶನ್ ಸಾಬೀತುಪಡಿಸಲು ವಿಫಲವಾಗಿತ್ತು ಎಂದಿದ್ದರು.
ಈ ಅಂಶವನ್ನು ಸಾಬೀತು ಪಡಿಸಲು ಸಿಬಿಐ ಹಾಗೂ ಪ್ರಾಸಿಕ್ಯೂಶನ್ ಪರ ವಕೀಲರು ಜೈಲು ದಾಖಲೆಗಳನ್ನೇಕೆ ಪರಿಶೀಲಿಸಿಲ್ಲ ಎಂದು 29 ವರ್ಷದ ಕಲೀಂ ಕೇಳುತ್ತಾರೆ. "ಇದು ಕಷ್ಟದ ಕೆಲಸವೇ ?, ಆರೋಪಿಗಳಾದ ಲೋಕೇಶ್ ಶರ್ಮ ಮತ್ತ ದೇವೇಂದರ್ ಗುಪ್ತಾ ಅದಾಗಲೇ ಅಲ್ಲಿದ್ದರೆ ನಂತರ ಅಸೀಮಾನಂದ ಅವರನ್ನೂ ಅಲ್ಲಿರಿಸಲಾಗಿತ್ತು. ಶರ್ಮ ಮತ್ತು ಗುಪ್ತಾರನ್ನು ನಂತರ ಬೇರೆಡೆಗೆ ಕರೆದೊಯ್ಯಲಾಯಿತು. ಬ್ಯಾರಾಕಿನಲ್ಲಿ ಅಸೀಮಾನಂದ ಮಾತ್ರ ಇದ್ದರು. ಕೆಲ ದಿನಗಳ ಕಾಲ ನಾವಿಬ್ಬರೂ ಜತೆಯಾಗಿದ್ದೆವು, ಇದು ಸತ್ಯ. ಇದನ್ನು ಅಜ್ಮೀರ್ ಮತ್ತು ಪಂಚಕುಲಾ ನ್ಯಾಯಾಲಯದ ಮುಂದೆ ಹೇಳಿದ್ದೇನೆ" ಎಂದು ಕಲೀಂ ಹೇಳುತ್ತಾರೆ.
ಇದೀಗ ಪ್ರಕರಣ ಅಂತ್ಯಗೊಂಡಿದೆ ಎಂಬುದು ಮಲಕಪೇಟೆ ಎಐಎಂಐಎಂ ಶಾಸಕ ಅಹ್ಮದ್ ಭಲಾಲ ಅವರ ಕಚೇರಿಯಲ್ಲಿ ಕೆಲಸ ಮಾಡುವ ಕಲೀಂಗೆ ಸಮಾಧಾನ ತಂದಿದೆ. "ಅದರ ಬಗ್ಗೆ ಚರ್ಚೆ ಮಾಡುವುದು ನನಗಿಷ್ಟವಿಲ್ಲ. ಮೂರು ತಿಂಗಳ ಹಿಂದೆ ನಾನು ವಿವಾಹವಾಗಿದ್ದೇನೆ. ಆ ಸಂಗತಿಯನ್ನು ಮರೆಯಲಿಚ್ಛಿಸುತ್ತೇನೆ'' ಎಂದು ಹೇಳುತ್ತಾರೆ.
ಜೂನ್ 3, 2007ರಂದು ಕಲೀಂರನ್ನು ಹೈದರಾಬಾದ್ ಪೊಲೀಸರ ವಿಶೇಷ ತನಿಖಾ ತಂಡ ಬಂಧಿಸಿತ್ತು. ಸಿಮ್ ಕಾರ್ಡ್ ಪಡೆಯಲು ಫೋರ್ಜರಿ ಮಾಡಲಾದ ದಾಖಲೆಗಳನ್ನು ಬಳಸಿದ್ದ ಆರೋಪ ಅವರ ಮೇಲಿತ್ತು. ಇವುಗಳನ್ನು ಉಗ್ರ ಸಂಘಟನೆಗಳಾಧ ಲಷ್ಕರ್, ಜೈಶ್ ಹಾಗೂ ಹರ್ಕತ್ ಉಲ್ ಜೆಹಾದ್ ಇಸ್ಲಾಮಿ ಬಾಂಗ್ಲಾದೇಶದಂತಹ ಸಂಘಟನೆಗಳೊಂದಿಗೆ ನಂಟು ಹೊಂದಿದ್ದ ಕಲೀಂ ಸೋದರರು ಉಪಯೋಗಿಸಿದ್ದರೆಂಬ ಆರೋಪ ಹೊರಿಸಲಾಗಿತ್ತು.
ಕಲೀಂ ಸಹವರ್ತಿಗಳೆಂದು ಹೇಳಲಾದ ನಾಲ್ಕು ಮಂದಿ ಇತರರನ್ನೂ ಬಂಧಿಸಲಾಗಿದ್ದರೂ ಹಲವಾರು ತನಿಖೆ ಹಾಗೂ ಮಂಪರು ಪರೀಕ್ಷೆಯ ನಂತರವೂ ಯಾರ ವಿರುದ್ಧದ ಆರೋಪವನ್ನೂ ಸಾಬೀತುಪಡಿಸಲು ವಿಫಲವಾದ ನಂತರ ಅವರನ್ನು ಜುಲೈ 23, 2008ರಂದು ಖುಲಾಸೆಗೊಳಿಸಲಾಗಿತ್ತು.