×
Ad

ಮೋದಿ ಅಸಾರಾಂ ಬಾಪುವಿಗೆ ನಮಿಸುವ ವೀಡಿಯೋ ಪೋಸ್ಟ್ ಮಾಡಿದ ಕಾಂಗ್ರೆಸ್

Update: 2018-04-25 17:08 IST

ಹೊಸದಿಲ್ಲಿ, ಎ.25: ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳನ್ನು ಅತ್ಯಾಚಾರಗೈದ ಪ್ರಕರಣದಲ್ಲಿ ಇಂದು ಅಪರಾಧಿ ಎಂದು ಘೋಷಿಸಲ್ಪಟ್ಟ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಜೊತೆ ಪ್ರಧಾನಿ ನರೇಂದ್ರ ಮೋದಿ ಕೆಲವು ವರ್ಷಗಳ ಹಿಂದೆ ಕಾಣಿಸಿಕೊಂಡಿದ್ದಾಗ ತೆಗೆಯಲಾಗಿದ್ದ ಫೋಟೋ, ವೀಡಿಯೋಗಳನ್ನು ಕಾಂಗ್ರೆಸ್ ಪಕ್ಷ ಮತ್ತು ಹಲವು ಮಂದಿ ಇತರರು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮೋದಿ ಅಸಾರಾಂ ಬಾಪುವಿಗೆ ಗೌರವ ಸೂಚಿಸುತ್ತಿರುವ ಫೋಟೋ, ವೀಡಿಯೋಗಳನ್ನು ಪೋಸ್ಟ್ ಮಾಡಿರುವ ಕಾಂಗ್ರೆಸ್ ಅದರ ಕೆಳಗೆ "ವ್ಯಕ್ತಿಯೊಬ್ಬ ಆತನ ಜತೆಗೆ ಕಾಣಿಸಿಕೊಳ್ಳುವ ಜನರಿಂದಾಗಿ ಗುರುತಿಸಲ್ಪಡುತ್ತಾನೆ'' ಎಂದು ಬರೆದಿದೆ.

ಮಹಿಳೆಯರ ಬಗ್ಗೆ ನಿಂದನಾತ್ಮಕ ಹೇಳಿಕೆ ನೀಡಿದ್ದಾರೆನ್ನಲಾದ ಬಿಜೆಪಿ ರಾಜಕಾರಣಿಗಳ ಪಟ್ಟಿಯನ್ನೂ ಕಾಂಗ್ರೆಸ್ ಟ್ವೀಟ್ ಮಾಡಿದೆ. ಈತನ್ಮಧ್ಯೆ ಕೆಲ ಟ್ವಿಟ್ಟರಿಗರು, ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಯಾವುದೋ ಸಮಾರಂಭದಲ್ಲಿ ಹಲವು ವರ್ಷಗಳ ಹಿಂದೆ ಅಸಾರಾಂಗೆ ನಮಿಸುತ್ತಿರುವ ಫೋಟೋ ಪೋಸ್ಟ್ ಮಾಡಿದ್ದಾರೆ.

ರಾಜಕಾರಣಿಗಳು ಅಸಾರಾಂ ಜತೆ ಕಾಣಿಸಿಕೊಂಡ ಹಳೆಯ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುವವರನ್ನು ಹಿಂದಿ ನಟ ನಿರ್ದೇಶಕ ಫರ್ಹಾನ್ ಅಖ್ತರ್ ಟ್ವೀಟ್ ಮಾಡಿ  ಟೀಕಿಸಿದ್ದಾರೆ. ಅಸಾರಾಂ ಅಪರಾಧಿ ಎಂದು ಘೋಷಿಸಲ್ಪಟ್ಟಿದ್ದಾರೆ ಎಂದ ಮಾತ್ರಕ್ಕೆ ಅವರ ಜತೆ ಹಿಂದೆ ಕಾಣಿಸಿಕೊಂಡಿರುವುದು ಒಂದು ಅಪರಾಧವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

"ಅಸಾರಾಂ ಬಾಲಕಿಯ ಅತ್ಯಾಚಾರಿ. ಆತ ಅಪರಾಧಿಯೆಂದು ಘೋಷಿಸಲ್ಪಟ್ಟಿದ್ದಾನೆ. ಆತ ಮತ್ತು ಮೋದಿ ಜತೆಯಾಗಿರುವ ಚಿತ್ರಗಳನ್ನು ಶೇರ್ ಮಾಡುವುದನ್ನು ನಿಲ್ಲಿಸುತ್ತಾರೆಯೇ? ಆತ ತಪ್ಪು ಮಾಡಿದ್ದಾರೆಂದು ಸಾಬೀತಾಗುವ ಮುಂಚೆ ಅವರನ್ನು ಗೌರವಿಸಿದ್ದರೆ ಅದು ಅಪರಾಧವಲ್ಲ. ನಮ್ಮ ಹಾಗೆಯೇ ಅವರಿಗೂ ಅಸಾರಾಂ ತಪ್ಪು ಮಾಡಿದ್ದರೆಂದು ಆಗ ತಿಳಿದಿರಲಿಲ್ಲವೆಂದು ತಿಳಿಯೋಣ'' ಎಂದು ಅಖ್ತರ್ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News