‘ಮ್ಯಾಕ್‌ಬೆತ್‌ನ’ ಆಸೆ, ದುರಾಸೆ, ಪಶ್ಚಾತ್ತಾಪ ಇಂದಿಗೂ ಪ್ರಸ್ತುತ -ಅಭಯಸಿಂಹ

Update: 2018-04-25 18:38 GMT

ನಿತ್ಯಾನಂದ ಪೈ ನಿರ್ಮಾಣ ಹಾಗೂ ಪ್ರಶಸ್ತಿ ವಿಜೇತ ಯುವ ನಟ ಅಭಯಸಿಂಹ ನಿರ್ದೇಶನದ ತುಳು ಚಲನಚಿತ್ರ ‘ಪಡ್ಡಾಯಿ’ 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ತುಳು ಚಿತ್ರವಾಗಿ ಆಯ್ಕೆಯಾಗುವ ಮೂಲಕ ಕೋಸ್ಟಲ್‌ವುಡ್‌ನ ಗರಿಮೆಯನ್ನು ಹೆಚ್ಚಿಸಿದೆ. ಮಾತ್ರವಲ್ಲದೆ ಈ ಚಿತ್ರ ಕಠ್ಮಂಡು ಏಶ್ಯನ್ ಲ್ಯಾಬ್‌ನಲ್ಲೂ ಉತ್ತಮ ಚಿತ್ರವಾಗಿ ಆಯ್ಕೆಯಾಗಿದೆ. ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿರುವ ಚಿತ್ರದ ಪ್ರಥಮ ಪ್ರದರ್ಶನವನ್ನು ಮೊನ್ನೆ ಮಾಧ್ಯಮ ಹಾಗೂ ಕೋಸ್ಟಲ್‌ವುಡ್‌ನ ಗಣ್ಯರಿಗಾಗಿ ಏರ್ಪಡಿಸಲಾಯಿತು. ಈ ಸಂದರ್ಭ ಚಿತ್ರದ ನಿರ್ದೇಶಕ ಅಭಯಸಿಂಹ ಅವರನ್ನು ‘ವಾರ್ತಾಭಾರತಿ’ ಮಾತನಾಡಿಸಿದ್ದು, ಸಂದರ್ಶನದ ಆಯ್ದ ಭಾಗವನ್ನು ಇಲ್ಲಿ ನೀಡಲಾಗಿದೆ.

♦ ಪಡ್ಡಾಯಿ ಚಲನಚಿತ್ರ ನಿರ್ದೇಶನದ ಹಿಂದಿನ ಶ್ರಮದ ಬಗ್ಗೆ ಹೇಳುವಿರಾ?

ಅಭಯಸಿಂಹ: ‘ಪಡ್ಡಾಯಿ’ ಚಲನಚಿತ್ರ ವಿಲಿಯಂ ಶೆೇಕ್ಸ್ ಪಿಯರ್ ಅವರ ‘ಮ್ಯಾಕ್‌ಬೆತ್’ ಆಧಾರಿತ ಕಥೆ. 400 ವರ್ಷಗಳ ಹಿಂದಿನ ಕತೆಗೆ ಇಂದಿನ ಸ್ಥಳೀಯ ಭಾಷೆ, ಸನ್ನಿವೇಶಕ್ಕೆ ತಕ್ಕ ಹಾಗೆ ರೂಪು ನೀಡುವುದು ಸವಾಲಿನ ಕೆಲಸವಾಗಿತ್ತು. ಅಡಾಪ್ಟೇಷನ್ ನನಗೆ ಪ್ರಥಮ ಅನುಭವ. ಸ್ಥಳೀಯ ಅಭಿರುಚಿಗೆ ತಕ್ಕ ಹಾಗೆ ಚಿತ್ರವನ್ನು ಯಾವ ರೀತಿಯಲ್ಲಿ ಪ್ರಸ್ತುತ ಪಡಿಸಬೇಕೆಂಬ ಬಗ್ಗೆ ಬಹುಮುಖ್ಯ ಸವಾಲು, ಶ್ರಮವಿತ್ತು. ಶ್ರಮ ಎನ್ನುವುದಕ್ಕಿಂತಲೂ ಸೃಜನಾತ್ಮರ ಚಿಂತನೆ ಇತ್ತು. ಸೀಮಿತ ಬಜೆಟ್‌ನಲ್ಲಿ ತುಳು ಸಿನೆಮಾ ಮಾರುಕಟ್ಟೆಯನ್ನು ಗಮನದಲ್ಲಿಸಿರಿ ಚಿತ್ರವನ್ನು ಮಾಡಲಾಗಿದೆ.

♦ ಪ್ರಾದೇಶಿಕ ಭಾಷೆಯಲ್ಲಿ ಚಿತ್ರ ನಿರ್ಮಾಣದ ವೇಳೆ ಎದುರಿಸಿದ ಸವಾಲು?
ಅಭಯಸಿಂಹ:
ಯಾವುದೇ ಭಾಷೆಯಾಗಿದ್ದರೂ ಸಿನೆಮಾ ಎಂಬುದು ಸಿನೆಮಾ. ನಾನು ಮಲಯಾಳಂನಲ್ಲೂ ಚಿತ್ರ ಮಾಡಿದ್ದೇನೆ. ಸಿನೆಮಾಕ್ಕೆ ಅದರದ್ದೇ ಆದ ಭಾಷೆ ಇದೆ. ಕಲಾವಿದರು ಮಾತನಾಡುವ ಭಾಷೆ ಪ್ರಾಸಂಗಿಕ ಅಷ್ಟೆ. ತುಳು ಸಿನೆಮಾ ರಂಗ ವಿಭಿನ್ನ ಎನ್ನಲಾಗದು. ಪ್ರತಿ ಸಿನೆಮಾಕ್ಕೂ ತಯಾರಿ ಇರುತ್ತದೆ. ಪಡ್ಡಾಯಿಗೂ ಇತ್ತು. ಕನ್ನಡಕ್ಕೆ ಹೋಲಿಸಿದರೆ, ತುಳು ಸಿನೆಮಾದ ಮಾರುಕಟ್ಟೆ ಸ್ವಲ್ಪ ಭಿನ್ನ. ಹಿಂದಿಗೆ ಹೋಲಿಸಿದರೆ, ಕನ್ನಡದ ಮಾರುಕಟ್ಟೆ ಭಿನ್ನವಾಗಿರುತ್ತದೆ. ಹಾಗಾಗಿ ಪ್ರಾದೇಶಿಕ ಭಾಷೆಯ ಮಾರುಕಟ್ಟೆಯನ್ನು ಗಮನದಲ್ಲಿರಿಸಿ ಚಿತ್ರವನ್ನು ಮಾಡಬೇಕಾಗಿತ್ತು.

♦ ಮ್ಯಾಕ್‌ಬೆತ್ ಕಥೆಯನ್ನು ಆಯ್ಕೆ ಮಾಡಲು ಕಾರಣ?
ಅಭಯಸಿಂಹ:
ಮ್ಯಾಕ್‌ಬೆತ್ 14 ವರ್ಷಗಳ ಹಿಂದೆ ಓದಿರುವ ನಾಟಕ. ಬೇರೆ ಬೇರೆ ರೂಪಾಂತರಗಳಲ್ಲಿ ಓದಿದ್ದೇನೆ. ರಂಗ ಭೂಮಿಯಲ್ಲಿ ನೋಡಿದ್ದೇನೆ. ಯಾವಾಗಲೂ ಕಾಡುತ್ತಿದ್ದ ಕಥೆ ಅದು. ಮ್ಯಾಕ್‌ಬೆತ್‌ನಲ್ಲಿ ಆಸೆ, ದುರಾಸೆ, ಪಶ್ಚಾತ್ತಾಪ ಕತೆ ಇಂದಿಗೆ ಪ್ರಸ್ತುತ. ಇಂದು ಕಾಡುತ್ತಿರುವ ಮಿತಿಮೀರಿದ ಆಸೆ, ಹಣಕ್ಕಾಗಿ ಮಾತ್ರವಲ್ಲ, ಅಧಿಕಾರಕ್ಕಾಗಿನ ಆಸೆ, ಪರಿಸರದ ಮೇಲಿನ ಅತ್ಯಾಚಾರ. ಇದೆಲ್ಲವನ್ನೂ ಗಮನಿಸಿದಾಗ ಇಂದಿಗೆ ಪ್ರಸ್ತುತ ಎನಿಸಿತು. ಶೇಕ್ಸ್‌ಪಿಯರ್ ತೀರಿ ಹೋಗಿ ಇಂದಿಗೆ ಸರಿಯಾಗಿ 402 ವರ್ಷಗಳಾಗಿವೆ. 402 ವರ್ಷಗಳ ಹಿಂದಿನ ಕತೆ ಇಂದಿಗೆ ಇನ್ನಷ್ಟು ಅರ್ಥಪೂರ್ಣವಾಗಿದೆ. ಇದನ್ನು ಎಲ್ಲಿಗೆ ಪ್ರಸ್ತುತ ಪಡಿಸಬೇಕೆಂದು ಚಿಂತಿಸುವಾಗ ಹೊಳೆದಿದ್ದು ಕರಾವಳಿ. ನಾನು ಬೆಳೆದು ಬಂದಿರುವಂತದ್ದು, ಮಂಗಳೂರಿನಲ್ಲಿ. ಹಾಗಾಗಿ ಇಲ್ಲಿ ಸಾಕಷ್ಟು ಮೊಗವೀರ ಸ್ನೇಹಿತರನ್ನು ನಾನು ಹೊಂದಿದ್ದೇನೆ. ಅವರ ಜೀವನ ಕ್ರಮ ನೋಡಿದ್ದೆ. ಹಾಗಾಗಿ ನನ್ನ ತಲೆಯಲ್ಲಿ ಅದು ಗಾಢವಾಗಿ ಕಾಡಲಾರಂಭಿಸಿತು. ಇವೆಲ್ಲಾ ಸೇರಿ ವಿಲಿಯಂ ಶೇಕ್ಸ್‌ಪಿಯರ್‌ನ ಮ್ಯಾಕ್‌ಬೆತ್ ತುಳುವಿಲ್ಲಿ ‘ಪಡ್ಡಾಯಿ’ಯಾಗಿ ರೂಪುಗೊಂಡಿದೆ.

♦ ತುಳು ಚಿತ್ರರಂಗದಲ್ಲಿ ಹಾಸ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಹಾಗಿರುವಾಗ ಕಲಾತ್ಮಕ ಚಿತ್ರ ನಿರ್ದೇಶನ, ಕಥೆ ಹೇಗೆ ರೂಪುಗೊಂಡಿತು?
ಅಭಯಸಿಂಹ:
ಪ್ರತಿಯೊಂದು ಮಾರುಕಟ್ಟೆಗೂ ಅದರದ್ದೇ ಆದ ವೌಲ್ಯವಿರುತ್ತದೆ. ಅಲ್ಲಿನ ಕಲಾವಿದರು, ತಂತ್ರಜ್ಞರು ಶ್ರಮ ವಹಿಸುತ್ತಾರೆ. ಮಾರುಕಟ್ಟೆಯಲ್ಲಿ ಒಂದು ಚಿತ್ರ ನೀಡಿ ಅದರಿಂದ ಪ್ರತಿಫಲ ಪಡೆಯಬೇಕಾದರೆ ಅಲ್ಲಿ ಯಾವುದು ಅಗತ್ಯ ಎಂಬುದನ್ನು ಯೋಚಿಸಲಾಗುತ್ತದೆ. ನಾವೂ ಅದನ್ನು ಮಾಡಿದ್ದೇವೆ. ಯಾವ ರೀತಿಯ ಪ್ರೇಕ್ಷಕರನ್ನು ಮುಟ್ಟಬೇಕು ಎಂಬ ನಿಟ್ಟಿನಲ್ಲಿ ಪಡ್ಡಾಯಿ ಚಿತ್ರ ತಯಾರಾಗಿದೆ. ಹಾಸ್ಯ ಪ್ರಧಾನಗಳ ಜತೆಗೆ ತುಳುವಿನಲ್ಲಿ ಸಾಕಷ್ಟು ಕಲಾತ್ಮಕ ಚಿತ್ರಗಳೂ ತೆರೆಕಂಡಿವೆ. ಕಳೆದ ವರ್ಷವಷ್ಟೆ ಮದಿಪು ಚಲನಚಿತ್ರ ತೆರೆಕಂಡಿತ್ತು. ಭಿನ್ನ ರುಚಿಗಳಿರುವ ಚಿತ್ರಳು ತುಳುವಿನಲ್ಲಿ ತಯಾರಾಗುತ್ತಿವೆ.
ಕನ್ನಡಕ್ಕೆ ಹೋಲಿಸಿದರೆ ತುಳು ಚಿತ್ರರಂಗ ಇನ್ನೂ ಬೆಳೆಯುತ್ತಿರುವ ಇಂಡಸ್ಟ್ರಿ. ಇಲ್ಲಿ ಸಾಕಷ್ಟು ಪ್ರಯೋಗಗಳು ನಡೆಯುತ್ತಿವೆ. ಸಾಕಷ್ಟು ಹೊಸ ಚಿತ್ರಗಳು ಬರುತ್ತಿವೆ. ಹಾಸ್ಯ ಪ್ರಧಾನ ಚಿತ್ರಗಳಿಗೆ ಬೇಡಿಕೆ ಇದೆ. ಹಾಗಾಗಿ ಅದನ್ನು ಪುನರಾವರ್ತಿಸುವುದರಲ್ಲಿ ತಪ್ಪಿಲ್ಲ ಎಂಬುದು ನನ್ನ ಭಾವನೆ.

♦ ಕಲಾತ್ಮಕ ಚಿತ್ರಗಳಿಗೆ ಪ್ರೇಕ್ಷಕರ ಕೊರತೆ ಇದೆ ಎಂಬ ಕೊರಗು ತುಳು ಚಿತ್ರರಂಗದಲ್ಲಿಯೂ ಇದೆಯೇ?
ಅಭಯಸಿಂಹ:
ಕಲಾತ್ಮಕ ಚಿತ್ರಗಳಿಗೆ ಕೊರತೆ ಎಂದು ಹೇಳಲಾರೆ. ಆದರೆ ಚಿತ್ರ ವೀಕ್ಷಣೆಯ ಶೈಲಿ ಭಿನ್ನವಾಗಿರುತ್ತದೆ. ವಾಣಿಜ್ಯ ಸಿನೆಮಾಗಳಿಗೆ ಪ್ರಥಮ ಶೋಗೆ ವೀಕ್ಷಣೆಗೆ ಪ್ರೇಕ್ಷಕರು ಮುಗಿಬಿದ್ದು ನೋಡುತ್ತಾರೆ ಎನ್ನುತ್ತೇವೆ. ಆದರೆ ಕಲಾತ್ಮಕ ಚಿತ್ರಗಳನ್ನು ನೋಡಲು ಧಾವಂತದಲ್ಲಿ ಚಿತ್ರಮಂದಿರಕ್ಕೆ ಮುಗಿಬೀಳುವುದಿಲ್ಲ. ನಮ್ಮಲ್ಲಿನ ಸಿನೆಮಾ ಸಂಸ್ಕೃತಿ ಹೊರ ದೇಶಗಳಿಗೆ ಹೋಲಿಕೆ ಮಾಡಿದರೂ ಭಿನ್ನವೇ. ಹಾಗಾಗಿ ಕಲಾತ್ಮಕ ಸಿನೆಮಾಗಳಿಗೆ ನಿಧಾನ ಪ್ರತಿಕ್ರಿಯೆ ದೊರಕಿದರೂ, ಅದನ್ನು ವೀಕ್ಷಿಸುವ ದೊಡ್ಡ ಪ್ರೇಕ್ಷಕ ವರ್ಗ ನಮ್ಮಲ್ಲಿದೆ.

♦ ಕಲಾತ್ಮಕ ಚಿತ್ರಗಳು ಚಿತ್ರಮಂದಿರಗಳಲ್ಲಿ ಹೆಚ್ಚಾಗಿ ಪ್ರದರ್ಶನಗೊಳ್ಳುವುದು ಕಡಿಮೆ ಎಂಬ ಭಾವನೆ ಇದೆ. ಹಾಗಾಗಿ ಪಡ್ಡಾಯಿ ಚಿತ್ರವನ್ನು ಹೇಗೆ ಪ್ರೇಕ್ಷಕರಿಗೆ ತಲುಪಿಸುತ್ತೀರಿ?
ಅಭಯಸಿಂಹ:
ಸಿನೆಮಾವೊಂದು ಪ್ರೇಕ್ಷಕರಿಗೆ ತಲುಪಿದಾಗಲೇ ದೊಡ್ಡ ಪ್ರಶಸ್ತಿ ದೊರಕಿದಂತೆ. ರಾಷ್ಟ್ರ ಪ್ರಶಸ್ತಿ ದೊಡ್ಡ ಗೌರವ. ಪ್ರೇಕ್ಷಕರು ನೋಡಿ ಮೆಚ್ಚುಗೆ ವ್ಯಕ್ತಪಡಿಸುವುದು ಕೂಡಾ ದೊಡ್ಡ ಗೌರವ. ಇಂದು ಪ್ರೀಮಿಯರ್ ಶೋ ಆಯೋಜಿಸಲಾಗಿದೆ. ಮಾಧ್ಯಮಗಳ ಮೂಲಕ ಇನ್ನಷ್ಟು ಕಲಾತ್ಮಕ ಚಿತ್ರ ವೀಕ್ಷಕರನ್ನು ತಲುಪಲು ಪ್ರಯತ್ನಿಸಲಾಗುವುದು.

♦ ತುಳುವಿನಲ್ಲಿ ನಿಮ್ಮಿಂದ ಮತ್ತೆ ಹೊಸ ಚಿತ್ರ ಸಿದ್ಧವಾಗುತ್ತಿದೆಯೇ?
ಅಭಯಸಿಂಹ:
ತುಳು ಮಾತ್ರವಲ್ಲ. ನಾನು ಒಂದೆರಡು ಸ್ಕ್ರಿಪ್ಟ್‌ಗಳನ್ನು ತಯಾರಿ ಸುತ್ತಿದ್ದೇನೆ. ಒಂದು ಸ್ಕ್ರಿಪ್ಟ್ ಕನಿಷ್ಠ ಒಂದರಿಂದ ಒಂದೂವರೆ ವರ್ಷ ತಲೆಯಲ್ಲಿ ಓಡಾಡುತ್ತಿದೆ. ಭಾಷಾತೀತವಾಗಿ ಒಂದು ಚಿತ್ರದ ಸ್ಕ್ರಿಪ್ಟ್ ತಯಾರಾಗುತ್ತಿದೆ.

♦ ಚಿಕ್ಕ ವಯಸ್ಸಿನಲ್ಲಿ ರಾಷ್ಟ್ರ ಪ್ರಶಸ್ತಿ ಚಿತ್ರದ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಬಗ್ಗೆ ಏನನ್ನಿಸುತ್ತಿದೆ? ಯಶಸ್ಸು ಹೇಗೆ ಸಾಧ್ಯ ಆಯಿತು?
ಅಭಯಸಿಂಹ:
ಯಶಸ್ಸು ನಮ್ಮ ಕೈಯಲ್ಲಿರುವುದಿಲ್ಲ. ನಮ್ಮದು ಪ್ರಯತ್ನ ಮಾತ್ರ. ನಾನು ಫೋಟೋಗ್ರಫಿ ಮಾಡುತ್ತಿದ್ದವನು. ಹಾಗಾಗಿ ಚಿತ್ರ ನಿರ್ದೇಶನದ ಬಗ್ಗೆ ಆಸಕ್ತಿ ಬೆಳೆಯಲು ಕಾರಣವಾಯಿತು. ನಮ್ಮ ಕುಟುಂಬದಲ್ಲಿ ಯಾರೂ ಸಿನೆಮಾ ಕ್ಷೇತ್ರದಲ್ಲಿ ಇದ್ದವರಲ್ಲ. ಹಾಗಾಗಿ ಸಿನೆಮಾವನ್ನು ಅಕಡಮಿಕ್ ಆಗಿ ಕಲಿಯಬೇಕೆಂಬ ಆಸೆಯಿಂದ ಪುಣೆಯಲ್ಲಿ ಫಿಲ್ಮ್ ಇನ್ಸ್‌ಸ್ಟಿಟ್ಯೂಟ್ ಆಫ್ ಇಂಡಿಯಾಕ್ಕೆ ಸೇರಿ ಕಲಿತೆ. ಹಾಗಾಗಿ ನನ್ನ ಸಿನೆಮಾ ಯಾನ ಆರಂಭವಾಯಿತು. 10 ವರ್ಷದ ಪಯಣ. ಅತೀ ಚಿಕ್ಕ ವಯಸ್ಸಿನಲ್ಲಿ ನನ್ನ ಸಾಧನೆ ಅಲ್ಲ. ಇದು ನನ್ನ ಪ್ರಯತ್ನ ಅಷ್ಟೆ. ಎಲ್ಲರೂ ಅವರವರ ಕ್ಷೇತ್ರದಲ್ಲಿ ಅವರವರ ಪ್ರಯತ್ನ ಮಾಡುತ್ತಾರೆ. ಹಾಗೆ ಸಿನೆವಾದಲ್ಲಿ ನಾನು ದುಡಿಮೆ ಮಾಡಿದ್ದೇನೆ.

♦ ಪಡ್ಡಾಯಿ ಚಿತ್ರದಲ್ಲಿ ವಿಶೇಷ ಧ್ವನಿ ತಂತ್ರಜ್ಞಾನ ಬಳಸಲಾಗಿದೆ. ಕೋಸ್ಟಲ್‌ವುಡ್‌ನಲ್ಲಿ ಪ್ರಥಮ ಪ್ರಯತ್ನ ಎನ್ನಲಾಗುತ್ತಿದೆ. ಏನದು?
ಅಭಯಸಿಂಹ:
‘ಸಿಂಕ್ ಸೌಂಡ್’ ಎಂಬ ತಂತ್ರಜ್ಞಾನ ಇಲ್ಲಿ ಬಳಕೆ ಮಾಡಲಾ ಗಿದೆ. ಇದು ತೀರಾ ಹೊಸತೇನಲ್ಲ. ಆದರೆ ಕೋಸ್ಟಲ್‌ವುಡ್‌ನಲ್ಲಿ ಹೊಸತು. ಹಾಲಿವುಡ್‌ನಲ್ಲಿ ಎಲ್ಲಾ ಸಿನೆಮಾಗಳು ಸಿಂಕ್ ಸೌಂಡ್‌ನಲ್ಲಿ ಆಗುತ್ತದೆ. ಬಾಲಿವುಡ್‌ನಲ್ಲಿ ಶೇ. 70ರಷ್ಟು ಹಾಗೂ ಕನ್ನಡದಲ್ಲಿ ಶೇ. 20ರಷ್ಟು ಈ ತಂತ್ರಜ್ಞಾನ ಬಳಕೆಯಾಗುತ್ತಿದೆ. ಶೂಟಿಂಗ್ ಮಾಡಿದ ಮೇಲೆ ಡಬ್ಬಿಂಗ್ ಮಾಡಲಾಗುತ್ತದೆ. ಲೊಕೇಶನ್‌ನಲ್ಲಿ ಹೇಳಿದ ಡಯಲಾಗ್, ಸ್ಟುಡಿಯೋದಲ್ಲಿ ಡಬ್ಬ್ ಮಾಡಲಾಗುತ್ತದೆ. ಶೂಟಿಂಗ್ ಸಮಯದಲ್ಲೇ ಸೌಂಡ್ ರೆಕಾರ್ಡಿಂಗ್ ಮಾಡಲಾಗಿದೆ. ಆ ಸ್ಥಳಗಳಲ್ಲಿ ಬರುವ ಬೇರೆ ಧ್ವನಿ, ಪರಿಸರವನ್ನು ಒಟ್ಟಾಗಿ ಕಟ್ಟಿಕೊಡುವ ತಂತ್ರಜ್ಞಾನ ಇದು. ಒಬ್ಬ ನಟನ ನಟನೆಯನ್ನು ದಾಖಲಿಸಿಕೊಳ್ಳಲು ಆತನ ಶರೀರ ಮತ್ತು ಶಾರೀರವನ್ನು ಒಟ್ಟಾಗಿ ದಾಖಲಿಸಿಕೊಳ್ಳಬೇಕಾಗುತ್ತದೆ. ಈ ತಂತ್ರಜ್ಞಾನ ಅದರ ಜತೆ ಪರಿಸರವನ್ನು ಕಟ್ಟಿಕೊಡಲು ಈ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುತ್ತದೆ. ಸಿಂಕ್ ಸೌಂಡ್ ತಜ್ಞ ಜೇಮಿ ಡಿಸಿಲ್ವಾ, ಶಿಶಿರ ಕೆವಿ ಸೌಂಡ್ ಡಿಸೈನರ್ ಇವರು ಅತ್ಯಂತ ಕುತೂಹಲಕಾರಿ ತಂತ್ರಜ್ಞಾನವನ್ನು ಒದಗಿಸಿದ್ದಾರೆ.

♦ ಪಡ್ಡಾಯಿ ಎಲ್ಲೆಲ್ಲಾ ಚಿತ್ರೀಕರಣಗೊಂಡಿದೆ?
ಅಭಯಸಿಂಹ:
ಮೊಗವೀರ ಹಳ್ಳಿಯನ್ನು ಮೂಲವಾಗಿರಿಸಿಕೊಂಡು ಚಿತ್ರಕಥೆ ಹೆಣೆಯಲಾಗಿದೆ. ಉಡುಪಿ, ಮಲ್ಪೆ, ಮಲ್ಪೆಯ ಪಡುಕೆರೆ ಸೇರಿ ಕರಾವಳಿಯ ಮೀನುಗಾರಿಕಾ ಜೀವನವನ್ನು ಚಿತ್ರದಲ್ಲಿ ಬಿಂಬಿಸುವ ಪ್ರಯತ್ನ ಮಾಡಲಾಗಿದೆ. 21 ದಿನ ಚಿತ್ರೀಕರಣ ನಡೆದಿದ್ದು, ಸುಮಾರು 18 ಪಡುಕೆರೆ ಹಳ್ಳಿ, ಒಂದು ದಿನ ಮಲ್ಪೆ ಬಂದರು, ಒಂದು ದಿನ ಆಳ ಸಮುದ್ರದಲ್ಲಿ, ಒಂದು ದಿನ ಮಂಗಳೂರಿನ ತಣ್ಣೀರುಬಾವಿಯಲ್ಲಿ ಚಿತ್ರೀಕರಣ ನಡೆದಿದೆ.

Writer - ಸತ್ಯಾ ಕೆ.

contributor

Editor - ಸತ್ಯಾ ಕೆ.

contributor

Similar News