ಮಾಧ್ಯಮಗಳು ಹೇಳುವಂತೆ ಕರಾವಳಿ ಜಿಲ್ಲೆಗಳು 'ಕೋಮುವಾದದ ಪ್ರಯೋಗಶಾಲೆ'ಯೇ?

Update: 2018-04-26 10:35 GMT

ಅಖಿಲಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ರಾಹುಲ್ ಗಾಂಧಿಯವರ ಜೊತೆ ನಮ್ಮ ಚುನಾವಣಾ ಪ್ರಚಾರ ಇಂದಿನಿಂದ ಎರಡು ದಿನಗಳ ಕಾಲ ಕರಾವಳಿಯ ಜಿಲ್ಲೆಗಳಿಂದ ಪ್ರಾರಂಭವಾಗಲಿದೆ. ಕರಾವಳಿಯ ಈ ಜಿಲ್ಲೆಗಳನ್ನು 'ಕೋಮುವಾದದ ಪ್ರಯೋಗಶಾಲೆ', 'ಭಾರತೀಯ ಜನತಾ ಪಕ್ಷದ ಭದ್ರಕೋಟೆ' ಎಂದೆಲ್ಲ ಮಾಧ್ಯಮಗಳು ಬಣ್ಣಿಸುವಾಗ ನನಗೆ ಆಶ್ಚರ್ಯವಾಗುತ್ತದೆ. ಹೀಗೆಂದು ಬಣ್ಣಿಸಲು ಆಧಾರಗಳೇನು?, ಒಂದು ನಿರ್ದಿಷ್ಟ ಪ್ರದೇಶದ ಬಹುಸಂಖ್ಯಾತ ಜನ ಒಂದು ನಿರ್ದಿಷ್ಟ ಸಿದ್ಧಾಂತದ ಜತೆ ಗುರುತಿಸಿಕೊಂಡಿದ್ದಾರೆ ಎನ್ನುವುದಕ್ಕೆ ಆಧಾರಗಳೇನು?.

ಇಂತಹದ್ದೊಂದು ಅಭಿಪ್ರಾಯಕ್ಕೆ ಬರಲು ನಮಗಿರುವ ಏಕೈಕ ಮಾನದಂಡ ಚುನಾವಣಾ ಫಲಿತಾಂಶ. ಈ ಕರಾವಳಿ ಪ್ರದೇಶದಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರಕನ್ನಡ ಎಂಬ ಮೂರು ಜಿಲ್ಲೆಗಳು ಸೇರಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಏಳು, ಉಡುಪಿಯ ಐದು ಕ್ಷೇತ್ರಗಳಲ್ಲಿ ಮೂರು ಮತ್ತು ಉತ್ತರಕನ್ನಡದ ಆರು ಕ್ಷೇತ್ರಗಳಲ್ಲಿ ಮೂರನ್ನು ಕಾಂಗ್ರೆಸ್ ಪಕ್ಷ ಗೆದ್ದಿದೆ. ಅಂದರೆ ಕರಾವಳಿಯ ಒಟ್ಟು 19 ಕ್ಷೇತ್ರಗಳಲ್ಲಿ13 ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದಿದೆ. ಉತ್ತರಕನ್ನಡದಲ್ಲಿ ಗೆದ್ದಿರುವ ಇಬ್ಬರು ಪಕ್ಷೇತರರು ಕೂಡಾ ಈಗ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. 

ಕಳೆದ ವಿಧಾನಸಭಾ ಚುನಾವಣೆಯ ಕಾಲದಲ್ಲಿ ಅಧಿಕಾರದಲ್ಲಿದ್ದದ್ದು ಬಿಜೆಪಿ. ಚರ್ಚ್ ಮೇಲೆ ನಡೆದ ದಾಳಿ, ಹೋಂ ಸ್ಟೇ, ಪಬ್‍ಗಳಲ್ಲಿ ಹೆಣ್ಣು ಮಕ್ಕಳ ಮೇಲೆ ದಾಳಿ, ಅನೈತಿಕ ಪೊಲೀಸ್‍ಗಿರಿ ಎಲ್ಲವನ್ನು ಸಂಘ ಪರಿವಾರ ಆಡಳಿತರೂಢ ಪಕ್ಷದ ಬೆಂಬಲದೊಂದಿಗೆ ನಡೆಸುತ್ತಿದ್ದ ಕಾಲ ಅದು. ಚುನಾವಣಾ ಪ್ರಚಾರದ ಕಾಲದಲ್ಲಿ ನರೇಂದ್ರಮೋದಿಯವರೇ ಕರಾವಳಿ ಭಾಗಕ್ಕೆ ಬಂದು ಕೋಮುಭಾವನೆಯ ಬೆಂಕಿಉಗುಳುವ ಭಾಷಣ ಮಾಡಿ ಹೋಗಿದ್ದರು. ಆದರೆ ಮೂರೂ ಜಿಲ್ಲೆಗಳಲ್ಲಿ ಭಾರತೀಯ ಜನತಾ ಪಕ್ಷ ಗೆದ್ದಿರುವುದು ಕೇವಲ ನಾಲ್ಕು ಸ್ಥಾನಗಳನ್ನು ಮಾತ್ರ.

ಈ ಚುನಾವಣಾ ಫಲಿತಾಂಶವನ್ನು ಮುಂದಿಟ್ಟು ಯಾರಾದರೂ ಕರಾವಳಿ ಜಿಲ್ಲೆಗಳು ಬಿಜೆಪಿಯ ಭದ್ರಕೋಟೆ ಎನ್ನಲು ಸಾಧ್ಯವೇ?, ಕರಾವಳಿ ಜಿಲ್ಲೆಯ ಜನತೆ ಕೋಮುವಾದಿಗಳೆಂದು ಹೇಳಬಹುದೇ?, ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ ಏಳು ಶಾಸಕರಲ್ಲಿ ಇಬ್ಬರು ಮುಸ್ಲಿಮರು, ಒಬ್ಬರು ಕ್ರಿಶ್ಚಿಯನ್ ಮತ್ತು ಒಬ್ಬರು ಜೈನರು, ನಾಲ್ವರೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು. ಈ ರೀತಿಯ ಮಿಶ್ರಜಾತಿ-ಧರ್ಮಗಳ ಮತದಾರರಿರುವ ದೇಶದ ಯಾವುದೇ ಜಿಲ್ಲೆಯಲ್ಲಿ ಬಹುಸಂಖ್ಯಾತ ಶಾಸಕರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರುವ ಉದಾಹರಣಗಳಿಲ್ಲ. ಬಹುಸಂಖ್ಯಾತ ಹಿಂದೂಗಳು ಕೋಮುವಾದಿಗಳಾಗಿದ್ದರೆ ಇದು ಸಾಧ್ಯವಿತ್ತೇ?.

ನಾನು ಇದನ್ನು ಒಪ್ಪುವುದಿಲ್ಲ. ನನ್ನ ಹಲವಾರು ಭಾಷಣಗಳಲ್ಲಿ ಇದನ್ನು ನಾನು ಹೇಳಿದ್ದೇನೆ. ಕರ್ನಾಟಕ ಎನ್ನುವುದು ಗುಜರಾತ್, ಉತ್ತರಪ್ರದೇಶ, ಮಧ್ಯಪ್ರದೇಶ ಅಲ್ಲ. 
ಈ ನೆಲದಲ್ಲಿ ಹನ್ನೆರಡನೇ ಶತಮಾನದಲ್ಲಿಯೇ ಬಸವಣ್ಣನವರು ಜಾತ್ಯತೀತತೆಯ ಬೀಜವನ್ನು ಹಾಕಿದ್ದರು. ಈ ನೆಲದಲ್ಲಿ ಬಾಳಿ ಬೆಳಗಿದ ಸ್ವಾಮಿಗಳು, ಸಂತರು, ದಾಸರು, ಸೂಫಿಗಳು ಜಾತ್ಯತೀತತೆಯ ಪರಂಪರೆಯ ಗಿಡದ ಬೇರುಗಳನ್ನು ಇನ್ನಷ್ಟು ಗಟ್ಟಿಗೊಳಿಸುತ್ತಾ ಬಂದಿದ್ದಾರೆ. ಯಾವ ಸುಂಟರಗಾಳಿ-ಸುನಾಮಿ ಬಂದರೂ ನಮ್ಮ ಸೌಹಾರ್ದತೆಯ ಪರಂಪರೆಯ ಮಹಾಮರ ಉರುಳಿಬೀಳಲಾರದು ಎನ್ನುವ ಭರವಸೆ ನನಗಿದೆ.

ಯಾವುದೇ ವ್ಯಕ್ತಿಗೆ ತಮ್ಮೂರು, ತಮ್ಮ ರಾಜ್ಯ, ತಮ್ಮ ದೇಶ ಎಂಬ ಅಭಿಮಾನ-ಗೌರವ ಇರಬೇಕು. ಆದರೆ ತಮ್ಮನ್ನು ರಾಷ್ಟ್ರಭಕ್ತರೆಂದು ಕರೆದುಕೊಳ್ಳುವ ಭಾರತೀಯ ಜನತಾ ಪಕ್ಷದ ನಾಯಕರಿಗೆ ಇಂತಹದ್ದೊಂದು ಸಾಮಾನ್ಯ ಮನುಷ್ಯತ್ವದ ಗುಣವೂ ಇಲ್ಲ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಗಳನ್ನೊಳಗೊಂಡ ಕರಾವಳಿ ಪ್ರದೇಶ 'ಕೋಮುವಾದದ ಪ್ರಯೋಗಶಾಲೆ', 'ಇಲ್ಲಿ ಉಗ್ರಗಾಮಿಗಳಿದ್ದಾರೆ', 'ಜಿಹಾದಿಗಳಿದ್ದಾರೆ' ಎಂದು ಬಿಜೆಪಿಯ ನಾಯಕರು ಪ್ರತಿದಿನ ಕೂಗಾಡುತ್ತಾ ತಮ್ಮದೇ ಊರಿನ, ರಾಜ್ಯದ ಮಾನ ಕಳೆಯುತ್ತಾ ಇದ್ದಾರೆ. ಇದನ್ನು ಕೇಳಿದ ಬೇರೆ ಜಿಲ್ಲೆ, ರಾಜ್ಯಗಳ ಜನತೆ ಕೂಡಾ ಈ ಸುಳ್ಳು ಸುದ್ದಿಯನ್ನೇ ಹರಡುತ್ತಾರೆ. ಇದು ಇಲ್ಲಿನ ಜನತೆಗೆ ಮಾಡುವ ಘೋರ ಅವಮಾನ.

ಇಲ್ಲಿನ ಮತದಾರರು ಜಾತ್ಯತೀತರು, ಶಾಂತಿಪ್ರಿಯರು ಎನ್ನುವುದನ್ನು ಪ್ರತಿಯೊಂದು ಚುನಾವಣೆಯಲ್ಲಿಯೂ ಸಾಬೀತುಪಡಿಸುತ್ತಿದ್ದಾರೆ. ಹೀಗಿದ್ದೂ ಭಾರತೀಯ ಜನತಾ ಪಕ್ಷ ಕೋಮುವಾದದ ಗುಪ್ತ ಅಜೆಂಡಾದ ಮೂಲಕ ಧರ್ಮ-ಧರ್ಮಗಳ ನಡುವೆ ಬಿರುಕು ಮೂಡಿಸಿ ರಾಜಕೀಯ ಲಾಭ ಗಳಿಸುವ ಪ್ರಯತ್ನವನ್ನು ಮಾಡುತ್ತಲೇ ಇದೆ. ಭಾರತೀಯ ಜನತಾ ಪಕ್ಷದ ನಾಯಕರಿಗೆ ಜನ ನೆಮ್ಮದಿಯಿಂದ ಬದುಕುವುದು ಬೇಕಾಗಿಲ್ಲ. ಅವರಿಗೆ ಕಲ್ಲು ಹೊಡೆಯಬೇಕು, ಬೆಂಕಿ ಇಡಬೇಕು, ಪರಸ್ಪರ ಹೊಡೆದಾಡಿಕೊಳ್ಳಬೇಕು, ಅಮಾಯಕ ವ್ಯಕ್ತಿಗಳು ಸಾಯಬೇಕು. ಬೆಂಕಿಯ ಉರಿಯಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಬೇಕು, ಸಾವಿನ ರಾಜಕಾರಣ ಮಾಡಬೇಕು. ಇದು ಬಿಜೆಪಿ ನಾಯಕರ ಆಸೆ. ಇದನ್ನೇ ಆ ಪಕ್ಷದ ಅಧ್ಯಕ್ಷರು ತನ್ನ ಕಾರ್ಯಕರ್ತರಿಗೆ ಹೇಳಿ ಹೋಗಿದ್ದಾರೆ. ಅವರು ಹೇಳಿದ್ದನ್ನು ಚಾಚೂ ತಪ್ಪದೆ ಇವರು ಮಾಡುತ್ತಿದ್ದಾರೆ.

ಕೋಮುವಾದ ಎನ್ನುವುದು ಸಂವಿಧಾನ ವಿರೋಧಿ ಮಾತ್ರವಲ್ಲ, ಅದು ಮನುಷ್ಯ ವಿರೋಧಿಯೂ ಹೌದು, ಅಭಿವೃದ್ಧಿ ವಿರೋಧಿಯೂ ಹೌದು. ಕೆಲಸಕಳ್ಳ ನಾಯಕರು ತಮ್ಮ ವೈಫಲ್ಯಗಳನ್ನು ಜನರ ಕಣ್ಣಿನಿಂದ ಮುಚ್ಚಿಡಲು ಕೋಮುವಾದದ ಬೆಂಕಿ ಹಚ್ಚುತ್ತಾರೆ. ಇದು ಚುನಾವಣೆಯ ಸಮಯ. ನೂರಾರು ವರ್ಷಗಳಿಂದ ಪರಸ್ಪರ ಪ್ರೀತಿಯಿಂದ, ಸೌಹಾರ್ದತೆಯಿಂದ ಬದುಕುತ್ತಿದ್ದ ಜನರ ಮಧ್ಯೆ ಜಾತಿ-ಧರ್ಮಗಳ ಹೆಸರಲ್ಲಿ ಜಗಳ ಹಚ್ಚಿ ರಾಜಕೀಯ ಲಾಭ ಗಳಿಸಲು ಪ್ರಯತ್ನಿಸುವವರನ್ನು ಸರಿಯಾಗಿ ಗುರುತಿಸಿ ಮುಂದೆಂದೂ ತಲೆ ಎತ್ತಲಾಗದಂತೆ ಸೋಲಿಸಿ ಮೂಲೆಗೆಸೆಯುವ ಕೆಲಸವನ್ನು ಮತದಾರರು ಮಾಡಬೇಕು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಒಬ್ಬ ಸಂವಿಧಾನ ವಿರೋಧಿ ಮಾತ್ರವಲ್ಲ ಮನುಷ್ಯ ವಿರೋಧಿಯನ್ನು ಉತ್ತರ ಕನ್ನಡ ಕ್ಷೇತ್ರದಿಂದ ಆಯ್ಕೆ ಮಾಡಿ ಲೋಕಸಭೆಗೆ ಕಳಿಸಿ ಇಲ್ಲಿನ ಮತದಾರರು ದೊಡ್ಡ ತಪ್ಪು ಮಾಡಿದ್ದಾರೆ. ಆ ಸಂಸದನಿಗೆ ಸಂವಿಧಾನದ ಮೇಲೆ ಗೌರವ ಇಲ್ಲ, ಅನ್ಯಧರ್ಮಿಯರ ಮೇಲಾಗಲಿ, ಸಾಹಿತಿಗಳು, ಕಲಾವಿದರು ಯಾರ ಬಗ್ಗೆಯೂ ಗೌರವ ಇಲ್ಲ. ಮನುಷ್ಯನೆನಿಸಿಕೊಳ್ಳಲು ಅವಶ್ಯವಿರುವ ಮೂಲಭೂತ ಗುಣವಾದ ಮನುಷ್ಯತ್ಯವೇ ಅಲ್ಲ. ಇಂತಹವರನ್ನು ಹುಡುಕಿ ತನ್ನ ಸಂಪುಟಕ್ಕೆ ಸೇರಿಸಿಕೊಂಡಿರುವುದು ಪ್ರಧಾನಿ ನರೇಂದ್ರ ಮೋದಿ. ಈ ಸಂಸದ ತನ್ನ ಸ್ವಂತ ಬುದ್ಧಿಯಿಂದ ಏನೂ ಮಾಡೋಲ್ಲ, ಮೋದಿ-ಶಾ ಹೇಳಿಕೊಟ್ಟದ್ದನ್ನೇ ಮಾಡುತ್ತಿದ್ದಾರೆ.

ಅವರು ದಲಿತರನ್ನು ನಾಯಿಗಳೆನ್ನುತ್ತಾರೆ. ಸಾಹಿತಿಗಳಿಗೆ, ಬುದ್ದಿಜೀವಿಗಳಿಗೆ ತಮ್ಮ ತಂದೆ-ತಾಯಿ ಯಾರೆಂದು ಗೊತ್ತಿಲ್ಲ ಎಂದು ಹೀಯಾಳಿಸುತ್ತಾರೆ, ಅಧಿಕಾರಿಗಳ ಮೇಲೆ ದೈಹಿಕವಾಗಿ ಹಲ್ಲೆ ನಡೆಸುತ್ತಾರೆ, ಕೊನೆಗೆ ಸಂವಿಧಾನವನ್ನೇ ಬದಲಾಯಿಸುತ್ತೇವೆ ಎಂದು ಹೇಳುವ ಧಾರ್ಷ್ಟ್ಯ ತೋರಿಸುತ್ತಾರೆ. ಇಷ್ಟೆಲ್ಲ ಆದ ನಂತರವೂ ಅವರನ್ನು ಸಚಿವ ಸಂಪುಟದಲ್ಲಿ ಇರಿಸಲಾಗಿದೆ. ಪ್ರಧಾನಮಂತ್ರಿಗಳಾದ ನರೇಂದ್ರಮೋದಿಯವರ ಪರೋಕ್ಷ ಬೆಂಬಲ ಇಲ್ಲದೆ ಇದು ಸಾಧ್ಯವಿತ್ತೇ?. ಇಂತಹವರೆಲ್ಲ ಗೋಮೂತ್ರ ಪ್ರೋಕ್ಷಣೆಯಿಂದ ಸರಿಯಾಗುವ ಮನುಷ್ಯರಲ್ಲ. ಚುನಾವಣಾ ಸಮಯದಲ್ಲಿ ನಿಜವಾದ ಚರ್ಚೆ ನಡೆಯಬೇಕಾಗಿರುವುದು ರಾಜಕೀಯ ಪಕ್ಷಗಳ ಸಿದ್ಧಾಂತ, ಕಾರ್ಯಕ್ರಮಗಳು ಮತ್ತು ಸಾಧನೆ ಬಗ್ಗೆ. ಆದರೆ ನಡೆಯುತ್ತಿರುವುದೇನು?, ಜಾತಿ-ಧರ್ಮದ ಹೆಸರಲ್ಲಿ ಜನ ಹೊಡೆದಾಡಿಕೊಂಡಿದ್ದರೆ ತಾವು ಸುರಕ್ಷಿತ ಎಂದು ಬಿಜೆಪಿ ತಿಳಿದುಕೊಂಡಿದೆ. ಇಂತಹವರನ್ನು ತಿರಸ್ಕರಿಸಿ ಕಸದಬುಟ್ಟಿಗೆ ಎಸೆದಾಗ ಮಾತ್ರ ಕೋಮುವಾದ ನಾಶವಾಗುತ್ತದೆ.

ಈ ಕೋಮುವಾದಿಗಳು ಬಿಜೆಪಿಯ ಚುನಾವಣಾ ಏಜಂಟರು. ಈ ರೀತಿ ಧರ್ಮ-ಧರ್ಮದ ನಡುವೆ ದ್ವೇಷ ಬಿತ್ತಿ ಮತಗಳ ಧ್ರುವೀಕರಣ ಮಾಡಿ ಬಿಜೆಪಿಗೆ ರಾಜಕೀಯ ಲಾಭ ಮಾಡಿಕೊಡುವುದು ಇವರ ದುರುದ್ದೇಶ. ಈ ಬಗ್ಗೆ ಜನತೆ ಎಚ್ಚರಿಕೆಯಿಂದಿರಬೇಕು. ಜಾತ್ಯತೀತರು ನಮ್ಮಲ್ಲಿ ಬಹುಸಂಖ್ಯೆಯಲ್ಲಿದ್ದಾರೆ. ಕೋಮುವಾದಿಗಳ ಸಂಖ್ಯೆ ಸಣ್ಣದು. ಈ ನೆಲಕ್ಕೆ ಕೋಮುವಾದಿಗಳನ್ನು ಹಿಮ್ಮೆಟ್ಟಿಸುವ ಶಕ್ತಿ ಇದೆ. ಕೋಮುವಾದದ ಹುಟ್ಟಡಗಿಸಬೇಕಾದರೆ ಜಾತ್ಯತೀತವಾದಿಗಳು ಸಂಘಟಿತರಾಗಿ ದನಿ ಎತ್ತಬೇಕು. ಒಡೆಯುವ ಪ್ರಯತ್ನ ನಡೆದಾಗ ಕಟ್ಟುವ ಕೈಗಳೆಲ್ಲ ಒಂದಾಗಬೇಕು. ಈ ಮೂಲಕ ಮನುಷ್ಯಪರವಾದ ಸಮಾಜವನ್ನು ಕಟ್ಟಲು ಕೈಜೋಡಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News