ಮುಖ್ಯ ನ್ಯಾಯಮೂರ್ತಿ ಜೋಸೆಫ್ ಭಡ್ತಿ ಮರು ಪರಿಶೀಲಿಸಿ: ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಸರಕಾರದ ಮನವಿ

Update: 2018-04-26 15:19 GMT
ಮುಖ್ಯ ನ್ಯಾಯಮೂರ್ತಿ ಕೆ.ಎಂ. ಜೋಸೆಫ್

ಹೊಸದಿಲ್ಲಿ, ಎ. 26: ಮುಖ್ಯ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಅವರನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ಭಡ್ತಿ ನೀಡುವ ಶಿಫಾರಸನ್ನು ಮರು ಪರಿಶೀಲಿಸಬೇಕು ಎಂದು ಕೇಂದ್ರ ಸರಕಾರ ಗುರುವಾರ ಸರ್ವೋಚ್ಚ ನ್ಯಾಯಾಲಯದ ಕೊಲೀಜಿಯಂ ಅನ್ನು ವಿನಂತಿಸಿದೆ ಎಂದು ಮೂಲಗಳು ತಿಳಿಸಿವೆ.

ಹಿರಿಯ ವಕೀಲೆ ಇಂದು ಮಲ್ಹೋತ್ರ ಅವರನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನಾಗಿ ನೇಮಕ ಮಾಡಲು ಸರಕಾರ ಅನುಮೋದನೆ ನೀಡಿದ ಹಾಗೂ ಉತ್ತರಾಖಂಡ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿರುವ ಜೋಸೆಫ್ ಅವರ ನೇಮಕ ತಡೆ ಹಿಡಿದಿರುವ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ. ಈ ವರ್ಷದ ಆರಂಭದಲ್ಲಿ ಇಬ್ಬರ ಹೆಸರನ್ನೂ ಶಿಫಾರಸು ಮಾಡಲಾಗಿತ್ತು. ಜೋಸೆಫ್ ಅವರ ಹೆಸರನ್ನು ಅನುಮೋದಿಸದೇ ಇರುವ ಕೇಂದ್ರ ಸರಕಾರದ ನಿರ್ಧಾರದ ಬಗ್ಗೆ ತೀವ್ರವಾಗಿರುವ ಟೀಕಿಸಿರುವ ಸರ್ವೋಚ್ಚ ನ್ಯಾಯಾಲಯ ಬಾರ್ ಅಸೋಸಿಯೇಶನ್ ಅಧ್ಯಕ್ಷ ಇದು ‘‘ಗೊಂದಲ’’ ಉಂಟು ಮಾಡುವಂತದ್ದು ಎಂದಿದೆ.

ದೇಶದ ಅತೀ ಹಿರಿಯ ಮುಖ್ಯ ನ್ಯಾಯಮೂರ್ತಿಯಾಗಿರುವ ಕೆ.ಎಂ. ಜೋಸೆಫ್ ಅವರನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಭಡ್ತಿ ನೀಡಲು ನಿರಾಕರಿಸಿರುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ‘ದ್ವೇಷ ರಾಜಕಾರಣ’ದಲ್ಲಿ ತೊಡಗಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ದೇಶ ಈಗ ಎಚ್ಚೆತ್ತುಕೊಳ್ಳದೇ ಇದ್ದರೆ, ನ್ಯಾಯಾಂಗ ಅತೀ ಕೆಟ್ಟ ದಾಳಿಗೆ ಒಳಗಾಗಲಿದೆ ಹಾಗೂ ನಿರುಂಕುಶಪ್ರಭುತ್ವ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲಿದೆ ಎಂದು ಕಾಂಗ್ರೆಸ್‌ನ ಸಂವಹನ ಉಸ್ತುವಾರಿ ರಣದೀಪ್ ಸುರ್ಜೇವಾಲ ಆರೋಪಿಸಿದ್ದಾರೆ.

ಪ್ರಧಾನಿ ಮೋದಿ ಅವರ ನ್ಯಾಯಾಂಗದ ಮೇಲಿನ ದ್ವೇಷ ರಾಜಕಾರಣ ಹಾಗೂ ಸರ್ವೋಚ್ಚ ನ್ಯಾಯಾಲಯವನ್ನು ಉಸಿರುಗಟ್ಟುವಂತೆ ಮಾಡುವ ಪಿತೂರಿ ಮತ್ತೊಮ್ಮೆ ಬಹಿರಂಗವಾಗಿದೆ ಎಂದು ಸುರ್ಜೇವಾಲ ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ. ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಡಳಿತವನ್ನು ರದ್ದುಗೊಳಿಸಿರುವುದಕ್ಕೆ ಪ್ರತೀಕಾರವಾಗಿ ಜೋಸೆಫ್ ಅವರನ್ನು ಸುಪ್ರೀಂ ಕೋರ್ಟ್‌ಗೆ ಬಡ್ತಿ ಮಾಡಲು ಈಗ ಮೋದಿ ಸರಕಾರ ನಿರಾಕರಿಸುತ್ತಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News