ಮೂರೇ ದಿನದಲ್ಲಿ 125 ಕೋಟಿ ರೂ. ಬಾಚಿದ 'ಭರತ್ ಅನೆ ನೇನು'

Update: 2018-04-27 13:11 GMT

ಕಳೆದ ವಾರವಷ್ಟೇ ತೆರೆಕಂಡ ಟಾಲಿವುಡ್‌ನ ಸೂಪರ್‌ಸ್ಟಾರ್ ಮಹೇಶ್‌ಬಾಬು ಅಭಿನಯದ ಭರತ್ ಅನೆ ನೇನು, ಬಾಕ್ಸ್ ಆಫೀಸ್‌ನಲ್ಲಿ ಸುಂಟರಗಾಳಿಯೆಬ್ಬಿಸಿದೆ. ಚಿತ್ರ ತೆರೆಕಂಡ ಮೂರೇ ದಿನದಲ್ಲಿ 125 ಕೋಟಿ ಸಂಪಾದಿಸಿದ್ದು, ಹಿಂದಿನ ಎಲ್ಲಾ ತೆಲುಗು ಚಿತ್ರಗಳ ದಾಖಲೆಯನ್ನು ಮುರಿಯುವ ಸನ್ನಾಹದಲ್ಲಿದೆ.

ಕೊರಟಾಲ ಶಿವು ನಿರ್ದೇಶನದ ಭರತ್ ಅನೆ ನೇನು, ರಿಲೀಸ್ ಆದ ಮೊದಲ ದಿನವೇ ಆಂಧ್ರದಲ್ಲಿ ಬರೋಬ್ಬರಿ 50 ಕೋಟಿ ರೂ. ಬಾಚಿಕೊಡಿದೆ. ಎರಡನೇ ದಿನವೇ ಚಿತ್ರ ಭಾರತ ಹಾಗೂ ವಿದೇಶಗಳಲ್ಲಿ ಚಿತ್ರದ ಒಟ್ಟು ಗಳಿಕೆ 125 ಕೋಟಿ ರೂ. ತಲುಪಿದೆ.

ಇತ್ತ ಅಮೆರಿಕದಲ್ಲಿಯೂ ಭರತ್ ಅನೆ ನೇನು ಚಿತ್ರ ವಿಜಯಪತಾಕೆ ಹಾರಿಸಿದೆ. ಅಲ್ಲಿ ಸುಮಾರು 305 ಸ್ಕ್ರೀನ್‌ಗಳಲ್ಲಿ ಚಿತ್ರ ತೆರೆಕಂಡಿದ್ದು, ಮೂರೇ ದಿನದಲ್ಲಿ 10.5 ಕೋಟಿ ರೂ. ಗಳಿಕೆ ಮಾಡಿದೆ. ಬಾಹುಬಲಿ-2 ಚಿತ್ರ ಬಿಟ್ಟರೆ, ಅಮೆರಿಕದಲ್ಲಿ ಅತ್ಯಧಿಕ ಗಳಿಕೆ ಕಂಡ ಚಿತ್ರವೆಂಬ ದಾಖಲೆಯನ್ನು ಭರತ್ ಅನೆ ನೇನು ನಿರ್ಮಿಸಿದೆ.

ಭರತ್ ಅನೆ ನೇನು ಚಿತ್ರದ ಗೆಲುವಿನ ನಾಗಾಲೋಟ ಮುಂದುವರಿದಲ್ಲಿ ಒಂದೇ ವಾರದಲ್ಲಿ ಅದರ ಗಳಿಕೆ 200 ಕೋಟಿ ರೂ. ದಾಟಲಿದೆಯೆಂದು ಬಾಕ್ಸ್‌ಆಫೀಸ್ ಪಂಡಿತರು ಭವಿಷ್ಯ ನುಡಿದಿದ್ದಾರೆ.

ತನ್ನ ತಂದೆಯ ಅಕಾಲಿಕ ನಿಧನದ ಬಳಿಕ ರಾಜಕೀಯಕ್ಕೆ ಧುಮುಕಿ, ಸಿಎಂ ಆಗುವ ದಿಟ್ಟ ಯುವಕನ ಪಾತ್ರದಲ್ಲಿ ಮಹೇಶ್‌ಬಾಬು ನಟಿಸಿದ್ದಾರೆ. ದುರ್ಬಲ ವರ್ಗಗಳ ಏಳಿಗೆಗಾಗಿ ಶ್ರಮಿಸುವ, ಭ್ರಷ್ಟಾಚಾರದ ವಿರುದ್ಧ ಹೋರಾ ಡುವ ಸಿಎಂ ಪಾತ್ರದಲ್ಲಿ ಮಹೇಶ್ ಅಭಿನಯವು ಚಿತ್ರದ ಮುಖ್ಯ ಆಕರ್ಷಣೆಯಾಗಿದೆ. ನಾಯಕಿಯಾಗಿ ಕೀರಾ ಅಡ್ವಾಣಿ ಹಾಗೂ ಚತುರ ರಾಜಕಾರಣಿಯಾಗಿ ಪ್ರಕಾಶ್‌ರಾಜ್ ಮಿಂಚಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News