ಅಕ್ಟೋಬರ್ ‘ಆರತಿ’ಯ ನಕಲೇ?

Update: 2018-04-27 13:13 GMT

ಶೂಜಿತ್ ಸರ್ಕಾರ್ ನಿರ್ದೇಶನದ ‘ಅಕ್ಟೋಬರ್’ಗೆ ವಿಮರ್ಶಕರಿಂದ ಭರ್ಜರಿ ಪ್ರಶಂಸೆ ವ್ಯಕ್ತವಾಗಿರುವ ಜೊತೆಗೆ ಚಿತ್ರ ಬಾಕ್ಸ್ ಆಫೀಸ್‌ನಲ್ಲೂ ಪರವಾಗಿ ಇಲ್ಲ ಎನಿಸಿಕೊಂಡಿದೆ. ಈ ನಡುವೆ ಅಕ್ಟೋಬರ್, ಮರಾಠಿ ಚಿತ್ರವೊಂದರ ನಕಲು ಎಂಬ ಅಪಸ್ವರ ಕೂಡಾ ಕೇಳಿಬಂದಿದೆ. ಮರಾಠಿ ಚಿತ್ರರಂಗದ ಜನಪ್ರಿಯ ನಿರ್ದೇಶಕಿ ಸಾರಿಕಾ ಮೆಮೆ ಅವರು 2017ರಲ್ಲಿ ತೆರೆಕಂಡ ತನ್ನ ನಿರ್ದೇಶನದ ಮರಾಠಿ ಚಿತ್ರ ಆರತಿಯ ಕಥೆಯನ್ನೇ ಅಕ್ಟೋಬರ್ ಬಹುತೇಕ ಹೋಲುತ್ತಿದೆಯೆಂದು ಆರೋಪಿಸಿದ್ದಾರೆ.

ಇತ್ತೀಚೆಗೆ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಹೇಳಿಕೊಂಡ ಸಾರಿಕಾ ಮೆಮೆ ಅವರು, ‘‘ ಅಕ್ಟೋಬರ್‌ನ ಟ್ರೇಲರ್ ಬಿಡುಗಡೆಗೊಂಡಾಗಲೇ ನನಗೆ ಅದು ‘ಆರತಿ’ ಚಿತ್ರದ ನಕಲಾಗಿರಬಹುದೆಂಬ ಸಣ್ಣ ಸಂಶಯವುಂಟಾಗಿತ್ತು. ಆದರೆ, ಅಷ್ಟೊಂದು ದೊಡ್ಡ ಹೆಸರಿನ ನಿರ್ದೇಶಕರು, ಹಾಗೆ ಮಾಡಲಾರರೆಂದು ಭಾವಿಸಿದ್ದೆ. ಆದರೆ ಅಕ್ಟೋಬರ್ ಬಿಡುಗಡೆಯಾದ ಬಳಿಕ ಆ ಚಿತ್ರವನ್ನು ನೋಡಿದಾಗ ನನ್ನ ಊಹೆ ನಿಜವಾಗಿತ್ತು. ಅದು ಶೇ.90ರಷ್ಟು ಆರತಿ ಚಿತ್ರದ ಯಥಾವತ್ ನಕಲಾಗಿತ್ತು. ಪಿಕು, ವಿಕಿ ಡೋನರ್‌ನಂತಹ ಅದ್ಭುತ ಚಿತ್ರಗಳನ್ನು ನಿರ್ದೇಶಿಸಿರುವ ಶೂಜಿತ್ ಸರ್ಕಾರ್, ಹೀಗೆ ಮಾಡಿದ್ದಾರೆಂದು ನನಗೆ ನಂಬಲಿಕ್ಕಾಗುತ್ತಿಲ್ಲವೆಂದು ಸಾರಿಕಾ ಹೇಳಿಕೊಂಡಿದ್ದಾರೆ.

ಈಗಾಗಲೇ ಸಾರಿಕಾ ಅವರು ತನ್ನ ಚಿತ್ರದ ಕಥೆಯನ್ನು ಅಕ್ಟೋಬರ್‌ನ ನಿರ್ದೇಶಕರು ಕದ್ದಿದ್ದಾರೆಂದು ಆರೋಪಿಸಿ, ಅಖಿಲ ಭಾರತೀಯ ಮರಾಠಿ ಚಿತ್ರೋದ್ಯಮ ಮಂಡಳಿ ಗೆ ದೂರು ನೀಡಿದ್ದಾರೆ. ಜೊತೆಗೆ ಭಾರತೀಯ ಚಲನಚಿತ್ರ ನಿರ್ಮಾಪಕರ ಸಂಘ (ಐಎಂಪಿಪಿಎ) ಹಾಗೂ ಚಿತ್ರಕತೆ ಬರಹಗಾರರ ಸಂಘಕ್ಕೂ ಅವರು ದೂರು ನೀಡಿದ್ದಾರೆ. ಇಷ್ಟಕ್ಕೂ ಅಕ್ಟೋಬರ್ ಚಿತ್ರದ ನಿರ್ಮಾಪಕರು ಸಾರಿಕಾ ಅವರ ಆರೋಪ ದ ಬಗ್ಗೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ. ಅಕ್ಟೋಬರ್ ಚಿತ್ರದ ವಿರುದ್ಧ ಕೇಳಿಬಂದಿರುವ ಕೃತಿ ಚೌರ್ಯದ ಆರೋಪಗಳನ್ನು ಸೂಕ್ತವಾಗಿ ಪರಿಶೀಲಿಸುವುದಾಗಿ ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News