ಥಗ್ಸ್ ಆಫ್ ಹಿಂದೋಸ್ಥಾನ್

Update: 2018-04-27 13:17 GMT

ದಂಗಲ್ ಚಿತ್ರದಲ್ಲಿ ಪ್ರೇಕ್ಷಕರಿಗೆ ಅದ್ಭುತವಾದ ಅಭಿನಯ ಜುಗಲ್‌ಬಂದಿ ನೀಡಿದ್ದ ಆಮಿರ್‌ಖಾನ್ ಹಾಗೂ ಫಾತಿಮಾ ಶೇಖ್, ಥಗ್ಸ್ ಆಫ್ ಹಿಂದೋಸ್ಥಾನ್‌ನಲ್ಲಿ ಮತ್ತೊಮ್ಮೆ ಬೆಳ್ಳಿತೆರೆಯಲ್ಲಿ ಜೊತೆಯಾಗಿದ್ದಾರೆ. ಅಮಿತಾಭ್ ಬಚ್ಚನ್ ಹಾಗೂ ಕತ್ರಿನಾ ಕೈಫ್ ಕೂಡಾ ಮುಖ್ಯ ಪಾತ್ರಗಳಲ್ಲಿರುವ ಈ ಚಿತ್ರ ಈಗಾಗಲೇ ಪ್ರೇಕ್ಷಕರಲ್ಲಿ ಅಪಾರ ಕುತೂಹಲವನ್ನು ಮೂಡಿಸಿದೆ. ಆಮಿರ್ ಅಭಿನಯದ ದಂಗಲ್, ಸೀಕ್ರೆಟ್ ಸೂಪರ್‌ಸ್ಟಾರ್ ಹಾಗೂ ಪಿಕೆ ಚಿತ್ರಗಳು ನೆರೆಯ ರಾಷ್ಟ್ರವಾದ ಚೀನಾದಲ್ಲೂ ಪ್ರಚಂಡ ಜಯಭೇರಿ ಬಾರಿಸಿತ್ತು. ಹೀಗಾಗಿ ಆಮಿರ್ ತನ್ನ ಮುಂದಿನ ಚಿತ್ರ ಥಗ್ಸ್ ಆಫ್ ಹಿಂದೋಸ್ಥಾನ್ ಅನ್ನು ಭಾರತ ಹಾಗೂ ಚೀನಾದಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡುವ ಬಗ್ಗೆ ಯೋಚಿಸುತ್ತಿದ್ದಾರೆ. ಇದಕ್ಕಾಗಿಯೇ ಮಿಸ್ಟರ್ ಪರ್‌ಫೆಕ್ಷನಿಸ್ಟ್ ಆಮಿರ್, ಚಿತ್ರದ ಪ್ರಚಾರಕ್ಕಾಗಿ ಸುಮಾರು ಒಂದು ವಾರ ಕಾಲ ಚೀನಾಗೆ ತೆರಳಲಿದ್ದಾರೆ. ಈ ಸಂದರ್ಭದಲ್ಲಿ ಅವರು ಚಿತ್ರದ ಒಂದು ಹಾಡನ್ನು ಕೂಡಾ ಬಿಡುಗಡೆ ಮಾಡಲಿದ್ದಾರಂತೆ. ಇನ್ನೊಂದೆಡೆ, ಚೀನಾದ ಮಾರುಕಟ್ಟೆಗಳಲ್ಲಿ ವೀಡಿಯೊ ಪೈರಸಿ ಹಾವಳಿ ವಿಪರೀತವಾಗಿರುವುದರಿಂದ ಭಾರತ ಹಾಗೂ ಚೀನಾಗಳೆರಡರಲ್ಲಿಯೂ ಏಕಕಾಲದಲ್ಲಿ ಥಗ್ಸ್ ಆಫ್ ಹಿಂದೋಸ್ಥಾನ್ ಚಿತ್ರವನ್ನು ಬಿಡುಗಡೆಗೊಳಿಸುವ ಬಗ್ಗೆ ಯೋಚಿಸುತ್ತಿದ್ದಾರೆ.

ಭರ್ಜರಿ ತಾರಾಗಣ, ಭಾರೀ ವೆಚ್ಚದೊಂದಿಗೆ ನಿರ್ಮಾಣವಾಗುತ್ತಿರುವ ಥಗ್ಸ್ ಆಫ್ ಹಿಂದೋಸ್ಥಾನ್ ಹಿಂದಿನ ಎಲ್ಲಾ ಭಾರತೀಯ ಚಿತ್ರಗಳ ದಾಖಲೆಯನ್ನು ಮುರಿಯಲಿದೆ ಹಾಗೂ 2 ಸಾವಿರ ಕೋಟಿ ರೂ. ಸಂಪಾದಿಸಿದ ಮೊದಲ ಭಾರತೀಯ ಚಿತ್ರವೆನಿಸಿಕೊಳ್ಳಲಿದೆಯೆಂದು ಬಾಲಿವುಡ್ ಬಾಕ್ಸ್‌ಆಫೀಸ್ ಪಂಡಿತರು ಈಗಾಗಲೇ ಲೆಕ್ಕಹಾಕತೊಡಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News