ಇಪಿಎಫ್ ಅಥವಾ ಎನ್‌ಪಿಎಸ್,ನಿವೃತ್ತ ಜೀವನಕ್ಕಾಗಿ ಹೆಚ್ಚು ಹಣವನ್ನುಳಿಸಲು ಯಾವುದು ಸಹಾಯಕ?

Update: 2018-04-27 15:37 GMT

ರಾಷ್ಟ್ರೀಯ ಪಿಂಚಣಿ ಯೋಜನೆ(ಎನ್‌ಪಿಎಸ್) ಮತ್ತು ನೌಕರರ ಭವಿಷ್ಯನಿಧಿ(ಇಪಿಎಫ್) ನಿವೃತ್ತ ಜೀವನಕ್ಕಾಗಿ ಹಣವನ್ನು ಉಳಿಸಲು ಸುಲಭ ಮಾರ್ಗಗಳಾಗಿವೆ. ಇವೆರಡೂ ನಿಯಮಿತವಾಗಿ ಹಣವನ್ನು ಉಳಿಸುವಂತೆ ಮಾಡುವುದರಿಂದ ವ್ಯಕ್ತಿಯು ನಿವೃತ್ತನಾದಾಗ ಸಾಕಷ್ಟು ದೊಡ್ಡ ಮೊತ್ತ ಕೈಸೇರುತ್ತದೆ. ಇವೆರಡೂ ಸರಕಾರಿ ಪ್ರಾಯೋಜಿತ ಯೋಜನೆಗಳಾಗಿದ್ದು,ತೆರಿಗೆ ಲಾಭಗಳನ್ನು ನೀಡುತ್ತವೆಯಾದರೂ ಬಳಸಿಕೊಳ್ಳಬಹುದಾದ ತೆರಿಗೆ ವಿನಾಯಿತಿಗಳು,ಪ್ರತಿಫಲ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಇವೆರಡರ ನಡುವೆ ಪ್ರಾಥಮಿಕ ವ್ಯತ್ಯಾಸಗಳಿವೆ.

ಇಪಿಎಫ್‌ಒ ಸುಮಾರು ಆರು ಕೋಟಿ ಸಕ್ರಿಯ ಖಾತೆಗಳನ್ನು ಹೊಂದಿದ್ದು,ಸುಮಾರು 10 ಲಕ್ಷ ಕೋ.ರೂ.ಗಳ ನಿಧಿಯನ್ನು ನಿರ್ವಹಿಸುತ್ತಿದೆ. ಪಿಎಫ್ ಹಣದ ಅಂತಿಮ ಇತ್ಯರ್ಥಕ್ಕಾಗಿ ಚಂದಾದಾರ ಫಾ.ನಂ.19ನ್ನು ಮತ್ತು ಭಾಗಶಃ ಹಣ ಹಿಂದೆಗೆತಕ್ಕಾಗಿ ಫಾ.ನಂ.31ನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಇಪಿಎಸ್ ಮತ್ತು ಎನ್‌ಪಿಎಸ್ ನಡುವೆ ಯಾವುದು ಉತ್ತಮ?

►ತೆರಿಗೆ ಲಾಭ

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿ ಭವಿಷ್ಯನಿಧಿಗೆ ಉದ್ಯೋಗಿಗಳ ವಂತಿಗೆಯನ್ನು 1.50 ಲಕ್ಷ ರೂ.ವರೆಗೆ ಆದಾಯದಲ್ಲಿ ಕಡಿತಗೊಳಿಸಲು ಅವಕಾಶವಿದೆ. ಇದು ಚಂದಾದಾರನ ಮೂಲವೇತನ ದಲ್ಲಿ ಕಡಿತಗೊಳಿಸಬಹುದಾದ ಗರಿಷ್ಠ ಮೊತ್ತವಾಗಿದೆ. ಎನ್‌ಪಿಎಸ್‌ಗೆ ಸಂಬಂಧಿಸಿದಂತೆ ಚಂದಾದಾರರು ಆದಾಯ ತೆರಿಗೆ ಕಾಯ್ದೆಯಂತೆ ಒಟ್ಟು ಗರಿಷ್ಠ ಎರಡು ಲ.ರೂ.ಗಳ ಕಡಿತವನ್ನು ಪಡೆಯಬಹುದಾಗಿದೆ. ವಂತಿಗೆ ಪಾವತಿ,ಬಡ್ಡಿ ಜಮಾವಣೆ ಮತ್ತು ನಿವೃತ್ತಿಯ ಬಳಿಕ ಹಣವನ್ನು ವಾಪಸ್ ಪಡೆಯುವಾಗ ಹೀಗೆ ಇಪಿಎಫ್‌ನ ಎಲ್ಲ ಮೂರೂ ಹಂತಗಳಲ್ಲಿ ಚಂದಾದಾರರು ತೆರಿಗೆಯನ್ನು ಉಳಿಸಲು ಅವಕಾಶವಿದೆ. ಆದರೆ ಎನ್‌ಪಿಎಸ್ ವಂತಿಗೆ ಪಾವತಿ ಮತ್ತು ಬಡ್ಡಿ ಜಮಾವಣೆ ಈ ಎರಡು ಹಂತಗಳಲ್ಲಿ ಮಾತ್ರ ತೆರಿಗೆ ಉಳಿತಾಯದ ಲಾಭವನ್ನು ನೀಡುತ್ತದೆ, ಆದರೆ ಅಂತಿಮವಾಗಿ ವಾಪಸ್ ಪಡೆಯುವ ಹಣಕ್ಕೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಎನ್‌ಪಿಎಸ್‌ನಲ್ಲಿ ಒಟ್ಟು ಹಿಂದೆಗೆತದ ಶೇ.40 ರಷ್ಟು ಭಾಗ ಮಾತ್ರ ತೆರಿಗೆ ವಿನಾಯಿತಿಯನ್ನು ಹೊಂದಿದೆ.

ಇಪಿಎಫ್‌ನಲ್ಲಿ ತನ್ನ ಫಂಡ್ ಮ್ಯಾನೇಜರ್ ಆಯ್ಕೆ ಮಾಡಿಕೊಳ್ಳಲು ಚಂದಾದಾರನಿಗೆ ಅವಕಾಶವಿಲ್ಲ,ಆದರೆ ಎನ್‌ಪಿಎಸ್ ಚಂಂದಾದಾರನಿಗೆ ಈ ಸೌಲಭ್ಯವಿದೆ. ಸದ್ಯಕ್ಕೆ ವಿವಿಧ ದರಗಳಲ್ಲಿ ಪ್ರತಿಫಲಗಳನ್ನು ನೀಡುವ ಎಚ್‌ಡಿಎಫ್‌ಸಿ ಪೆನ್ಶನ್ ಫಂಡ್,ಐಸಿಐಸಿಐ ಪ್ರುಡೆನ್ಶಿಯಲ್ ಫಂಡ್,ಎಲ್‌ಐಸಿ ಪೆನ್ಶನ್ ಫಂಡ್‌ನಂತಹ ಏಳು ಫಂಡ್ ಮ್ಯಾನೇಜಿಂಗ್ ಸಂಸ್ಥೆಗಳಿವೆ. ಎನ್‌ಪಿಎಸ್‌ನಲ್ಲಿ ಚಂದಾದಾರರು ಕೆಲವು ಆಡಳಿತಾತ್ಮಕ ನಿರ್ಬಂಧಗಳಿಗೊಳಪಟ್ಟು ತಮ್ಮ ಫಂಡ್ ಮ್ಯಾನೇಜರ್‌ನ್ನು ಬದಲಿಸಬಹುದಾಗಿದೆ. ಎನ್‌ಪಿಎಸ್‌ನಲ್ಲಿ ಸಿಗುವ ಬಡ್ಡಿದರವು ಸಂಪೂರ್ಣವಾಗಿ ಮಾರುಕಟ್ಟೆ ಸಂಬಂಧಿತವಾಗಿರುತ್ತದೆ. ಇಪಿಎಫ್‌ನಲ್ಲಿ ನಿಗದಿತ ಬಡ್ಡಿದರ ಸಿಗುತ್ತದೆ.

► ಖಾತೆಗಳು

ಇಪಿಎಫ್ ಚಂದಾದಾರರು ಯುಎಎನ್ ಜೊತೆ ಜೋಡಣೆಗೊಂಡಿ ರುವ ಒಂದೇ ಖಾತೆಯನ್ನು ನಿರ್ವಹಿಸಬಹುದು. ಎನ್‌ಪಿಎಸ್‌ನಲ್ಲಿ ಎರಡು ಖಾತೆಗಳನ್ನು ಹೊಂದಿರಬಹುದಾಗಿದೆ. ಮೊದಲ ಖಾತೆ ಕಡ್ಡಾಯವಾಗಿದ್ದು,ಎರಡನೇ ಖಾತೆಯನ್ನು ಸ್ವಇಚ್ಛೆಯಿಂದ ಆರಂಭಿಸಬಹುದಾಗಿದೆ. ಎನ್‌ಪಿಎಸ್‌ನ ಎರಡನೇ ಖಾತೆಯಲ್ಲಿ ಹಣ ಹಿಂದೆಗೆತಕ್ಕೆ ಅವಕಾಶವಿದೆ ಎನ್ನುವುದನ್ನು ಗಮನಿಸಬೇಕು.

► ಕಡ್ಡಾಯ/ಐಚ್ಛಿಕ

20 ಅಥವಾ ಅದಕ್ಕೂ ಹೆಚ್ಚಿನ ಉದ್ಯೋಗಿಗಳಿರುವ ಪ್ರತಿಯೊಂದು ಕಂಪನಿಗೂ ಇಪಿಎಫ್ ಕಡ್ಡಾಯವಾಗಿದೆ. ಎನ್‌ಪಿಎಸ್ ಸರಕಾರಿ ನೌಕರರಿಗೆ ಮಾತ್ರ ಕಡ್ಡಾಯವಾಗಿದೆ. ಆದರೆ ಖಾಸಗಿ ಕ್ಷೇತ್ರಗಳ ಉದ್ಯೋಗಿಗಳೂ ಎನ್‌ಪಿಎಸ್ ಖಾತೆಯನ್ನು ತೆರೆದು ಅದರ ಎಲ್ಲ ಲಾಭಗಳನ್ನು ಪಡೆದುಕೊಳ್ಳಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News