"ಪರಮಾಣುಮುಕ್ತ ಕೊರಿಯ ಪರ್ಯಾಯ ದ್ವೀಪ"

Update: 2018-04-27 16:58 GMT

ಸಿಯೋಲ್, ಎ. 27: ಬದ್ಧ ವಿರೋಧಿಗಳಾಗಿದ್ದ ದಕ್ಷಿಣ ಮತ್ತು ಉತ್ತರ ಕೊರಿಯಗಳ ನಾಯಕರು ಶುಕ್ರವಾರ ಐತಿಹಾಸಿಕ ಶೃಂಗಸಮ್ಮೇಳನ ನಡೆಸಿದ್ದಾರೆ. ಕೊರಿಯ ಪರ್ಯಾಯ ದ್ವೀಪವನ್ನು ಪರಮಾಣುಮುಕ್ತಗೊಳಿಸುವುದಾಗಿ ದಕ್ಷಿಣ ಕೊರಿಯದ ಅಧ್ಯಕ್ಷ ಮೂನ್ ಜೇ-ಇನ್ ಮತ್ತು ಉತ್ತರ ಕೊರಿಯದ ನಾಯಕ ಕಿಮ್ ಜಾಂಗ್ ಉನ್ ಈ ಸಂದರ್ಭದಲ್ಲಿ ಘೋಷಿಸಿದ್ದಾರೆ.

‘‘ಸಂಪೂರ್ಣ ಪರಮಾಣು ನಿಶ್ಶಸ್ತ್ರೀಕರಣದ ಮೂಲಕ ಪರಮಾಣು ಮುಕ್ತ ಕೊರಿಯ ಪರ್ಯಾಯ ದ್ವೀಪವನ್ನು ಹೊಂದುವ ಸಾಮಾನ್ಯ ಗುರಿಗೆ ದಕ್ಷಿಣ ಮತ್ತು ಉತ್ತರ ಕೊರಿಯಗಳು ಬದ್ಧತೆ ವ್ಯಕ್ತಪಡಿಸಿವೆ’’ ಎಂದು ಜಂಟಿ ಹೇಳಿಕೆಯೊಂದರಲ್ಲಿ ಅವರು ಹೇಳಿದ್ದಾರೆ.

ಕೊರಿಯ ಯುದ್ಧಕ್ಕೆ ಈ ವರ್ಷ ಶಾಶ್ವತ ಕೊನೆಯನ್ನು ಸಾರಲು ಕೂಡ ಉಭಯ ನಾಯಕರು ನಿರ್ಧರಿಸಿದ್ದಾರೆ. ಉತ್ತರ ಮತ್ತು ದಕ್ಷಿಣ ಕೊರಿಯಗಳ ನಡುವಿನ ಯುದ್ಧ 70 ವರ್ಷಗಳ ಹಿಂದೆ ಶಾಂತಿ ಒಪ್ಪಂದದ ಮೂಲಕ ನಿಂತಿಲ್ಲ, ಪರಸ್ಪರರ ಒಪ್ಪಿಗೆಯೊಂದಿಗೆ ತಾತ್ಕಾಲಿಕವಾಗಿ ನಿಂತಿತ್ತು.

ಯುದ್ಧವನ್ನು ಕೊನೆಗೊಳಿಸುವ ಹಾಗೂ ಶಾಶ್ವತ ಹಾಗೂ ಸದೃಢ ಶಾಂತಿ ಒಪ್ಪಂದವೊಂದನ್ನು ಏರ್ಪಡಿಸುವ ನಿಟ್ಟಿನಲ್ಲಿ ಅಮೆರಿಕದೊಂದಿಗೆ, ಸಾಧ್ಯವಾದರೆ ಚೀನಾದೊಂದಿಗೂ ಮಾತುಕತೆ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.

ಅಮೆರಿಕ ಮತ್ತು ಚೀನಾಗಳು 70 ವರ್ಷಗಳ ಹಿಂದೆ ಯುದ್ಧವಿರಾಮ ಏರ್ಪಡಲು ಶ್ರಮಿಸಿದ್ದವು.

ಗಡಿಯಲ್ಲಿ ದಕ್ಷಿಣ ಕೊರಿಯದ ಭಾಗದಲ್ಲಿರುವ ಪನ್‌ಮುಂಜೊಮ್ ಶಾಂತಿ ಗ್ರಾಮದಲ್ಲಿ ಉಭಯ ನಾಯಕರು ಮಾತುಕತೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News