ಭಾರತ ಸಲ್ಲಿಸಿದ ಹೆಚ್ಚಿನ ಪುರಾವೆಗಳನ್ನು ಸ್ವೀಕರಿಸಿದ ಬ್ರಿಟನ್‌ ನ್ಯಾಯಾಲಯ: ಜುಲೈ 11ಕ್ಕೆ ಮಲ್ಯ ವಿಚಾರಣೆ

Update: 2018-04-27 17:06 GMT

ಲಂಡನ್, ಎ. 27: ಭಾರತದ ಬ್ಯಾಂಕ್‌ಗಳಿಗೆ ಸುಮಾರು 10,000 ಕೋಟಿ ರೂಪಾಯಿ ವಂಚಿಸಿ ಬ್ರಿಟನ್‌ಗೆ ಪರಾರಿಯಾಗಿರುವ ವಿಜಯ ಮಲ್ಯನ ಗಡಿಪಾರು ಕೋರಿ ಭಾರತ ಸಲ್ಲಿಸಿರುವ ಮೊಕದ್ದಮೆಗೆ ಸಂಬಂಧಿಸಿ ಭಾರತೀಯ ಅಧಿಕಾರಿಗಳು ಶುಕ್ರವಾರ ಸಲ್ಲಿಸಿದ ಹೆಚ್ಚಿನ ಪುರಾವೆಗಳನ್ನು ಇಲ್ಲಿನ ನ್ಯಾಯಾಲಯವು ಸ್ವೀಕರಿಸಿದೆ.

ಅದೇ ವೇಳೆ, ಮಲ್ಯನ ಜಾಮೀನು ಅವಧಿಯನ್ನು ಮುಂದಿನ ವಿಚಾರಣೆ ದಿನಾಂಕವಾಗಿರುವ ಜುಲೈ 11ರವರೆಗೆ ವಿಸ್ತರಿಸಿದೆ.

ಭಾರತೀಯ ಅಧಿಕಾರಿಗಳು ಸಲ್ಲಿಸಿರುವ ಹೆಚ್ಚಿನ ಪುರಾವೆಗಳನ್ನು ಅಂಗೀಕರಿಸುವುದಾಗಿ ನ್ಯಾಯಾಧೀಶೆ ಎಮ್ಮಾ ಆ್ಯರ್ಬತ್‌ನಾಟ್ ಹೇಳಿರುವುದು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ)ಗೆ ಲಭಿಸಿದ ಯಶಸ್ಸು ಎಂಬುದಾಗಿ ಭಾವಿಸಲಾಗಿದೆ.

ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಪುರಾವೆಗಳು ಮಲ್ಯನ ಅಪ್ರಾಮಾಣಿಕತೆಯನ್ನು ಸಾಬೀತುಪಡಿಸುತ್ತವೆ ಹಾಗಾಗಿ, ಭಾರತೀಯ ನ್ಯಾಯಾಲಯಗಳಲ್ಲಿ ವಿಚಾರಣೆ ಎದುರಿಸಲು ಆತನನ್ನು ಬ್ರಿಟನ್‌ನಿಂದ ಗಡಿಪಾರು ಮಾಡುವುದಕ್ಕೆ ಯಾವುದೇ ಅಡ್ಡಿಯಿಲ್ಲ ಎಂಬುದಾಗಿ ಭಾರತ ಸರಕಾರದ ಪರವಾಗಿ ವಾದಿಸುತ್ತಿರುವ ಸಿಪಿಎಸ್ ಕಾನೂನು ಸಂಸ್ಥೆ ವಾದಿಸಿದೆ.

 ಮಲ್ಯನ ಪರವಾಗಿ ವಾದಿಸಿರುವ ವಕೀಲರು, ಆತನಿಗೆ ವಂಚಿಸುವ ಉದ್ದೇಶವಿರಲಿಲ್ಲ ಹಾಗೂ ಭಾರತದಲ್ಲಿ ಅವನಿಗೆ ನ್ಯಾಯೋಚಿತ ವಿಚಾರಣೆ ಸಿಗುವ ಸಾಧ್ಯತೆ ಇಲ್ಲ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News