ಮೋದಿ, ಜಿನ್‌ಪಿಂಗ್ ಶೃಂಗಸಮ್ಮೇಳನ ಆರಂಭ

Update: 2018-04-27 17:10 GMT

ವುಹಾನ್ (ಚೀನಾ), ಎ. 27: ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಚೀನಾದ ವುಹಾನ್ ನಗರದಲ್ಲಿ ಶುಕ್ರವಾರ ಶೃಂಗಸಮ್ಮೇಳನ ನಡೆಸಿದರು.

ಮಧ್ಯ ಚೀನಾದ ಅತಿ ದೊಡ್ಡ ನಗರದ ಮ್ಯೂಸಿಯಂನಲ್ಲಿ ಮೊದಲು ಉಭಯ ನಾಯಕರು ಇಬ್ಬರೇ ಮಾತುಕತೆ ನಡೆಸಿದರು ಹಾಗೂ ಬಳಿಕ ನಿಯೋಗ ಮಟ್ಟದ ಮಾತಕತೆಗಳನ್ನು ನಡೆಸಿದರು.

ಬಹುಶಃ ಕ್ಸಿ ಬೀಜಿಂಗ್‌ನ ಹೊರಗೆ ಇನ್ನೊಂದು ದೇಶದ ನಾಯಕನನ್ನು ಎರಡು ಸಲ ಭೇಟಿಯಾಗಿರುವುದು ಇದೇ ಮೊದಲ ಸಲ ಆಗಿರಬಹುದು ಎಂದು ಮೋದಿ ಈ ಸಂದರ್ಭದಲ್ಲಿ ಹೇಳಿದರು. ಇದಕ್ಕೂ ಮೊದಲು ಮೋದಿ ಮತ್ತು ಜಿನ್‌ಪಿಂಗ್ 2015ರ ಮೇ ತಿಂಗಳಲ್ಲಿ ಕ್ಸಿಯನ್ ನಗರದಲ್ಲಿ ಭೇಟಿಯಾಗಿದ್ದರು.

ಎರಡು ದಿನಗಳ ಅನೌಪಚಾರಿಕ ಶೃಂಗಸಮ್ಮೇಳನಕ್ಕಾಗಿ ಮೋದಿ ಗುರುವಾರ ತಡ ರಾತ್ರಿ ವುಹಾನ್ ತಲುಪಿದರು.

ಈ ಸಮ್ಮೇಳನವು ಜಿನ್‌ಪಿಂಗ್ ಭಾರತಕ್ಕೆ ನೀಡಿರುವ ಮಹತ್ವವನ್ನು ಸಾರುತ್ತದೆ ಎಂದು ಮೋದಿ ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ಜಿನ್‌ಪಿಂಗ್, ಭಾರತ ಮತ್ತು ಚೀನಾಗಳು, ‘ಬಹು ಆಯಾಮಗಳ ಹಾಗೂ ಜಾಗತೀಕೃತ ಜಗತ್ತಿನ’ ಮಹತ್ವದ ಆಧಾರಸ್ತಂಭಗಳು ಎಂದರು.

‘‘ಭಾರತ-ಚೀನಾ ಸಂಬಂಧಲ್ಲಿನ ಬೆಳವಣಿಗೆಯು ಉತ್ತಮ ಗತಿಯಲ್ಲಿ ಸಾಗುತ್ತಿದೆ. ನಮ್ಮ ದೇಶಗಳು ನಿಕಟ ಭಾಗೀದಾರಿಕೆಯನ್ನು ಹೊಂದಿವೆ. ನಮ್ಮ ವಿನಿಮಯಗಳು ಮತ್ತು ಸಹಕಾರಗಳು ಧನಾತ್ಮಕ ಪ್ರಗತಿಯನ್ನು ಸಾಧಿಸಿವೆ’’ ಎಂದು ಜಿನ್‌ಪಿಂಗ್ ಅಭಿಪ್ರಾಯಪಟ್ಟರು.

ಭಾರತದಲ್ಲಿ ಶೃಂಗಸಮ್ಮೇಳನಕ್ಕೆ ಜಿನ್‌ಪಿಂಗ್‌ಗೆ ಆಹ್ವಾನ

ಭಾರತದಲ್ಲೂ ಔಪಚಾರಿಕ ಶೃಂಗ ಸಮ್ಮೇಳನವೊಂದನ್ನು ನಡೆಸುವುದಕ್ಕಾಗಿ ಜಿನ್‌ಪಿಂಗ್‌ರನ್ನು ಮೋದಿ ಆಹ್ವಾನಿಸಿದರು.

ಜಗತ್ತಿನ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗಾಗಿ ಭಾರತ ಮತ್ತು ಚೀನಾಗಳು ಪರಸ್ಪರರೊಂದಿಗೆ ಸಹಕರಿಸುವುದು ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News