ಕೇಂದ್ರ ಸರಕಾರ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಹಾನಿ ಎಸಗಿದೆ : ಮಾಜಿ ಮುಖ್ಯ ನ್ಯಾಯಾಧೀಶ ಲೋಧಾ
ಹೊಸದಿಲ್ಲಿ, ಎ.27: ಸರಕಾರ ಹಾಗೂ ಸುಪ್ರೀಂಕೋರ್ಟ್ ನಡುವೆ ಈಗ ಉಂಟಾಗಿರುವ ಬಿಕ್ಕಟ್ಟಿನ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಹಾಗೂ ನಾಲ್ವರು ಮಾಜಿ ಮುಖ್ಯನ್ಯಾಯಾಧೀಶರು , ಸರಕಾರವು ಸುಪ್ರೀಂಕೋರ್ಟ್ ಕೊಲಿಜಿಯಂನ ಶಿಫಾರಸ್ಸುಗಳಿಗೆ ಅಡ್ಡಿಮಾಡಲು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಆಸ್ಪದ ನೀಡಿರುವುದನ್ನು ಪ್ರಶ್ನಿಸಿದ್ದಾರೆ.
ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಉತ್ತರಾಖಂಡದ ಮುಖ್ಯ ನ್ಯಾಯಮೂರ್ತಿ ಕೆ.ಎಂ.ಜೋಸೆಫ್‌ರ ನಾಮನಿರ್ದೇಶನವನ್ನು ಸರಕಾರ ತಿರಸ್ಕರಿಸಿರುವುದು ಹಾಗೂ ವಕೀಲೆ ಇಂದು ಮಲ್ಹೋತ್ರಾರನ್ನು ಭಡ್ತಿಗೊಳಿಸುವ ಶಿಫಾರಸ್ಸನ್ನು ಮಾನ್ಯ ಮಾಡಿರುವುದು, ನ್ಯಾಯಾಂಗದ ಸ್ವಾತಂತ್ರ್ಯದ ಹೃದಯಭಾಗಕ್ಕೇ ಏಟು ನೀಡಿದಂತಾಗಿದೆ ಎಂದು ಭಾರತದ ಮಾಜಿ ಮುಖ್ಯ ನ್ಯಾಯಾಧೀಶ ಆರ್.ಎಂ.ಲೋಧಾ ಹೇಳಿದ್ದಾರೆ.
ಶಿಫಾರಸ್ಸುಗಳನ್ನು ಸರಕಾರ ಪ್ರತ್ಯೇಕಗೊಳಿಸುವ ಮೂಲಕ ಸರಕಾರ ಏನನ್ನು ಮಾಡಲು ಹೊರಟಿದೆ. ಜ್ಯೇಷ್ಠತೆಯ ಆಧಾರದಲ್ಲಿ ಕೊಲಿಜಿಯಂ ನೀಡಿರುವ ಶಿಫಾರಸ್ಸನ್ನು ಸರಕಾರ ಮೂಲೆಗೆಸೆದಿದೆ. ಶಿಫಾರಸು ಮಾಡಿದ ಫೈಲನ್ನು ಮೇಜಿನ ಮೇಲಿಟ್ಟುಕೊಂಡು ವಾರಗಟ್ಟಲೆ ಕಾಲಹರಣ ಮಾಡಿ, ಬಳಿಕ ಒಬ್ಬರನ್ನು ಮಾತ್ರ ಆಯ್ಕೆ ಮಾಡಿ ಮತ್ತೊಬ್ಬರನ್ನು ನಿರ್ಲಕ್ಷಿಸುವುದು ಸರಿಯಲ್ಲ. ಇದು ನ್ಯಾಯಾಂಗದಲ್ಲಿ ಹಸ್ತಕ್ಷೇಪವಾಗಿದೆ. ತನಗೆ ಅನುಕೂಲಕರವಾಗಿಲ್ಲದ ಹೆಸರನ್ನು ಸರಕಾರ ತಿರಸ್ಕರಿಸಿದೆ ಎಂದು ಲೋಧಾ ಟೀಕಿಸಿದ್ದಾರೆ.
ಇಂತಹ ಸಂದರ್ಭದಲ್ಲಿ ಸಿಐಜೆಯವರು ತಕ್ಷಣ ಕೊಲಿಜಿಯಂನ ಸಭೆ ಕರೆದು ಈ ವಿಷಯವನ್ನು ಸರಕಾರದ ಗಮನಕ್ಕೆ ತರಬೇಕು. ಪುನರಾವರ್ತನೆ ಆಗುವುದು ಅನಿವಾರ್ಯ ಎಂದಾದರೆ ಅದು ಆಗಬೇಕು ಎಂದ ಅವರು, ಸರಕಾರ ಯಾವುದೇ ಹೆಸರನ್ನು ಪ್ರತ್ಯೇಕಿಸುವಂತಿಲ್ಲ ಎಂಬುದು ಇದುವರೆಗೆ ನಡೆದು ಬಂದಿರುವ ಸಂಪ್ರದಾಯವಾಗಿದೆ ಎಂದು ಹೇಳಿದ್ದಾರೆ.