ಅಮೆರಿಕದ ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ಮೈಕ್ ಪಾಂಪಿಯೊ

Update: 2018-04-27 17:20 GMT

ವಾಶಿಂಗ್ಟನ್, ಎ. 27: ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯಾಗಿ ಮಾಜಿ ಸಿಐಎ ನಿರ್ದೇಶಕ ಮೈಕ್ ಪಾಂಪಿಯೊ ನೇಮಕಕ್ಕೆ ಅಮೆರಿಕದ ಸೆನೆಟ್ ಗುರುವಾರ ಅಂಗೀಕಾರ ನೀಡಿದೆ.

ಇದರ ಬೆನ್ನಿಗೇ ಪಾಂಪಿಯೊ ಅಧಿಕಾರ ಸ್ವೀಕರಿಸಿದ್ದಾರೆ ಹಾಗೂ ಕೂಡಲೇ ಯುರೋಪ್ ಮತ್ತು ಮಧ್ಯಪ್ರಾಚ್ಯದ ಪ್ರಮುಖ ಮಿತ್ರರನ್ನು ಭೇಟಿಯಾಗುವುದಕ್ಕಾಗಿ ಪ್ರವಾಸ ಕೈಗೊಂಡಿದ್ದಾರೆ.

ಮಾಜಿ ಸೇನಾಧಿಕಾರಿಯಾಗಿರುವ ಪಾಂಪಿಯೊ ರಿಪಬ್ಲಿಕನ್ ಕಾಂಗ್ರೆಸ್ ಸದಸ್ಯನೂ ಆಗಿದ್ದರು. ಅವರನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ನಿಷ್ಠಾವಂತ ಎಂಬುದಾಗಿ ಪರಿಗಣಿಸಲಾಗಿದೆ.

ಪಾಂಪಿಯೊ ಈಗಾಗಲೇ ರಾಜತಾಂತ್ರಿಕ ಚಟುವಟಿಕೆಗಳಲ್ಲಿ ನಿಕಟವಾಗಿ ತೊಡಗಿಸಿಕೊಂಡಿದ್ದಾರೆ. ಉತ್ತರ ಕೊರಿಯದ ನಾಯಕ ಕಿಮ್ ಜಾಂಗ್ ಉನ್‌ರನ್ನು ಭೇಟಿಯಾಗಲು ಪಾಂಪಿಯೊರನ್ನು ಟ್ರಂಪ್ ಮೂರು ವಾರಗಳ ಹಿಂದೆ ಉತ್ತರ ಕೊರಿಯಕ್ಕೆ ಕಳುಹಿಸಿದ್ದರು. ಉತ್ತರ ಕೊರಿಯದ ಪರಮಾಣು ಕಾರ್ಯಕ್ರಮದ ಕುರಿತಂತೆ ಕಿಮ್ ಜಾಂಗ್ ಉನ್ ಮತ್ತು ಟ್ರಂಪ್ ನಡುವಿನ ಸಂಭಾವ್ಯ ಶೃಂಗಸಭೆಗಾಗಿ ವೇದಿಕೆ ಸಿದ್ಧಪಡಿಸುವುದು ಆ ಭೇಟಿಯ ಉದ್ದೇಶವಾಗಿತ್ತು ಎನ್ನಲಾಗಿದೆ.

ಪಾಂಪಿಯೊ ಬ್ರಸೆಲ್ಸ್‌ನಲ್ಲಿ ಶುಕ್ರವಾರ ನಡೆಯಲಿರುವ ನ್ಯಾಟೊ ಸಭೆಯಲ್ಲಿ ಭಾಗವಹಿಸಿದ ಬಳಿಕ ವಾರಾಂತ್ಯದಲ್ಲಿ ಸೌದಿ ಅರೇಬಿಯ, ಜೋರ್ಡಾನ್ ಮತ್ತು ಇಸ್ರೇಲ್‌ಗೆ ಭೇಟಿ ನೀಡಲಿದ್ದಾರೆ ಎಂದು ಅವರು ಪ್ರಮಾಣ ವಚನ ಸ್ವೀಕರಿಸಿದ ಕ್ಷಣಗಳ ಬಳಿಕ ವಿದೇಶಾಂಗ ಇಲಾಖೆ ಪ್ರಕಟಿಸಿದೆ.

ತನ್ನ ಪ್ರಥಮ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ರೆಕ್ಸ್ ಟಿಲರ್‌ಸನ್‌ರನ್ನು ಟ್ರಂಪ್ ಕಳೆದ ತಿಂಗಳು ವಜಾಗೊಳಿಸಿರುವುದನ್ನು ಸ್ಮರಿಸಬಹುದಾಗಿದೆ. ಅಂದಿನಿಂದ ಹುದ್ದೆ ಖಾಲಿ ಬಿದ್ದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News