ಬಿಟ್ಟೆನೆಂದಡೆ ಬಿಡದೀ ಮಾಯೆ

Update: 2018-04-27 18:24 GMT

ಬಿಟ್ಟೆನೆಂದಡೆ ಬಿಡದೀ ಮಾಯೆ,

ಬಿಡದಿದ್ದಡೆ ಬೆಂಬತ್ತಿತ್ತು ಮಾಯೆ,
ಜೋಗಿಗೆ ಯೋಗಿಣಿಯಾಯಿತ್ತು ಮಾಯೆ,
ಸವಣಂಗೆ ಸವಣಿಯಾಯಿತ್ತು ಮಾಯೆ.
ಯತಿಗೆ ಪರಾಕಿಯಾಯಿತ್ತು ಮಾಯೆ.
ನಿನ್ನ ಮಾಯೆಗೆ ನಾನಂಜುವಳಲ್ಲ,
ಚೆನ್ನಮಲ್ಲಿಕಾರ್ಜುನದೇವಾ, ನಿನ್ನಾಣೆ.

                                      -ಅಕ್ಕ ಮಹಾದೇವಿ

 ‘ಮನದ ಮುಂದಣ ಆಸೆಯೆ ಮಾಯೆ’ ಎಂದು ಅಲ್ಲಮಪ್ರಭುಗಳು ತಿಳಿಸಿದ್ದಾರೆ. ಈ ಮಾಯೆಯ ಅವತಾರಗಳ ಕುರಿತು ಅಕ್ಕಮಹಾದೇವಿ ಈ ವಚನದಲ್ಲಿ ಕಣ್ಣಿಗೆ ಕಟ್ಟುವಂತೆ ಹೇಳಿದ್ದಾಳೆ. ಮಾಯೆ ಎಂಬುದು ಭ್ರಮಾತ್ಮಕವಾದುದು, ‘ಬ್ರಹ್ಮಸತ್ಯಂ ಜಗನ್ಮಿಥ್ಯಾ’ ಎಂದು ಶಂಕರಾಚಾರ್ಯರು ಹೇಳಿದ್ದಾರೆ. ಬ್ರಹ್ಮ ಒಂದೇ ಸತ್ಯ; ಈ ಜಗತ್ತು ಮಿಥ್ಯೆ, ಭ್ರಮಾತ್ಮಕವಾದುದು, ಇದು ಮಾಯೆ ಎಂದು ಮುಂತಾಗಿ ಶಂಕರಾಚಾರ್ಯರು ಜಗತ್ತನ್ನು ಅರ್ಥೈಸಿದ್ದಾರೆ. ಆದರೆ ಶರಣರು ಬ್ರಹ್ಮ ಸತ್ಯ, ಆದರೆ ಜಗತ್ತು ವಾಸ್ತವ ಎಂದು ಪ್ರತಿಪಾದಿಸಿದ್ದಾರೆ. ವಾಸ್ತವವೆಂಬುದು ಈ ಕ್ಷಣದ ಸತ್ಯ. ಈ ಕ್ಷಣದ ಸತ್ಯವು ನಿರಂತರ ಸತ್ಯದ ಜೊತೆಗೆ ಇರುವುದು ಹೊರತಾಗಿ ಮಿಥ್ಯೆ ಅಲ್ಲ, ಮಾಯೆ ಅಲ್ಲ. ವಿವಿಧ ಅವತಾರಗಳಿಂದ ಎಲ್ಲರನ್ನೂ ಒಂದಿಲ್ಲೊಂದು ರೀತಿಯಲ್ಲಿ ಕಾಡಲು ಹಪಹಪಿಸುವಂಥದ್ದೇ ಮಾಯೆ ಎಂದು ಅಕ್ಕ ಹೇಳುತ್ತಾಳೆ. ಕೇಡಿನ ಸಂಕೇತವಾದ ಇದು ಎಲ್ಲ ಸುಜ್ಞಾನವನ್ನು ಮರೆಸುತ್ತ, ಮನಸ್ಸಿಗೆ ಮುದ ನೀಡುತ್ತ ಆಕರ್ಷಿಸುತ್ತದೆ. ಈ ಮಾಯೆಯ ಚಲನಶೀಲತೆಯನ್ನು ಅಕ್ಕ ಪರಿಪೂರ್ಣವಾಗಿ ಕಂಡುಹಿಡಿದಿದ್ದಾಳೆ. ಮಾಯೆಯ ಮೇಲೆ ಹಿಡಿತ ಸಾಧಿಸಿದ್ದಾಳೆ. ಚೆನ್ನಮಲ್ಲಿಕಾರ್ಜುನ ಮಾಯೆಯನ್ನು ಬಿಟ್ಟು ತನ್ನ ಪರೀಕ್ಷೆ ಮಾಡಿದರೂ ತಾನು ಅಂಜುವುದಿಲ್ಲ ಎಂದು ಹೇಳುತ್ತಾಳೆ.
ಈ ಧೈರ್ಯ ಹೇಗೆ ಬಂತೆಂದರೆ ಆಕೆ ಮಾಯೆಯ ಹಲ್ಲನ್ನೇ ಕಿತ್ತಿದ್ದಾಳೆ. ‘‘ಹಾವಿನ ಹಲ್ಲ ಕಳೆದು ಹಾವನಾಡಿಸಬಲ್ಲಡೆ ಹಾವಿನ ಸಂಗವೇ ಲೇಸು ಕಂಡಯ್ಯಾ. ಕಾಯದ ಸಂಗವ ವಿವರಿಸಬಲ್ಲಡೆ ಕಾಯದ ಸಂಗವೆ ಲೇಸು ಕಂಡಯ್ಯಾ...’’ ಎಂದು ಇನ್ನೊಂದು ವಚನದಲ್ಲಿ ಹೇಳಿದ್ದಾಳೆ. ಈ ಮಾಯೆ ಬಿಟ್ಟೆ ಎಂದರೆ ಬಿಡುವಂಥದ್ದಲ್ಲ. ನಾನಾ ಪ್ರಕಾರವಾಗಿ ಕಾಡುತ್ತದೆ. ಅದನ್ನು ಬಿಡಲಿಕ್ಕಾಗದೆ ಇದ್ದಾಗ ಬೆನ್ನು ಬೀಳುತ್ತದೆ. ಎಲ್ಲ ಬಿಟ್ಟ ಯೋಗಿಗೆ ಯೋಗಿಣಿಯಾಗಿ ಕಾಡುತ್ತದೆ. ಸನ್ಯಾಸಿಗೆ ಸನ್ಯಾಸಿನಿಯಾಗಿ ಕಾಡುತ್ತದೆ. ಸರ್ವೇಂದ್ರಿಯಗಳ ಮೇಲೆ ವಿಜಯಸಾಧಿಸಿದ ಯತಿಯನ್ನು ಈ ಮಾಯೆ ಕಾಡುವ ರೀತಿಯೇ ಬೇರೆಯಾಗಿದೆ. ಯತಿಯನ್ನು ಇಂದ್ರಿಯ ದೌರ್ಬಲ್ಯಗಳ ಮೂಲಕ ಸೋಲಿಸಲಿಕ್ಕಾಗದೆ ಇದ್ದಾಗ ಅವನನ್ನು ಸ್ತುತಿಯ ರೂಪದಲ್ಲಿ ಬಂದು ಕಾಡುತ್ತದೆ. ಬಹುಪರಾಕ್ ಹಾಕುವಾಗ ಯತಿಯ ಮನದ ಮೂಲೆಯಲ್ಲಿ ಸಂತೋಷ ಉಕ್ಕುತ್ತದೆ. ಆಗ ಮಾಯೆ ಗೆಲ್ಲುತ್ತದೆ. ಅಂತೆಯೆ ಬಸವಣ್ಣನವರು ಹೊಗಳಿಕೆಯನ್ನು ‘ಹೊನ್ನಶೂಲ’ ಎಂದು ಕರೆದಿದ್ದಾರೆ. ಈ ವಚನ ಅಕ್ಕನ ಸೂಕ್ಷ್ಮಮತಿಗೆ ಸಾಕ್ಷಿಯಾಗಿದೆ. ಗುರು ವಿರಕ್ತರನೇಕರಿಗೆ ಎಚ್ಚರಿಕೆಯ ಗಂಟೆಯಾಗಿದೆ.
***

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News