ನೋಟ್ ಬ್ಯಾನ್ ಕುರಿತ ಕನ್ನಡ ಚಿತ್ರದಲ್ಲಿ ‘ಮೋದಿ’

Update: 2018-04-28 07:30 GMT

ಕಾಸರಗೋಡು, ಎ.28: ಕಳೆದ ವರ್ಷದ ಜುಲೈ ತಿಂಗಳಲ್ಲಿ, ಪ್ರಧಾನಿ ನರೇಂದ್ರ ಮೋದಿಯ ಮುಖಚಹರೆಯನ್ನೇ ಹೋಲುವ  ಎಂ ಪಿ ರಾಮಚಂದ್ರನ್ (64) ಎಂಬ  ವ್ಯಕ್ತಿಯೊಬ್ಬರ ಫೋಟೋ ಅಂತರ್ಜಾಲದಲ್ಲಿ ವೈರಲ್ ಆಗಿತ್ತು. ಅವರು ಪಯ್ಯನೂರು ರೈಲ್ವೆ ನಿಲ್ದಾಣದಲ್ಲಿ  ತಮ್ಮ ಹೆಗಲಲ್ಲಿ ಚೀಲವೊಂದನ್ನು ಹೊತ್ತುಕೊಂಡು ಬೆಂಗಳೂರಿಗೆ ತೆರಳುವ ರೈಲೊಂದಕ್ಕೆ ಕಾಯುತ್ತಿದ್ದಾಗ ಪ್ರಧಾನಿಗೂ ಅವರಿಗೂ ಇರುವ ಸಾಮ್ಯತೆಯನ್ನು ನೋಡಿ ಕಾಲೇಜು ವಿದ್ಯಾರ್ಥಿಯೊಬ್ಬರು ಅವರ ಫೋಟೋ ಕ್ಲಿಕ್ಕಿಸಿ ಅಂತರ್ಜಾಲದಲ್ಲಿ ಹರಿಯಬಿಟ್ಟಿದ್ದರು.

ಇದೀಗ ಇದೇ ರಾಮಚಂದ್ರನ್ ಅಪ್ಪಿ ಪ್ರಸಾದ್ ನಿರ್ದೇಶನದ ಹಾಗೂ ಕೆ.ಎಚ್. ವೇಣು ನಿರ್ಮಾಣದ ಕನ್ನಡ ಚಲನಚಿತ್ರ ``ಸ್ಟೇಟ್‍ಮೆಂಟ್ 8/11'' ಇದರಲ್ಲಿ ಪ್ರಧಾನಿ ಮೋದಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯವೇ ತೆರೆಕಾಣಲಿರುವ ಈ ಚಿತ್ರ ನೋಟ್ ಬ್ಯಾನ್ ಕುರಿತಾದ ಚಿತ್ರವಾಗಿದೆ. ಚಿತ್ರ ಎಪ್ರಿಲ್ 27ರಂದು ಬಿಡುಗಡೆಗೊಳ್ಳಬೇಕಿದ್ದರೂ ತಾಂತ್ರಿಕ ಕಾರಣಗಳಿಗಾಗಿ ಮುಂದೂಡಲ್ಪಟ್ಟಿದೆ.

ಮೂವತ್ತು ವರ್ಷಗಳ ಕಾಲ ಮುಂಬೈ ಕಂಪೆನಿಯೊಂದರಲ್ಲಿ ಸ್ಟೆನೋಗ್ರಾಫರ್ ಆಗಿ ದುಡಿದಿದ್ದ ರಾಮಚಂದ್ರನ್ ಮತ್ತೆ 10 ವರ್ಷ ಸೌದಿ ಅರೇಬಿಯಾದ ನಿರ್ಮಾಣ ಕಂಪೆನಿಯೊಂದರಲ್ಲಿ ಕೆಲಸ ಮಾಡಿದ್ದರು. ಅವರ ಇಬ್ಬರು ಪುತ್ರರೂ ಟೆಕ್ಕಿಗಳಾಗಿದ್ದು ಒಬ್ಬರು ಮುಂಬೈನಲ್ಲಿದ್ದರೆ ಇನ್ನೊಬ್ಬರು ಬೆಂಗಳೂರಿನಲ್ಲಿದ್ದಾರೆ. ಅವರ ಪತ್ನಿ ತಮ್ಮ ಎರಡನೇ ಪುತ್ರನ ಜತೆಗಿದ್ದಾರೆ.

ನಿವೃತ್ತಿಯ ನಂತರ ತೀರ್ಥಕ್ಷೇತ್ರಗಳಿಗೆ ಹೋಗುವುದು ಅವರಿಗೆ  ಖುಷಿ ನೀಡುತ್ತಿದೆ. ಸ್ಟೇಟ್‍ಮೆಂಟ್ ಚಿತ್ರಕ್ಕಾಗಿ ಅವರು ಬೆಂಗಳೂರು ಮತ್ತು ಕೊಡಗಿನಲ್ಲಿ ಎರಡು ದಿನ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.

ಪ್ರಧಾನಿಯಂತೆಯೇ ಕಾಣುತ್ತಿದ್ದರೂ ಯಾವುದೇ ರಾಜಕೀಯ ಪಕ್ಷಗಳಿಗೆ ಪ್ರಚಾರದಲ್ಲಿ ಭಾಗವಹಿಸುವುದಿಲ್ಲ, `ಸ್ಟೇಟ್‍ಮೆಂಟ್ 8/11' ಚಿತ್ರದಲ್ಲಿ  ಪ್ರಧಾನಿ ಮೇಲಿನ ಗೌರವದಿಂದ ನಟಿಸಿದ್ದೆ, ಎಂದು ಅವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News