ಹೆಬ್ಬೆಟ್ ರಾಮಕ್ಕ: ರಾಮಕ್ಕನ ಬದಲಾವಣೆಯೇ ಆಕರ್ಷಕ!

Update: 2018-04-28 18:30 GMT

ಟ್ರೇಲರ್ ಮೂಲಕ ಆಕರ್ಷಣೆ ಮೂಡಿಸುವ ಹಲವಾರು ಚಿತ್ರಗಳು ಥಿಯೇಟರ್‌ಗೆ ಹೋದಾಗ ನಿರಾಶೆ ಮೂಡಿಸುವುದು ಸಾಮಾನ್ಯ. ಆದರೆ ಇದಕ್ಕೆ ವ್ಯತಿರಿಕ್ತ ಅನುಭವ ನೀಡುವ ಮೂಲಕ ಟ್ರೇಲರ್‌ಗಿಂತಲೂ ಪಿಕ್ಚರೇ ಆಕರ್ಷಕವೆನಿಸುವುದು ‘ಹೆಬ್ಬೆಟ್ ರಾಮಕ್ಕ’ ಚಿತ್ರ ನೋಡಿದಾಗ.

ಚಿತ್ರದ ಹೆಸರೇ ಸೂಚಿಸುವಂತೆ ಹೆಬ್ಬೆಟ್ಟು ಒತ್ತಿ ಸಹಿ ಮಾಡಬಲ್ಲ ಅನಕ್ಷರಸ್ಥ ಮಹಿಳೆ ರಾಮಕ್ಕ. ಆದರೆ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಅಧ್ಯಕ್ಷೆಯಾಗುವ ಆಕೆ ಮುಂದೆ ಯಾವ ರೀತಿ ಬದಲಾಗುತ್ತಾಳೆ ಎನ್ನುವುದೇ ಚಿತ್ರದ ಸಾರಾಂಶ.

 ಸಾಮಾನ್ಯವಾಗಿ ಸಂಪತ್ತಿನ ಸೌಭಾಗ್ಯ ಇಲ್ಲದ, ಅನಕ್ಷರಸ್ಥರು ಅಧಿಕಾರಕ್ಕೆ ಬಂದರೆ ಮೊದಲು ತಮಗೆ ಆಸ್ತಿ ಮಾಡಿಕೊಳ್ಳುವತ್ತ ಗಮನ ಹರಿಸುತ್ತಾರೆ ಎಂಬ ನಂಬಿಕೆ ಇದೆ. ಚಿತ್ರದಲ್ಲಿ ಕೂಡ ಹೆಬ್ಬೆಟ್ ರಾಮಕ್ಕ ಅಧಿಕಾರಕ್ಕೆ ಬರುವುದರೊಂದಿಗೆ ಆಕೆಯ ಅಧಿಕಾರದ ದುರುಪಯೋಗ ಶುರುವಾಗುತ್ತದೆ. ಆದರೆ ಅದರ ಆರಂಭ ಆಕೆಯ ಪತಿಯಿಂದಲೇ ಹೊರತು, ರಾಮಕ್ಕನಿಂದಲ್ಲ. ತನ್ನ ಅಧಿಕಾರ ವ್ಯಾಪ್ತಿಯ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಳ್ಳುವ ರಾಮಕ್ಕ ಅದಕ್ಕೂ ಮೊದಲು ತಾನು ಅಕ್ಷರಾಭ್ಯಾಸ ಮಾಡಬೇಕು ಎಂಬ ಅರಿವು ಮೂಡಿಸಿಕೊಳ್ಳುತ್ತಾಳೆ. ಅದರಲ್ಲಿ ಹೇಗೆ ಯಶಸ್ವಿಯಾಗುತ್ತಾಳೆ ಮತ್ತು ಎಷ್ಟೊಂದು ಬದಲಾಗುತ್ತಾಳೆ ಎನ್ನುವುದನ್ನು ಪರದೆಯ ಮೇಲೆ ನೋಡುವುದೇ ಚಂದ.

 ಹೆಬ್ಬೆಟ್ ರಾಮಕ್ಕನಾಗಿ ತಾರಾ ಅನುರಾಧ ಸಹಜವಾದ ನಟನೆ ನೀಡಿದ್ದಾರೆ. ಹಳ್ಳಿ ಹೆಂಗಸಿನ ನಿಷ್ಕಲ್ಮಶತೆಯ ಜೊತೆಯಲ್ಲೇ, ಆಕೆಯೊಳಗಿನ ಒಳ್ಳೆಯತನಕ್ಕೆ ಅಕ್ಷರಾಭ್ಯಾಸ ನೀಡುವ ಶಕ್ತಿಯನ್ನೂ ನೈಜವಾಗಿ ಪ್ರದರ್ಶಿಸಿದ್ದಾರೆ. ರಾಮಕ್ಕನ ಪತಿ ಕಲ್ಲೇಶಿಯಾಗಿ ದೇವರಾಜ್ ನಿರ್ವಹಿಸಿರುವ ಪಾತ್ರವೂ ಮತ್ತೊಂದು ಆಧಾರ ಸ್ತಂಭ. ರಾಜಕೀಯದ ಜೊತೆಯಲ್ಲಿಯೇ ಕೌಟುಂಬಿಕ ಸಂಬಂಧವನ್ನು ಕೂಡ ಪರಿಚಯಿಸುವ ಚಿತ್ರದಲ್ಲಿ ಯಾವುದೇ ನಾಟಕೀಯತೆಗಳಿಲ್ಲ.

ನಂಜುಡೇಗೌಡರ ನಿರ್ದೇಶನದಲ್ಲಿ ಮೂಡಿ ಬಂದಿರುವ ಹಳ್ಳಿಯ ದೃಶ್ಯಗಳಿಗೆ ಅದೇ ಸೊಗಡಿನ ಸಂಭಾಷಣೆ ನೀಡುವ ಮೂಲಕ ಎಸ್. ಜಿ. ಸಿದ್ದರಾಮಯ್ಯ ಗಮನ ಸೆಳೆದಿದ್ದಾರೆ. ಆದರೆ ಪ್ರತಿಯೊಬ್ಬರ ಮಾತಿನಲ್ಲಿಯೂ ಪದೇ ಪದೇ ಗಾದೆಗಳು ನುಸುಳುವುದು ಅಸಹಜ ಅನಿಸುತ್ತದೆ. ಎಂಎಲ್‌ಎಯಾಗಿ ಹನುಮಂತೇಗೌಡರ ನಟನೆ ಮತ್ತು ನಿರ್ದೇಶಕರು ಹೊಸ ಕಲಾವಿದರಿಂದ ನಟನೆ ಹೊರತಂದಿರುವ ರೀತಿ ಮೆಚ್ಚುವಂತಿದೆ. ಮಹಿಳಾ ಮೀಸಲಾತಿಯಿಂದ ಪದವಿಗಿಟ್ಟಿಸುವ ಮಹಿಳೆಯರ ಪತಿಯಂದಿರು ಅಧಿಕಾರ ದುರ್ಬಳಕೆ ಮಾಡುವ ನೈಜ ಘಟನೆಯನ್ನು ಸಮರ್ಪಕವಾಗಿ ತೆರೆಗೆ ತರಲಾಗಿರುವ ಈ ಚಿತ್ರ ಕರ್ನಾಟಕದಲ್ಲಿ ಚುನಾವಣೆಯ ವೇಳೆಯೇ ಬಿಡುಗಡೆಯಾಗಿರುವುದು ಖುಷಿಯ ವಿಚಾರ.

ಈ ಹಿಂದೆ ಅಂತರ್‌ರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಾಗ ಚಿತ್ರದ ಕತೆ ಎಲ್ಲೆಲ್ಲೋ ಹೋಗುವುದಾಗಿ ಹೇಳಿದ್ದ ಪ್ರೇಕ್ಷಕರು ಕೂಡ ಹೊಸದಾಗಿ ಎಡಿಟ್ ಆಗಿರುವ ಹೆಬ್ಬೆಟ್ ರಾಮಕ್ಕದ ಪ್ರದರ್ಶನ ಕಂಡು ಮೆಚ್ಚುಗೆ ವ್ಯಕ್ತಪಡಿಸಿರುವುದು ಚಿತ್ರಕ್ಕೆ ಸಿಕ್ಕ ಗೆಲುವು ಎಂದೇ ಹೇಳಬಹುದು.

ತಾರಾಗಣ: ತಾರಾ, ದೇವರಾಜ್
ನಿರ್ದೇಶನ: ಎನ್. ಆರ್. ನಂಜುಂಡೇಗೌಡ
ನಿರ್ಮಾಣ: ಎಸ್. ಎ. ಪುಟ್ಟರಾಜು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News