ವಿದೇಶಿ ದೇಣಿಗೆ ಬಹಿರಂಗಗೊಳಿಸದ 3,292 ಎನ್‌ಜಿಒಗಳು, ಸಂಸ್ಥೆಗಳು!

Update: 2018-04-29 15:13 GMT

ಹೊಸದಿಲ್ಲಿ,ಎ.29: ಜೆಎನ್‌ಯು,ಇಗ್ನೋ,ಐಐಟಿ-ದಿಲ್ಲಿ ಮತ್ತು ಮದ್ರಾಸ್‌ನಂತಹ ಕೆಲವು ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಬೆಂಗಳೂರಿನ ಇನ್ಫೋಸಿಸ್ ಪ್ರತಿಷ್ಠಾನ ಸೇರಿದಂತೆ 3,292 ಎನ್‌ಜಿಒಗಳು,ಸಂಸ್ಥೆಗಳು ಕಳೆದ ಹಣಕಾಸು ವರ್ಷ ಅಥವಾ ಹಿಂದಿನ ವರ್ಷಗಳಿಗೆ ತಮ್ಮ ವಾರ್ಷಿಕ ವಿದೇಶಿ ದೇಣಿಗೆಗಳು ಮತ್ತು ಖರ್ಚುಗಳನ್ನು ಬಹಿರಂಗಗೊಳಿಸಿಲ್ಲ ಎಂದು ಗೃಹಸಚಿವಾಲಯವು ತಿಳಿಸಿದೆ.

2011-12ರಿಂದ 2016-17ನೇ ಸಾಲಿನವರೆಗಿನ ದಾಖಲೆಗಳನ್ನು ಪರಿಶೀಲಿಸಲಾಗಿದ್ದು,ಹಲವಾರು ಅವಕಾಶಗಳನ್ನು ನೀಡಿದ್ದರೂ ಕೆಲವು ಹಣಕಾಸು ವರ್ಷಗಳಿಗೆ ಕಡ್ಡಾಯ ವಾರ್ಷಿಕ ವರದಿಗಳನ್ನು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ(ಎಫ್‌ಸಿಆರ್‌ಎ) ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡದಿರುವುದು ಕಂಡು ಬಂದಿದೆ ಎಂದು ಈ ಎನ್‌ಜಿಒಗಳಿಗೆ ಮತ್ತು ಸಂಸ್ಥೆಗಳಿಗೆ ಜಾರಿಗೊಳಿಸಿರುವ ನೋಟಿಸ್‌ನಲ್ಲಿ ತಿಳಿಸಿರುವ ಸಚಿವಾಲಯವು,15 ದಿನಗಳಲ್ಲಿ ಈ ದಾಖಲೆಗಳು ಸಲ್ಲಿಕೆಯಾಗದಿದ್ದರೆ ಅವುಗಳ ವಿರುದ್ಧ ಸೂಕ್ತಕ್ರಮವನ್ನು ಜರುಗಿಸು ವುದಾಗಿ ಎಚ್ಚರಿಕೆ ನೀಡಿದೆ.

ಇನ್ಫೋಸಿಸ್ ಪ್ರತಿಷ್ಠಾನ,ದಿಲ್ಲಿ ವಿವಿ,ಜೆಎನ್‌ಯು,ಇಗ್ನೋ,ಪಂಜಾಬ್ ವಿವಿ,ರಾಜಸ್ಥಾನ ವಿವಿ,ಮದ್ರಾಸ್ ಕ್ರಿಶ್ಚಿಯನ್ ಕಾಲೇಜ್,ಭಾರತೀಯ ಕೃಷಿ ಸಂಶೋಧನಾ ಮಂಡಳಿ,ಐಐಟಿ-ದಿಲ್ಲಿ ಮತ್ತು ಮದ್ರಾಸ್ ಗೃಹ ಸಚಿವಾಲಯವು ಸಿದ್ಧಗೊಳಿಸಿರುವ ಪಟ್ಟಿಯಲ್ಲಿ ಸೇರಿವೆ.

ಎಫ್‌ಸಿಆರ್‌ಎ ಅಡಿ ನೋಂದಾಯಿತಗೊಂಡಿರದ ಸಂಸ್ಥೆಗಳು ವಿದೇಶಿ ಆರ್ಥಿಕ ನೆರವನ್ನು ಸ್ವೀಕರಿಸಲು ಅವಕಾಶವಿಲ್ಲ.

ಕಾಯ್ದೆಯಡಿ ನೋಂದಾಯಿತ ಸಂಸ್ಥೆಗಳು ತಮ್ಮ ಆದಾಯ ಮತ್ತು ವೆಚ್ಚಗಳ ವರದಿಯನ್ನು ಪ್ರತಿವರ್ಷವೂ ಸರಕಾರಕ್ಕೆ ದಾಖಲಿಸುವುದು ಕಡ್ಡಾಯವಾಗಿದ್ದು,ವಿಫಲಗೊಂಡರೆ ಅವುಗಳ ನೋಂದಣಿಯು ರದ್ದಾಗುತ್ತದೆ.

ಇನ್ಫೋಸಿಸ್ ಪ್ರತಿಷ್ಠಾನವು ಇನ್ಫೋಸಿಸ್ ಲಿ.ನಿಂದ ಮಾತ್ರ ದೇಣಿಗೆಗಳನ್ನು ಸ್ವೀಕರಿಸುತ್ತದೆ ಮತ್ತು ಎಫ್‌ಸಿಆರ್‌ಎ ವ್ಯಾಪ್ತಿಗೆ ಬರುವುದಿಲ್ಲ. ಇದನ್ನು ಸಚಿವಾಲಯದ ಗಮನಕ್ಕೆ ತರಲಾಗಿದೆ ಎಂದು ಇನ್ಫೋಸಿಸ್‌ನ ಉಪಾಧ್ಯಕ್ಷ ಹಾಗೂ ಪ್ರತಿಷ್ಠಾನದ ಟ್ರಸ್ಟಿ ರಾಮದಾಸ ಕಾಮತ್ ಅವರು ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ತಿಳಿಸಿದರು.

ಪ್ರಕ್ರಿಯಾ ಲೋಪಗಳಿಂದಾಗಿ ಎಫ್‌ಸಿಆರ್‌ಎ ಅಡಿ ಐಐಟಿಗಳಿಗೆ ನೋಟಿಸ್ ನೀಡಲಾಗುತ್ತಿದ್ದು, ನಾವಿದನ್ನು ಪ್ರತಿವರ್ಷವೂ ಬೆಟ್ಟು ಮಾಡುತ್ತಿದ್ದೇವೆ. ಐಐಟಿಗಳು ಸಂಸತ್ತಿನ ಕಾಯ್ದೆಯ ಮೂಲಕ ಸ್ಥಾಪನೆಗೊಂಡಿರುವುದರಿಂದ ಮತ್ತು ಸಿಎಜಿ ಲೆಕ್ಕ ಪರಿಶೋಧನೆ ನಡೆಸುವುದರಿಂದ ಅವುಗಳಿಗೆ ಎಫ್‌ಸಿಆರ್‌ಎ ನೋಂದಣಿಯಿಂದ ವಿನಾಯಿತಿ ನೀಡಲಾಗಿದೆ ಎಂದು ಐಐಟಿ-ದಿಲ್ಲಿಯ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News