ವ್ಯವಸ್ಥೆಯನ್ನು ಬಹಿರಂಗಪಡಿಸಿದ್ದಕ್ಕಾಗಿ ನನ್ನನ್ನು ಬಲಿಪಶು ಮಾಡಲಾಯಿತು: ಡಾ.ಕಫೀಲ್ ಖಾನ್

Update: 2018-04-30 08:24 GMT

ಲಕ್ನೋ, ಎ.30: ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಗೋರಖ್ ಪುರದ ಬಿ.ಆರ್.ಡಿ. ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ  ಮಕ್ಕಳು ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿ ಶುಕ್ರವಾರ ಬಿಡುಗಡೆಗೊಂಡ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಕಫೀಲ್ ಖಾನ್, ಆಡಳಿತ ವೈಫಲ್ಯ ಮರೆಮಾಚಲು ಹಾಗೂ ವ್ಯವಸ್ಥೆಯನ್ನು ಬಹಿರಂಗಪಡಿಸಿದ್ದಕ್ಕಾಗಿ ತನ್ನನ್ನು ಬಲಿಪಶುವನ್ನಾಗಿಸಲಾಗಿದೆ ಎಂದು ಹೇಳಿದ್ದಾರೆ. 

ಆಸ್ಪತ್ರೆಯ ಅತ್ಯಂತ ಕಿರಿಯ ವೈದ್ಯರನ್ನು ಜೈಲಿಗೆ ಕಳುಹಿಸಲಾಗಿದೆಯಾದರೂ ವಿಭಾಗದ ಮುಖ್ಯಸ್ಥ ಅಥವಾ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಸುಪರಿಂಟೆಂಡೆಂಟ್ ಅವರಿಗೆ ಯಾವುದೇ ಪ್ರಶ್ನೆಗಳನ್ನು ಕೇಳಲಾಗಿಲ್ಲ, ಇತರ ವಿಭಾಗಗಳಲ್ಲಿ ನಡೆದ ಸಾವುಗಳ ಬಗ್ಗೆ ತನಿಖೆಯನ್ನೂ ನಡೆಸಲಾಗಿಲ್ಲ ಎಂದು ಅವರು ಹೇಳಿದ್ದಾರೆ.

ಆಸ್ಪತ್ರೆಯಲ್ಲಿ ಆಮ್ಲಜನಕದ ಪೂರೈಕೆಯ ಕೊರತೆಯಿಂದ ಸಾವುಗಳು ಸಂಭವಿಸಿತ್ತು ಎಂದು ಒಪ್ಪಿಕೊಳ್ಳುವ ಅವರು ಇದು ಕೇವಲ ಮಕ್ಕಳ ವಿಭಾಗದಲ್ಲಷ್ಟೇ ಅಲ್ಲ ಇಡೀ ಆಸ್ಪತ್ರೆಯ ಸಮಸ್ಯೆಯಾಗಿತ್ತು ಹಾಗೂ ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಹಿತ ಎಲ್ಲಾ ಅಧಿಕಾರಿಗಳಿಗೆ ಪತ್ರ ಬರೆಯಲಾಗಿತ್ತು ಎಂದಿದ್ದಾರೆ. ಆದರೆ ಸರಕಾರ ಮಾತ್ರ ಆಮ್ಲಜನಕದ ಕೊರತೆಯಿಂದ ಸಾವುಗಳು ಸಂಭವಿಸಿವೆ ಎಂಬುದನ್ನು ಅಲ್ಲಗಳೆದಿತ್ತು.

``ಆರು ತಿಂಗಳುಗಳಿಂದ ಆಮ್ಲಜನಕ ಪೂರೈಕೆ ಕಂಪೆನಿ ತನಗೆ ಹಣ ಬಿಡುಗಡೆಯಾಗಿಲ್ಲದ ಕುರಿತು 14ಕ್ಕೂ ಹೆಚ್ಚು ಪತ್ರಗಳನ್ನು ಬರೆದು ಆಮ್ಲಜನಕ ಪೂರೈಕೆಯನ್ನು ನಿಲ್ಲಿಸುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿತ್ತು. ಕೆಲವೊಂದು ಪತ್ರಗಳನ್ನು ಮುಖ್ಯಮಂತ್ರಿಗೂ ಕಳುಹಿಸಲಾಗಿತ್ತು'' ಎಂದು ಖಾನ್ ಹೇಳಿದ್ದಾರೆ.

ಘಟನೆಯ ನಂತರ ಸುಮ್ಮನಿದ್ದುದು ತನ್ನ ದೊಡ್ಡ ತಪ್ಪು ಎಂದು ಹೇಳಿದ ಅವರು ಘಟನೆಯ ನಂತರ ಆಸ್ಪತ್ರೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಆದಿತ್ಯನಾಥ್ ತನ್ನ ಮೇಲೆ ಸಿಟ್ಟುಗೊಂಡಿದ್ದಾಗಿ ಇತರ ಸಹೋದ್ಯೋಗಿ ವೈದ್ಯರು ತಿಳಿಸಿ ತನಗೆ ಸುಮ್ಮನಿರಲು ಹೇಳಿದ್ದರಿಂದ ಹಾಗೆ ಮಾಡಿದ್ದಾಗಿ ತಿಳಿಸಿದರು.

ಆದಿತ್ಯನಾಥ್  ಭೇಟಿ ನೀಡುವುದಕ್ಕಿಂತ ಮುಂಚೆ ಆಮ್ಲಜನಕ ಸಿಲಿಂಡರ್ ಏರ್ಪಾಟು ಮಾಡಿದ್ದಕ್ಕಾಗಿ ತನ್ನನ್ನು ಹೊಗಳುತ್ತಿದ್ದ ಎಲ್ಲರ ನಿಲುವು ನಂತರ ಬದಲಾಗಿದ್ದಾಗಿ ಅವರು ತಿಳಿಸಿದ್ದಲ್ಲದೆ, ತಾನು ಆಮ್ಲಜನಕ ಕೊರತೆಯ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾಗಿ ಎಲ್ಲರೂ ತಿಳಿದುಕೊಂಡಿದ್ದಾರೆ ಎಂದರು.

``ನಾನು ಘಟನೆಯ ನಂತರ ಮನೆಗೆ ಹಿಂದಿರುಗಿದಾಗ ನನ್ನನ್ನು ಎನ್‍ಕೌಂಟರ್ ಮೂಲಕ ಸಾಯಿಸಲಾಗುವುದು ಎಂಬ ಬೆದರಿಕೆಗಳು ಬಂದಿದ್ದವು. ಆಮ್ಲಜನಕ ಪೂರೈಕೆ ಮಾಡಿದ ಕಂಪೆನಿಯ ಮಾಲಕನಿಗೆ ಜಾಮೀನು ದೊರೆತ ನಂತರ ಆತ ಜೈಲಿನಲ್ಲಿದ್ದಾಗ ನಾನು ಬರೆದಿದ್ದ ಪತ್ರವನ್ನು ತನ್ನ ಪತ್ನಿ ಬಿಡುಗಡೆ ಮಾಡಿದ್ದಳು" ಎಂದವರು ವಿವರಿಸಿದ್ದಾರೆ.

ಅನುಮತಿಸಿದರೆ ಮತ್ತೆ ತನ್ನ ಉದ್ಯೋಗಕ್ಕೆ ಮರಳುವುದಾಗಿ ಅವರು ಜೈಲಿನಿಂದ ಬಿಡುಗಡೆ ಬಳಿಕ ತಿಳಿಸಿದ್ದಾರಲ್ಲದೆ ಆಮ್ಲಜನಕ ಸಿಲಿಂಡರ್ ಏರ್ಪಾಟು ಮಾಡಿ ತಾನು ಮಾಡಿದ ತಪ್ಪಾದರೂ ಏನು  ಎಂದೂ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News