×
Ad

ಜೂನ್ 1ರಿಂದ 10ರವರೆಗೆ ದೇಶಾದ್ಯಂತ ಕೃಷಿ ಉತ್ಪನ್ನ ಪೂರೈಕೆ ಸ್ಥಗಿತ

Update: 2018-04-30 21:15 IST

ಹೊಸದಿಲ್ಲಿ, ಎ.30: ಕೇಂದ್ರ ಸರಕಾರ ರೈತ ವಿರೋಧಿ ನೀತಿಯನ್ನು ಹೊಂದಿದೆ ಎಂದು ಆರೋಪಿಸಿರುವ ರಾಷ್ಟ್ರೀಯ ಕಿಸಾನ್ ಮಹಾಸಂಘ, ಇದನ್ನು ಪ್ರತಿಭಟಿಸಿ ಜೂನ್ 1ರಿಂದ ಜೂನ್ 10ರವರೆಗೆ ಕೃಷಿ ಉತ್ಪನ್ನಗಳನ್ನು(ತರಕಾರಿ, ಧಾನ್ಯಗಳು, ಹಾಲು ಇತ್ಯಾದಿ) ದೇಶದಾದ್ಯಂತದ ನಗರಗಳಿಗೆ ಪೂರೈಸುವ ಕಾರ್ಯವನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಸಂಘದ ಮುಖಂಡರಲ್ಲಿ ಒಬ್ಬರಾದ ಮಾಜಿ ಬಿಜೆಪಿ ಮುಖಂಡ ಯಶವಂತ್ ಸಿನ್ಹಾ ತಿಳಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಿನ್ಹಾ, ಜೂನ್ 6ರಂದು ರೈತರು ಅಸಹಕಾರ ದಿನ ಆಚರಿಸುತ್ತಾರೆ. ಜೂನ್ 10ರಂದು ಮಧ್ಯಾಹ್ನ 2:00 ಗಂಟೆಯವರೆಗೆ ರಾಷ್ಟ್ರಮಟ್ಟದ ಭಾರತ್ ಬಂದ್ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ರಾಷ್ಟ್ರೀಯ ಕಿಸಾನ್ ಮಹಾಸಂಘವು 110 ರೈತರ ಸಂಘಟನೆಯ ಒಕ್ಕೂಟವಾಗಿದೆ. ಕೃಷಿ ಉತ್ಪನ್ನಗಳ ಉತ್ಪಾದನಾ ವೆಚ್ಚಕ್ಕಿಂತ ಶೇ.50ರಷ್ಟು ಹೆಚ್ಚು ಇರುವ ಕನಿಷ್ಟ ಬೆಂಬಲ ಬೆಲೆಯ ಭರವಸೆಯನ್ನು ಕೇಂದ್ರ ಸರಕಾರ ನೀಡಿದೆ. ಆದರೆ ಈ ಹೆಚ್ಚುವರಿ ದರವನ್ನು ರೈತರಿಗೆ ಇದುವರೆಗೂ ನೀಡಲಾಗಿಲ್ಲ ಎಂದು ಸಿನ್ಹಾ ತಿಳಿಸಿದ್ದಾರೆ.

ಪ್ರಧಾನಿ ಮೋದಿಯ ಭರವಸೆ ಹಾಗೂ ಘೋಷಣೆಗಳು ಕೇವಲ ಪ್ರಹಸನಗಳಾಗಿವೆ. ಕೇಂದ್ರ ಸರಕಾರ ರೈತರಿಗೆ ನೆರವಾಗುವ ಯಾವುದೇ ಕಾರ್ಯ ಮಾಡಿಲ್ಲ. ಬಿಜೆಪಿಯ ಪ್ರಣಾಳಿಕೆಯಲ್ಲಿ ಘೋಷಿಸಲಾಗಿರುವ ಯಾವುದೇ ಭರವಸೆ ಕಾರ್ಯಗತವಾಗಿಲ್ಲ ಎಂದು ಸಿನ್ಹಾ ಟೀಕಿಸಿದ್ದಾರೆ. ಕನಿಷ್ಟ ಬೆಂಬಲ ಬೆಲೆಯನ್ನು ಅಧಿಕಗೊಳಿಸಬೇಕು ಹಾಗೂ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂಬುದು ರೈತ ಸಂಘಟನೆಗಳ ಒತ್ತಾಯವಾಗಿದೆ. ಕನಿಷ್ಟ ಬೆಂಬಲ ಬೆಲೆಯು ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಎಂದು ನಿಗದಿಗೊಳಿಸುವಂತೆ ಆಗ್ರಹಿಸಿದ್ದೇವೆ.

ಕೇಂದ್ರ ಸರಕಾರ ಬಜೆಟ್‌ನಲ್ಲಿ ಕನಿಷ್ಟ ಬೆಂಬಲ ಬೆಲೆ ಘೋಷಿಸಿದ್ದರೂ ಅದರಲ್ಲಿ ನಿರ್ದಿಷ್ಟತೆ ಇಲ್ಲ . ಇದರಿಂದ ರೈತರಿಗೆ ಯಾವುದೇ ಪ್ರಯೋಜನವಿಲ್ಲ ಎಂದು ಮಧ್ಯಪ್ರದೇಶದ ರೈತ ಮುಖಂಡ ಶಿವಕುಮಾರ್ ಕಾಕ್ಕ ತಿಳಿಸಿದ್ದು ಜೂನ್ 10ರ ಭಾರತ ಬಂದ್ ಬೆಂಬಲಿಸುವಂತೆ ವ್ಯಾಪಾರಸ್ತರ ಸಂಘಟನೆಗಳಿಗೆ ಮನವಿ ಮಾಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News