ಬಡ್ತಿಯಲ್ಲಿ ಮೀಸಲಾತಿಗೆ ಸರಕಾರ ಬೆಂಬಲ : ಪಾಸ್ವಾನ್

Update: 2018-04-30 17:00 GMT

ಹೊಸದಿಲ್ಲಿ, ಎ.30: ಕೇಂದ್ರ ಸರಕಾರ ದಲಿತ ವಿರೋಧಿ ನೀತಿ ಹೊಂದಿದೆ ಎಂಬ ವಿಪಕ್ಷಗಳ ಟೀಕೆಗೆ ಉತ್ತರಿಸಿರುವ ಕೇಂದ್ರ ಸಚಿವ ರಾಮವಿಲಾಸ್ ಪಾಸ್ವಾನ್ , ಕೇಂದ್ರ ಸರಕಾರವು ಸರಕಾರಿ ಉದ್ಯೋಗದಲ್ಲಿರುವ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಜನರಿಗೆ ಉದ್ಯೋಗ ಬಡ್ತಿಯಲ್ಲಿ ಮೀಸಲಾತಿಯ ಪರವಾಗಿದೆ ಎಂದು ಹೇಳಿದ್ದಾರೆ.

 ದಲಿತ ಸಂಘಟನೆಗಳ ಆಗ್ರಹದಂತೆ ಎಸ್ಸಿ, ಎಸ್ಟಿ ವಿಭಾಗದವರಿಗೆ ಸರಕಾರಿ ಉದ್ಯೋಗದ ಬಡ್ತಿಯಲ್ಲಿ ಮೀಸಲಾತಿ, ವಿವಿಗಳಲ್ಲಿ ‘ಕೋಟ’ ನಿಗದಿ ಹಾಗೂ ದಲಿತ ದೌರ್ಜನ್ಯ ವಿರೋಧಿ ಕಾನೂನು ಜಾರಿಯಾಗಬೇಕು ಎಂಬುದು ಕೇಂದ್ರ ಸರಕಾರದ ನಿಲುವಾಗಿದೆ ಎಂದಿರುವ ಪಾಸ್ವಾನ್, ದಲಿತರಿಗೆ ನ್ಯಾಯ ದೊರಕುವುದನ್ನು ಖಾತರಿಪಡಿಸಿಕೊಳ್ಳಲು ಕೇಂದ್ರ ಸರಕಾರ ದೃಢ ನಿರ್ಧಾರ ತಳೆದಿದೆ ಎಂದಿದ್ದಾರೆ.

ಎಸ್ಸಿ/ಎಸ್ಟಿಗಳಿಗೆ ಬಡ್ತಿಯಲ್ಲಿ ಮೀಸಲಾತಿ ನೀಡುವಾಗ ಕೆಲವೊಂದು ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಬೇಕೆಂದು ಸುಪ್ರೀಂಕೋರ್ಟ್ ಸೂಚಿಸಿರುವ ಕಾರಣ ಈ ಸಮುದಾಯದವರಿಗೆ ಬಡ್ತಿ ಮೀಸಲಾತಿ ಸ್ಥಗಿತಗೊಂಡಿದೆ. ಈ ನಿರ್ಧಾರನ್ನು ಮರುಪರಿಶೀಲಿಸುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಲಾಗುವುದು ಎಂದು ಪಾಸ್ವಾನ್ ತಿಳಿಸಿದ್ದಾರೆ.

ಎನ್‌ಡಿಎ ಮೈತ್ರಿಕೂಟದ ಮಿತ್ರಪಕ್ಷ ಲೋಕಜನಶಕ್ತಿ ಪಕ್ಷದ ಅಧ್ಯಕ್ಷರಾಗಿರುವ ರಾಮ್‌ವಿಲಾಸ್ ಪಾಸ್ವಾನ್ ದಲಿತರ ವಿಷಯದ ಬಗ್ಗೆ ಸರಕಾರದ ಪರ ಹೇಳಿಕೆ ನೀಡುವ ಪ್ರಮುಖ ವಕ್ತಾರರಾಗಿದ್ದಾರೆ. ಅಗತ್ಯಬಿದ್ದರೆ ಸರಕಾರ ಸುಗ್ರೀವಾಜ್ಞೆ ಜಾರಿಗೊಳಿಸಲು ಸರಕಾರ ಹಿಂಜರಿಯದು ಎಂದು ಈ ಹಿಂದೆ ಪಾಸ್ವಾನ್ ಹೇಳಿಕೆ ನೀಡಿರುವುದನ್ನು ಇಲ್ಲಿ ಉಲ್ಲೇಖಿಸಬಹುದು. ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯ ಕುರಿತು ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಮರುಪರಿಶೀಲಿಸಲು ಕೋರಿ ಈಗಾಗಲೇ ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಅಲ್ಲದೆ ವಿವಿಗಳಲ್ಲಿ ಬೋಧಕರ ಹುದ್ದೆಗೆ ಮೀಸಲಾತಿಯ ನಿಯಮವನ್ನು ಬದಲಾಯಿಸುವಂತೆ ಯುಜಿಸಿಗೆ ನೀಡಿರುವ ನಿರ್ದೇಶನವನ್ನು ಕೂಡಾ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಪಾಸ್ವಾನ್ ತಿಳಿಸಿದ್ದಾರೆ.

ಗೃಹ ಸಚಿವ ರಾಜನಾಥ್ ಸಿಂಗ್, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಸಚಿವರಾದ ಟಿ.ಸಿ.ಗೆಹ್ಲೋಟ್ ಹಾಗೂ ತಾನು ಸೇರಿದಂತೆ ಕೇಂದ್ರ ಸಚಿವರ ತಂಡವು ಎಸ್ಸಿ/ಎಸ್ಟಿ ವಿಭಾಗದವರಿಗೆ ಸರಕಾರಿ ಉದ್ಯೋಗದ ಬಡ್ತಿಯಲ್ಲಿ ಮೀಸಲಾತಿ ನೀಡಬೇಕೆಂಬ ಮನವಿಯೊಂದಿಗೆ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಬೇಕೆಂಬ ನಿಲುವನ್ನು ಹೊಂದಿದೆ ಎಂದು ಪಾಸ್ವಾನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News