ಯಾವುದೇ ಅಜೆಂಡಾ ಇಲ್ಲದ ಮೋದಿಯ ಚೀನಾ ಪ್ರವಾಸಕ್ಕೆ ಶಿವಸೇನೆ ಟೀಕೆ
ಮುಂಬೈ, ಎ.30: ಯಾವುದೇ ನಿರ್ದಿಷ್ಟ ಕಾರ್ಯಸೂಚಿ(ಅಜೆಂಡಾ) ಇಲ್ಲದೆ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ನಡೆಸಿದ ಚೀನಾ ಪ್ರವಾಸವನ್ನು ಶಿವಸೇನೆ ಟೀಕಿಸಿದೆ. ಈ ರೀತಿಯ ಪ್ರವಾಸದಿಂದ ಏನು ಸಾಧಿಸಿದಂತಾಗಿದೆ ಎಂದು ಪ್ರಶ್ನಿಸಿದೆ. ಪಕ್ಷದ ಮುಖವಾಣಿ ‘ಸಾಮ್ನ’ದಲ್ಲಿ ಬರೆದಿರುವ ಸಂಪಾದಕೀಯದಲ್ಲಿ ಮೋದಿ ಚೀನಾ ಪ್ರವಾಸದ ಬಗ್ಗೆ ಟೀಕಿಸಲಾಗಿದೆ. ಪಾಕ್ ಪ್ರೇರಿತ ಭಯೋತ್ಪಾದನೆ, ಚೀನಾ-ಪಾಕ್ ಆರ್ಥಿಕ ಕಾರಿಡಾರ್, ಅರುಣಾಚಲ ಪ್ರದೇಶದಲ್ಲಿ ಚೀನಾದ ಅತಿಕ್ರಮಣ, ಡೋಕಾ ಲಾ ಪ್ರಕರಣ ಮುಂತಾದ ವಿಷಯಗಳ ಬಗ್ಗೆ ಚೀನಾದ ಅಧ್ಯಕ್ಷರ ಜೊತೆ ಮೋದಿ ಮಾತಾಡಬಹುದಿತ್ತು ಎಂದು ಸಂಪಾದಕೀಯದಲ್ಲಿ ತಿಳಿಸಲಾಗಿದೆ.
ಜವಾಹರಲಾಲ್ ನೆಹರೂರನ್ನು ಸಮಯ ಸಿಕ್ಕಾಗಲೆಲ್ಲಾ ಟೀಕಿಸುತ್ತಿರುವ ಮೋದಿ, ಶಾಂತಿಯುತ ಸಹಬಾಳ್ವೆಗಾಗಿ ನೆಹರೂ ಮುಂದಿರಿಸಿದ ಪಂಚಶೀಲ ತತ್ವವನ್ನು ಸ್ವೀಕರಿಸಿದ್ದಾರೆಯೇ ಎಂಬ ಸಂಶಯ ಮೂಡಿದೆ. ಪ್ರಧಾನಿ ನೆಹರೂ ಚೀನಾದ ಜೊತೆ ಮೈತ್ರಿಯ ಹಸ್ತ ಚಾಚಿದರು, ಆದರೆ ಅದು ಭಾರತಕ್ಕೆ ದುಬಾರಿಯಾಗಿ ಪರಿಣಮಿಸಿತು. ಈಗ ಮೋದಿ ಕೂಡಾ ಇದೇ ರೀತಿ ಚೀನಾದ ಜೊತೆ ದೋಸ್ತಿಗೆ ಮುಂದಾಗಿದ್ದಾರೆ. ಪಂಚಶೀಲ ತತ್ವದ ಬೆಂಬಲಿಗರಾಗಿದ್ದಾರೆ. ಈ ಕುರಿತು ಆರೆಸ್ಸೆಸ್ ಏನು ಹೇಳುತ್ತದೆ ಎಂದು ಶಿವಸೇನೆ ಪ್ರಶ್ನಿಸಿದೆ.