ಜಮ್ಮು ಕಾಶ್ಮೀರ : ಎಂಟು ನೂತನ ಸಚಿವರ ಸೇರ್ಪಡೆ
ಶ್ರೀನಗರ, ಎ.30: ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಸಚಿವ ಸಂಪುಟವನ್ನು ಪುನರ್‌ರಚಿಸಿದ್ದು ಎಂಟು ನೂತನ ಸಚಿವರನ್ನು ಸೇರ್ಪಡೆಗೊಳಿಸಲಾಗಿದೆ.
ಬಿಜೆಪಿಯ ಆರು, ಪಿಡಿಪಿಯ ಇಬ್ಬರು ಸಚಿವರು ಸೇರ್ಪಡೆಗೊಂಡಿದ್ದು ರಾಜ್ಯಪಾಲ ಎನ್.ಎನ್.ವೋರಾ ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದರು. ಇದುವರೆಗೆ ಸಂಪುಟದಲ್ಲಿ ಬಿಜೆಪಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿತ್ತು. ಹಾಲಿ ಸಂಪುಟದಲ್ಲಿ ಉಪಮುಖ್ಯಮಂತ್ರಿ ಸ್ಥಾನವನ್ನು ತ್ಯಜಿಸಿರುವ ಬಿಜೆಪಿ, ನಾಲ್ವರು ನೂತನ ಸಚಿವರನ್ನು ಸೇರ್ಪಡೆಗೊಳಿಸಿದೆ ಹಾಗೂ ಒಬ್ಬ ಸಚಿವರನ್ನು ಕ್ಯಾಬಿನೆಟ್ ದರ್ಜೆಗೆ ಬಡ್ತಿಗೊಳಿಸಲಾಗಿದೆ. ವಿಧಾನಸಭೆಯ ಸ್ಪೀಕರ್ ಬಿಜೆಪಿಯ ಕವೀಂದರ್ ಗುಪ್ತ, ಬಿಜೆಪಿ ರಾಜ್ಯಾಧ್ಯಕ್ಷ ಸತ್ ಶರ್ಮ, ಸುನಿಲ್ ಕುಮಾರ್ ಶರ್ಮ, ರಾಜೀವ್ ಜಸ್ರೋಟಿಯ, ಡಿ.ಕೆ.ಮನ್ಯಾಲ್ ಮತ್ತು ಶಕ್ತಿ ರಾಜ್, ಪಿಡಿಪಿಯ ಮುಹಮ್ಮದ್ ಖಲೀಲ್ ಹಾಗೂ ಮುಹಮ್ಮದ್ ಅಶ್ರಫ್ ಮೀರ್ ನೂತನವಾಗಿ ಸೇರ್ಪಡೆಗೊಂಡಿರುವ ಸಚಿವರಾಗಿದ್ದಾರೆ.
ಮುಖ್ಯಮಂತ್ರಿ ಮೆಹಬೂಬ ಮುಫ್ತಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ ಮಾಧವ್, ಬಿಜೆಪಿಯ ಜಮ್ಮು ಕಾಶ್ಮೀರದ ಉಸ್ತುವಾರಿ ಅವಿನಾಶ್ ರೈ ಖನ್ನಾ, ನಿರ್ಗಮಿತ ಉಪಮುಖ್ಯಮಂತ್ರಿ ನಿರ್ಮಲ್ ಸಿಂಗ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.